ದೇವಾಲಯದಲ್ಲಿ 12 ಅಡಿ ನಾಗರ ಪ್ರತ್ಯಕ್ಷ- ಡೋಲು ಬಾರಿಸಿದಾಗ ನಡೆದ ಪವಾಡ ನೋಡಿ ಪುಳಕಿತಗೊಂಡ ಭಕ್ತರು

Published : Sep 10, 2026, 07:45 PM IST
King Cobra

ಸಾರಾಂಶ

ಒಡಿಶಾದ ಗಂಜಾಂ ಜಿಲ್ಲೆಯ ರತ್ನೇಯಿ ದೇವಾಲಯದಲ್ಲಿ, ಸಂಜೆಯ ಆರತಿ ವೇಳೆ 12 ಅಡಿ ಉದ್ದದ ರಾಜನಾಗವೊಂದು ಪ್ರತ್ಯಕ್ಷವಾಗಿ ಎಲ್ಲರನ್ನೂ ದಂಗಾಗಿಸಿತು. ಯಾರಿಗೂ ಹಾನಿ ಮಾಡದೆ, ಡೋಲಿನ ಶಬ್ದಕ್ಕೆ ತಲೆಯಾಡಿಸುತ್ತಾ ಶಾಂತವಾಗಿ ಕುಳಿತಿದ್ದ ಈ ಹಾವನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿ ಕಾಡಿಗೆ ಬಿಟ್ಟರು.

ಆಸ್ತಿಕತೆ, ನಾಸ್ತಿಕತೆ ಏನೇ ಇರಲಿ. ಯಾರ ಭಾವನೆ ಏನೇ ಇರಲಿ. ಆದರೆ ಈ ಪ್ರಕೃತಿಯ ಸೃಷ್ಟಿಯ ಮುಂದೆ ಎಲ್ಲವೂ ಶೂನ್ಯ. ಕೆಲವೊಮ್ಮೆ ನಡೆಯುವ ಪವಾಡಗಳು ಎಂಥವರನ್ನೂ ದಂಗಾಗಿಸುವುದು ಇದೆ. ಧಾರ್ಮಿಕ ಭಾವನೆಗಳು ಎಂದಾಕ್ಷಣ ಕೆಲವರ ಮೈಮನಗಳೆಲ್ಲಾ ಉರಿದು ಹೋಗುತ್ತವೆ, ಹಿಂದೂ ದೇವತೆಗಳ ಬಗ್ಗೆ ಮಾತನಾಡಿದರೆ ಸಾಕು, ಕೆಲವು ಹಿಂದೂಗಳೇ ಹಾಸ್ಯ ಮಾಡುವುದು ಇದೆ. ಆದರೆ, ಯಾರ ಊಹೆಗೂ ನಿಲುಕದ, ವಿಜ್ಞಾನಕ್ಕೂ ಸವಾಲು ಎನ್ನಿಸುವ ಹಲವಾರು ಧಾರ್ಮಿಕ ಘಟನೆಗಳು ನಮ್ಮ ಕಣ್ಣೆದುರಿಗೇ ನಡೆಯುವುದು ಉಂಟು. ಮೊನ್ನೆಯಷ್ಟೇ ಮಧ್ಯಪ್ರದೇಶದ ರಸ್ತೆ ವಿಸ್ತರಣೆ ಸಮಯದಲ್ಲಿ, ಡಾ.ಹನುಮಾನ್ ಎಂದೇ ಹೆಸರಾಗಿರುವ ಖಡೇ ಹನುಮಾನ್ ದೇವಾಲಯದ ಮೂಲಮೂರ್ತಿಯನ್ನು ಸ್ಥಳಾಂತರ ಮಾಡುವಾಗ ಮೂರ್ತಿ ಅಲುಗಾಡದೇ ನಿಂತಿರುವುದು ಪವಾಡವೆಂದೇ ಹೇಳಲಾಗುತ್ತಿದೆ. ದೇವರ ಅಸ್ತಿತ್ವವನ್ನೇ ಪ್ರಶ್ನಿಸುವವರಿಗೆ ಇದು ಒಂದು ಸವಾಲಾಗಿಯೇ ಉಳಿದಿದ್ದು, ಸದ್ಯ ಅವರೆಲ್ಲಾ ಮೌನವಾಗಿದ್ದಾರೆ.

