
ಲಂಡನ್: ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬ ಮಾತನ್ನು ಬ್ರಿಟನ್‌ನ 97 ವರ್ಷದ ಅಜ್ಜಿ ಬೆಟ್ಟಿ ಬ್ರೊಮೇಜ್ (Betty Bromage) ನಿಜವಾಗಿಸಿದ್ದಾರೆ. ವಿಮಾನದ ರೆಕ್ಕೆಯ ಮೇಲೆ ನಿಂತು ಸಾಹಸ ಮಾಡುವ (Wing Walking) ಮೂಲಕ ಇವರು ವಿಶ್ವದ ಅತ್ಯಂತ ಹಿರಿಯ ವಯಸ್ಸಿನ 'ಫೀಮೇಲ್ ವಿಂಗ್ ವಾಕರ್' ಎಂಬ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ನಿರ್ಮಿಸಿದ್ದಾರೆ.
ಚೆಲ್ಟೆನ್‌ಹ್ಯಾಮ್‌ನ ನಿವಾಸಿಯಾಗಿರುವ ಬೆಟ್ಟಿ ನಾಲ್ಕು ವರ್ಷಗಳ ಹಿಂದೆ ತಾವೇ ನಿರ್ಮಿಸಿದ್ದ ದಾಖಲೆಯನ್ನು ಈಗ ಮುರಿದಿದ್ದಾರೆ. 87ನೇ ವಯಸ್ಸಿನಿಂದ ಈ ಸಾಹಸವನ್ನು ಪ್ರಾರಂಭಿಸಿದ ಬೆಟ್ಟಿ, ಇದುವರೆಗೆ ಆರು ಬಾರಿ ವಿಮಾನದ ರೆಕ್ಕೆಯ ಮೇಲೆ ನಿಂತು ಬಾನಂಗಳದಲ್ಲಿ ಹಾರಾಟ ನಡೆಸಿದ್ದಾರೆ. ವಿಶೇಷವೆಂದರೆ 2025ರ ಆರಂಭದಲ್ಲಿ ಬೆಟ್ಟಿ ಅವರಿಗೆ ಲಕ್ವ (Stroke) ಸಂಭವಿಸಿತ್ತು. ಇದರಿಂದಾಗಿ ಅವರ ಮಾತಿನ ಮೇಲೆ ಸ್ವಲ್ಪ ಪರಿಣಾಮ ಬೀರಿದೆಯಾದರೂ ಅವರ ಸಾಹಸದ ಹಂಬಲ ಮಾತ್ರ ಕುಗ್ಗಿಲ್ಲ. ತಾವು ಅನಾರೋಗ್ಯಕ್ಕೆ ಒಳಗಾದಾಗ ಚೆಲ್ಟೆನ್‌ಹ್ಯಾಮ್ ಜನರಲ್ ಆಸ್ಪತ್ರೆಯ ಸ್ಟ್ರೋಕ್ ಯುನಿಟ್‌ನ ಸಿಬ್ಬಂದಿ ನೀಡಿದ ಆರೈಕೆಗೆ ಕೃತಜ್ಞತೆ ಸಲ್ಲಿಸಲು ಬೆಟ್ಟಿ ನಿರ್ಧರಿಸಿದ್ದರು. ಇದೇ ಕಾರಣಕ್ಕೆ ಅವರು ಈ ಸಾಹಸದ ಮೂಲಕ ಆಸ್ಪತ್ರೆಯ ಅಭಿವೃದ್ಧಿಗಾಗಿ ಹಣ ಸಂಗ್ರಹಿಸಿದ್ದಾರೆ.
ತಮ್ಮ ಈ ಸಾಹಸದ ಬಗ್ಗೆ ಮಾತನಾಡಿರುವ ಬೆಟ್ಟಿ ಬ್ರೊಮೇಜ್, ಬದುಕಿನಲ್ಲಿ ಏನೂ ಮಾಡದೆ ಸುಮ್ಮನೆ ಕುಳಿತರೆ ಬೇಸರವಾಗುತ್ತದೆ. ನನಗೆ ಈಗ ಕಾರು ಚಲಾಯಿಸಲು ಸಾಧ್ಯವಿಲ್ಲ, ಕಣ್ಣು ಕೂಡ ಅಷ್ಟೊಂದು ಸ್ಪಷ್ಟವಾಗಿ ಕಾಣಿಸುವುದಿಲ್ಲ. ಹಾಗಂತ ಮನೆಯಲ್ಲಿ ಕುಳಿತು ಕೊರಗುವ ಬದಲು, ನನಗೆ ಸಾಧ್ಯವಾಗುವ ಕೆಲಸಗಳನ್ನು ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಹಿಂದೆ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಬೆಟ್ಟಿ ಅವರಿಗೆ ಆಸ್ಪತ್ರೆಯ ಗೋಡೆಯ ಮೇಲಿದ್ದ ಒಂದು ಸಾಲು ಬಹಳ ಸ್ಫೂರ್ತಿ ನೀಡಿದೆಯಂತೆ. ನಾವು ಈ ಪ್ರಪಂಚದಲ್ಲಿ ಬದುಕುವುದು ಒಮ್ಮೆ ಮಾತ್ರ. ಹಾಗಾಗಿ ನಾವು ಮಾಡಬಹುದಾದ ಯಾವುದೇ ಒಳ್ಳೆಯ ಕೆಲಸವಿರಲಿ ಅಥವಾ ತೋರಿಸಬಹುದಾದ ಪ್ರೀತಿ-ಕರುಣೆಯಿರಲಿ, ಅದನ್ನು ಈಗಲೇ ಮಾಡಬೇಕು. ಅದನ್ನು ಮುಂದೂಡಬಾರದು, ಏಕೆಂದರೆ ಈ ಹಾದಿಯಲ್ಲಿ ನಾವು ಮತ್ತೆ ಬರುವುದಿಲ್ಲ ಎಂಬ ಸಾಲುಗಳೇ ಅವರನ್ನು ಸಮಾಜಸೇವೆಯತ್ತ ಪ್ರೇರೇಪಿಸಿವೆ. 97ನೇ ವಯಸ್ಸಿನಲ್ಲಿ ಗಿನ್ನೆಸ್ ದಾಖಲೆ ಬರೆದಿರುವ ಬೆಟ್ಟಿ, ಈಗಲೇ ತಮ್ಮ 100ನೇ ಹುಟ್ಟುಹಬ್ಬಕ್ಕೆ ಏನಾದರೂ ವಿಶೇಷ ಸಾಹಸ ಮಾಡಲು ಸಜ್ಜಾಗುತ್ತಿದ್ದಾರೆ. ಇವರ ಈ ಅಪ್ರತಿಮ ಸಾಹಸ ಮತ್ತು ಬದುಕಿನ ಬಗ್ಗೆ ಇರುವ ಉತ್ಸಾಹ ಇಡೀ ಜಗತ್ತಿಗೆ ಸ್ಫೂರ್ತಿಯಾಗಿದೆ.
A 97-year-old woman broke her own wing-walking record by standing on the wing of a flying plane.
Betty Bromage completed the stunt to raise money for a hospital in England. pic.twitter.com/akSx9ZIdIg— NO CONTEXT HUMANS (@HumansNoContext) August 6, 2026