
ಯಾವುದೇ ಪದವಿ, ಕೆಲಸದ ಅನುಭವ ಅಥವಾ ಬ್ಯಾಂಕ್ ಖಾತೆಯೂ ಇಲ್ಲದಿದ್ದ 17 ವರ್ಷದ ಯುವಕನೊಬ್ಬ, ರಾತ್ರಿ ವೇಳೆ ಖ್ಯಾತ ಉದ್ಯಮಿ ಹಾಗೂ ಪಾಡ್‌ಕ್ಯಾಸ್ಟರ್‌ಗೆ ಕಳುಹಿಸಿದ ಒಂದೇ ಒಂದು ಇನ್‌ಸ್ಟಾಗ್ರಾಮ್/ಟ್ವಿಟರ್ ಮೆಸೇಜ್ (DM) ಆತನ ಸಂಪೂರ್ಣ ವೃತ್ತಿಜೀವನದ ದಾರಿಯನ್ನೇ ಬದಲಾಯಿಸಿದೆ. ಹದಿಹರೆಯದಲ್ಲಿ ಸಿಕ್ಕ ಆ ಸಣ್ಣ ಅವಕಾಶದಿಂದ ಆರಂಭಗೊಂಡ ಪ್ರಯಾಣವು, 45ಕ್ಕೂ ಹೆಚ್ಚು ಸಂಸ್ಥಾಪಕರ (Founders) ಜೊತೆ ಕೆಲಸ ಮಾಡಲು ಕಾರಣವಾಗಿ, 22ನೇ ವಯಸ್ಸಿಗೆ 1 ಕೋಟಿ ರೂಪಾಯಿ ಗಳಿಸುವ ಸಾಧನೆಗೆ ಹಾದಿ ಮಾಡಿಕೊಟ್ಟಿದೆ.
2021 ರಲ್ಲಿ ಆದಿತ್ಯ ಬನ್ಸಾಲ್ ಎಂಬ ಯುವಕ ಜೆಇಇ (JEE) ಎಂಜಿನಿಯರಿಂಗ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಕೋವಿಡ್ ಕಾರಣದಿಂದ ಪರೀಕ್ಷೆಗಳು ಅಕ್ಟೋಬರ್‌ಗೆ ಮುಂದೂಡಲ್ಪಟ್ಟವು. ಕೇವಲ ಓದಿ, ಎಂಜಿನಿಯರ್ ಆಗಿ ಯಾವುದೋ ಒಂದು ಕೆಲಸಕ್ಕೆ ಸೇರುವುದಷ್ಟೇ ತನ್ನ ನಿಜವಾದ ಗುರಿಯೇ ಎಂದು ಬನ್ಸಾಲ್ ತಮ್ಮನ್ನೇ ಪ್ರಶ್ನಿಸಿಕೊಳ್ಳಲು ಪ್ರಾರಂಭಿಸಿದರು. ಈ ವೇಳೆ ಆನ್‌ಲೈನ್ ಮೂಲಕ ಹಣ ಸಂಪಾದಿಸುವ ದಾರಿಗಳನ್ನು ಹುಡುಕಲು ಆರಂಭಿಸಿದರು. ಗ್ರಾಫಿಕ್ ಡಿಸೈನಿಂಗ್, ವೆಬ್‌ಸೈಟ್ ಡೆವಲಪ್‌ಮೆಂಟ್ ಸೇರಿದಂತೆ ಹಲವು ಕೆಲಸಗಳನ್ನು ಪ್ರಯತ್ನಿಸಿದರೂ ಎಲ್ಲದರಲ್ಲೂ ವಿಫಲರಾದರು. "ನಾನು ಹಣ ಗಳಿಸಲು ಏನೆಲ್ಲಾ ಪ್ರಯತ್ನಿಸಿದರೂ ಎಲ್ಲವೂ ವ್ಯರ್ಥವಾಯ್ತು" ಎಂದು ಬನ್ಸಾಲ್ ನಂತರ ನೆನಪಿಸಿಕೊಂಡಿದ್ದಾರೆ.