ಅಲ್ಲಿ ನಡೆಯಿತು ಪವಾಡ

ಇದೀಗ ಅಂಥದ್ದೇ ಇನ್ನೊಂದು ಪವಾಡ, ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿಯ ದೇವಾಲಯವೊಂದರ ಅರ್ಚಕರು ಸಂಜೆಯ ಆರತಿಗಾಗಿ ಬಾಗಿಲು ತೆರೆದಾಗ, ತಮ್ಮ ಎದುರೇ ಹೆಡೆ ಎತ್ತಿ ನಿಂತಿದ್ದ 12 ಅಡಿ ಉದ್ದದ ನಾಗರ ಹಾವನ್ನು ನೋಡಿ ದಂಗಾಗಿ ಹೋದರು. ಆದರೆ ಕುತೂಹಲ ಎಂದರೆ ಈ ಹಾವು ಅವರಿಗೆ ಏನೂ ಮಾಡಲಿಲ್ಲ. ಬದಲಿಗೆ ಸೈಲೆಂಟ್‌ ಆಗಿ ದೇವಾಲಯದಲ್ಲಿ ದೇವರ ಎದುರು ಹೆಡೆ ಎತ್ತಿ ನಿಂತಿದ್ದು, ಅದರ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಈ ಘಟನೆಯು ಗಂಜಾಂ ಜಿಲ್ಲೆಯ ರತ್ನೇಯಿ ದೇವಾಲಯದಲ್ಲಿ ನಡೆದಿದೆ. ಕಳೆದ ಬುಧವಾರ ಸಂಜೆ, ದೈನಂದಿನ ಆರತಿ ಮತ್ತು ಪ್ರಾರ್ಥನೆಗೆ ಸಿದ್ಧತೆ ನಡೆಸಲು ಅರ್ಚಕರು ದೇವಾಲಯಕ್ಕೆ ಬಂದರು. ಬಾಗಿಲು ತೆರೆದ ತಕ್ಷಣ, ದೇವಾಲಯದ ಒಳಗೆ ಬೃಹತ್ ರಾಜನಾಗವೊಂದು ಇರುವುದನ್ನು ಕಂಡು ಅವರು ಆಘಾತಕ್ಕೊಳಗಾದರು. ತಕ್ಷಣವೇ ಸಮಯಪ್ರಜ್ಞೆ ಮೆರೆದ ಅರ್ಚಕರು ಹಿಂದಕ್ಕೆ ಸರಿದು, ದೇವಾಲಯದ ಆವರಣದೊಳಗೆ ಪ್ರವೇಶಿಸದೆ ಚಿಖಿತಿ ಅರಣ್ಯ ಇಲಾಖೆಗೆ ವಿಷಯ ತಿಳಿಸಿದರು.

ಮುಂದೇನಾಯ್ತು?

ಅರಣ್ಯ ಇಲಾಖೆಯ ಸೂಚನೆಯ ಮೇರೆಗೆ, ಸ್ಥಳೀಯ 'ಸ್ನೇಕ್ ಹೆಲ್ಪ್‌ಲೈನ್' (ಹಾವು ರಕ್ಷಣಾ ತಂಡ) ತಂಡವು ಸ್ಥಳಕ್ಕೆ ಆಗಮಿಸಿತು. ಈ ರಕ್ಷಣಾ ಕಾರ್ಯಾಚರಣೆಯು ಸುಲಭವಾಗಿರಲಿಲ್ಲ ಮತ್ತು ಪೂರ್ಣ ಒಂದು ಗಂಟೆಗಳ ಕಾಲ ನಡೆಯಿತು. ಆದರೆ ಅಲ್ಲಿಯವರೆಗೂ ಹಾವು ಯಾರಿಗೂ ಏನೂ ಮಾಡಲಿಲ್ಲ. ಆದರೆ ಕುತೂಹಲ ಎನ್ನುವ ಘಟನೆಯೊಂದು ಅಲ್ಲಿ ನಡೆಯಿತು. ಅದೇನೆಂದರೆ, ಅಲ್ಲಿದ್ದ ಅರ್ಚಕರು ಹಾವನ್ನು ಓಡಿಸುವುದಕ್ಕಾಗಿ ದೇವಾಲಯದಲ್ಲಿ ಡೋಲು ಬಾರಿಸಿದರು. ಆಗ ಆ ಹಾವು ಹೆದರಲಿಲ್ಲ. ಬದಲಿಗೆ ಆ ಶಬ್ದವನ್ನು ತದೇಕಚಿತ್ತದಿಂದ ಆಲಿಸುತ್ತಾ, ಸಂಪೂರ್ಣವಾಗಿ ಶಾಂತಗೊಂಡು ತಲೆಯಾಡಿಸುತ್ತಿತ್ತು. ಈ ಅಚ್ಚರಿಯನ್ನು ಕಂಡು ಅಲ್ಲಿ ಒಂದು ಕ್ಷಣ ಭಕ್ತಿ ಭಾವದ ವಾತಾವರಣ ಸೃಷ್ಟಿಯಾಗಿದೆ. ಕೊನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಆ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ.

PREV
Read more Articles on
click me!

Recommended Stories

ತಾಯಿಯ ಸ್ಥಾನವನ್ನು ಯಾರಿಂದಲೂ ತುಂಬಲು ಸಾಧ್ಯವಿಲ್ಲ... ಕಣ್ಣೀರು ತರಿಸುತ್ತೆ ಈ ಮುಗ್ಧ ಮಗುವಿನ ವೀಡಿಯೋ!
80s Photo Trend: 80ರ ದಶಕದ ರೆಟ್ರೋ ಟ್ರೆಂಡ್ ಮಧ್ಯೆ ಅಸಲಿ ಫೋಟೋ ಹಂಚಿಕೊಂಡ ತರೂರ್, ರೇಣುಕಾ ಚೌಧರಿ, ನೆಟಿಜನ್ ಫಿದಾ