
ಲೂಸಿಯಾನಾ (ಅಮೆರಿಕ): ಕೆರೆಯಲ್ಲಿ ಈಜಲು ಹೋಗಿದ್ದ ಎಂಟು ವರ್ಷದ ಪುಟಾಣಿ ಬಾಲಕಿಯೊಬ್ಬಳು ಅತೀ ಅಪರೂಪದ ಹಾಗೂ ಭೀಕರ 'ಮಿದುಳು ತಿನ್ನುವ ಅಮೀಬಾ' (Brain-eating amoeba) ಸೋಂಕಿಗೆ ಬಲಿಯಾದ ಘಟನೆ ಅಮೆರಿಕದ ಲೂಸಿಯಾನಾದಲ್ಲಿ ನಡೆದಿದೆ.
ಲಿಲಿಯನ್ ಸ್ಮಾರ್ಟ್ ಎಂಬ ಬಾಲಕಿ ಮೃತಪಟ್ಟ ದುರ್ದೈವಿ. ವಿಶೇಷವೆಂದರೆ ಶನಿವಾರ ಆಕೆಯ 8ನೇ ವರ್ಷದ ಹುಟ್ಟುಹಬ್ಬವಿತ್ತು. ತನ್ನ ಜನ್ಮದಿನವನ್ನು ಆಚರಿಸಿಕೊಂಡ ಮರುದಿನವೇ ಆಕೆ ಮೃತಪಟ್ಟಿರುವುದು ಕುಟುಂಬದವರನ್ನು ತೀವ್ರ ಶೋಕಕ್ಕೀಡು ಮಾಡಿದೆ.
ಆಗಸ್ಟ್ 15ರಂದು ಲಿಲಿಯನ್ ಲೂಸಿಯಾನಾದ ಕ್ಲೈಬೋರ್ನ್ ಕೆರೆಯಲ್ಲಿ ಈಜಲು ಹೋಗಿದ್ದಳು. ಅಲ್ಲಿ ಈಜುವಾಗ ನೀರಿನಲ್ಲಿದ್ದ ನೇಗ್ಲೇರಿಯಾ ಫೌಲೆರಿ (Naegleria fowleri) ಎಂಬ ಅಮೀಬಾ ಆಕೆಯ ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿತ್ತು. ನಂತರ ಅದು ನೇರವಾಗಿ ಮಿದುಳಿಗೆ ದಾಳಿ ಮಾಡಿ ಗಂಭೀರ ಸೋಂಕನ್ನು ಉಂಟುಮಾಡಿದೆ. ಕಳೆದ ಕೆಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಮಿದುಳಿನ ಊತ ಹಾಗೂ ಹಾನಿಯಿಂದಾಗಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ.
ಇದರ ಹೆಸರು ನೇಗ್ಲೇರಿಯಾ ಫೌಲೆರಿ (Naegleria fowleri). ಇದೊಂದು ಏಕಕೋಶಜೀವಿ. ಇದು ಸಾಮಾನ್ಯವಾಗಿ ಕೆರೆ, ನದಿ ಮತ್ತು ಬಿಸಿನೀರಿನ ಬುಗ್ಗೆಗಳಂತಹ ಸಿಹಿನೀರಿನ ಮೂಲಗಳಲ್ಲಿ ವಾಸಿಸುತ್ತದೆ. ಈ ಅಮೀಬಾ ಇರುವ ನೀರಿನಲ್ಲಿ ಈಜುವಾಗ ಅಥವಾ ಮುಳುಗಿದಾಗ ಅದು ಮೂಗಿನ ಮೂಲಕ ದೇಹ ಸೇರುತ್ತದೆ. ಅಲ್ಲಿಂದ ನರಗಳ ಮೂಲಕ ಮಿದುಳಿಗೆ ತಲುಪಿ, ಮಿದುಳಿನ ಕೋಶಗಳನ್ನು ನಾಶಪಡಿಸಲು ಆರಂಭಿಸುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ 'ಪ್ರೈಮರಿ ಅಮೀಬಿಕ್ ಮೆನಿಂಗೋಎನ್ಸೆಫಾಲಿಟಿಸ್' (PAM) ಎಂದು ಕರೆಯಲಾಗುತ್ತದೆ.
ಈ ಸೋಂಕು ತಗುಲಿದವರು ಬದುಕುವುದು ತೀರಾ ವಿರಳ. ಸಂಶೋಧನೆಗಳ ಪ್ರಕಾರ ಇದರ ಮರಣ ಪ್ರಮಾಣ ಶೇ. 97ರಷ್ಟಿದೆ. ಅಮೆರಿಕದಾದ್ಯಂತ ಈ ಸೋಂಕು ಬಹಳ ಅಪರೂಪವಾಗಿದ್ದರೂ, ಸಿಹಿನೀರಿನ ಮೂಲಗಳಲ್ಲಿ ಈಜುವಾಗ ಮೂಗಿಗೆ ನೀರು ಹೋಗದಂತೆ 'ನೋಸ್ ಪ್ಲಗ್'ಗಳನ್ನು ಬಳಸಲು ಅಥವಾ ಮುಖವನ್ನು ನೀರಿನೊಳಗೆ ಹಾಕದಂತೆ ಜಾಗರೂಕತೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.