ಒಂದು ರಾತ್ರಿ, ಖ್ಯಾತ ಉದ್ಯಮಿ ಹಾಗೂ ಪಾಡ್‌ಕ್ಯಾಸ್ಟರ್ ರಾಜ್ ಶಮಾನಿ ಅವರು ಆನ್‌ಲೈನ್ ಹಣ ಸಂಪಾದನೆಯ ಮಾರ್ಗಗಳ ಕುರಿತು ಮಾತನಾಡುತ್ತಿದ್ದ ವೀಡಿಯೊವನ್ನು ಬನ್ಸಾಲ್ ವೀಕ್ಷಿಸಿದರು. ಅದನ್ನು ಸುಮ್ಮನೆ ನೋಡಿ ಮುಂದುವರಿಯುವ ಬದಲು, ಬನ್ಸಾಲ್ ಆ ವೀಡಿಯೊದಲ್ಲಿದ್ದ ಮುಖ್ಯ ವಿಷಯಗಳನ್ನು ಗೂಗಲ್ ಡಾಕ್‌ನಲ್ಲಿ ಗಂಟೆಗಟ್ಟಲೆ ಬರೆದು ಟ್ವಿಟರ್ ಥ್ರೆಡ್ (Twitter Thread) ರೂಪಕ್ಕೆ ತಂದರು. ರಾತ್ರಿ 10:41 ಕ್ಕೆ ಅದನ್ನು ನೇರವಾಗಿ ರಾಜ್ ಶಮಾನಿ ಅವರಿಗೆ ಮೆಸೇಜ್ (DM) ಮೂಲಕ ಕಳುಹಿಸಿದರು. ಪ್ರತ್ಯುತ್ತರ ಬರುತ್ತದೆ ಎಂಬ ಯಾವುದೇ ನಿರೀಕ್ಷೆ ಅವರಿಗಿರಲಿಲ್ಲ.
ಅಚ್ಚರಿಯೆಂದರೆ, ಅದೇ ರಾತ್ರಿ ಬೆಳಗಿನ ಜಾವ 3:53 ಕ್ಕೆ ರಾಜ್ ಶಮಾನಿ ಅವರಿಂದ ಉತ್ತರ ಬಂದಿತ್ತು. "ನಾನು ಇದನ್ನು ಅಪ್‌ಲೋಡ್ ಮಾಡುತ್ತೇನೆ. ಇದು ಚೆನ್ನಾಗಿ ಕೆಲಸ ಮಾಡಿದರೆ, ನನ್ನ ಟ್ವಿಟರ್ ಥ್ರೆಡ್ ಬರೆಯಲು ನಿನ್ನನ್ನೇ ನೇಮಿಸಿಕೊಳ್ಳುತ್ತೇನೆ, ಓಕೆನಾ?" ಎಂದು ಶಮಾನಿ ಮೆಸೇಜ್ ಮಾಡಿದ್ದರು.
ಶಮಾನಿ ಪೋಸ್ಟ್ ಮಾಡಿದ ಆ ಟ್ವಿಟರ್ ಥ್ರೆಡ್ ಸುಮಾರು 1,200 ಲೈಕ್‌ಗಳನ್ನು ಪಡೆಯಿತು. ಬನ್ಸಾಲ್ ಅವರಿಗೆ ಬರವಣಿಗೆಯ ಅನುಭವವಿಲ್ಲದಿದ್ದರೂ, 17 ವರ್ಷದ ಹುಡುಗನ ಮೇಲಿದ್ದ ನಂಬಿಕೆಯಿಂದ ಶಮಾನಿ ಅವರಿಗೆ ಕೆಲಸ ನೀಡಿದರು. ಬನ್ಸಾಲ್ ಶಮಾನಿ ಅವರಿಗಾಗಿ 5-6 ಟ್ವಿಟರ್ ಥ್ರೆಡ್‌ಗಳನ್ನು ಬರೆದರು. ಆ ಸಮಯದಲ್ಲಿ ಬನ್ಸಾಲ್ ಅವರಿಗೆ ಸ್ವಂತ ಬ್ಯಾಂಕ್ ಖಾತೆಯೂ ಇರದ ಕಾರಣ, ಶಮಾನಿ ಅವರಿಗೆ ಅಮೆಜಾನ್ ಗಿಫ್ಟ್ ಕಾರ್ಡ್‌ಗಳ (Amazon Gift Cards) ಮೂಲಕ ಕೂಲಿ ಹಣ ಪಾವತಿಸುತ್ತಿದ್ದರು!
ರಾಜ್ ಶಮಾನಿ ಅವರು ಬನ್ಸಾಲ್ ಅವರನ್ನು ಕೇವಲ ಕೆಲಸದಾಳುವಾಗಿ ನೋಡದೆ ತಮ್ಮ ಸ್ವಂತ ತಂಡದ ಭಾಗವಾಗಿ ನಡೆಸಿಕೊಂಡರು. ಆಲೋಚನೆಗಳನ್ನು ಹಂಚಿಕೊಳ್ಳುವುದು ಮತ್ತು ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವುದರ ಮೂಲಕ ಪ್ರೋತ್ಸಾಹಿಸಿದರು. ತದನಂತರ ಶಮಾನಿ ಅವರ ಕಂಪನಿಗೆ ಪೂರ್ಣಾವಧಿ ತಂಡದ ಅಗತ್ಯ ಬಂದಾಗ ಈ ಕೆಲಸ ಕೊನೆಗೊಂಡರೂ, ಶಮಾನಿ ನೀಡಿದ ಶಿಫಾರಸು ಪತ್ರ (Testimonial) ಬನ್ಸಾಲ್ ಅವರಿಗೆ ಹೊಸ ಕ್ಲೈಂಟ್‌ಗಳನ್ನು ಪಡೆಯಲು ಸಹಾಯ ಮಾಡಿತು. ಅಲ್ಲಿಂದ ಮುಂದೆ ಬನ್ಸಾಲ್ ಹಿಂತಿರುಗಿ ನೋಡಲಿಲ್ಲ. ಸುಮಾರು 45ಕ್ಕೂ ಹೆಚ್ಚು ಕಂಪನಿಗಳ ಸಂಸ್ಥಾಪಕರ ಜೊತೆ ಬರವಣಿಗೆಯ ಕೆಲಸ ಮಾಡಿ, 22ನೇ ವಯಸ್ಸಿಗೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಪಾದಿಸಿದರು.
ಸಮಾಜಿಕ ಜಾಲತಾಣಗಳಲ್ಲಿ ಈ ಕಥೆ ಹಂಚಿಕೊಂಡ ಬನ್ಸಾಲ್, "ನನ್ನ ಬಳಿ ಪದವಿ ಇರಲಿಲ್ಲ, ಅನುಭವ ಇರಲಿಲ್ಲ. ಆದರೂ ರಾಜ್ ಶಮಾನಿ ನನ್ನ ಮೇಲೆ ನಂಬಿಕೆ ಇಟ್ಟರು. ಆ ತಡರಾತ್ರಿಯ ಒಂದು ಮೆಸೇಜ್ ನನ್ನ ಇಡೀ ಜೀವನವನ್ನೇ ಬದಲಾಯಿಸಿತು" ಎಂದು ಧನ್ಯವಾದ ತಿಳಿಸಿದ್ದಾರೆ. ಈ ಕಥೆಗೆ ನೆಟ್ಟಿಗರಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, "ಜೀವನದಲ್ಲಿ ಸಿಗುವ ಒಂದೇ ಒಂದು ಸರಿಯಾದ ಅವಕಾಶ ವ್ಯಕ್ತಿಯ ದಿಕ್ಕನ್ನೇ ಬದಲಾಯಿಸಬಲ್ಲದು" ಎಂದು ಪ್ರತಿಕ್ರಿಯಿಸಿದ್ದಾರೆ.