
ಪ್ರಪಂಚ ಸುತ್ತಿ ಕಾಲ್ನಡಿಗೆಯಲ್ಲೇ ಮನೆಗೆ ಮರಳಬೇಕು ಎಂಬ ಕನಸನ್ನು ನನಸು ಮಾಡಲು ಹೊರಟಿದ್ದ ಬ್ರಿಟನ್‌ನ ಕಾರ್ಲ್ ಬುಶ್ಬಿ ಇದೀಗ ಬರೋಬ್ಬರಿ 28 ವರ್ಷಗಳ ಬಳಿಕ ತಾಯ್ನಾಡಿಗೆ ಕಾಲಿಟ್ಟಿದ್ದಾರೆ. 1998ರಲ್ಲಿ ಚಿಲಿಯ ಪಂಟಾ ಅರೆನಾಸ್‌ನಿಂದ ಆರಂಭವಾದ ಅವರ ಸಾಹಸಮಯ ಪಯಣ ಈಗ ಅಂತಿಮ ಹಂತ ತಲುಪಿದೆ.
29ನೇ ವಯಸ್ಸಿನಲ್ಲಿ ಆರಂಭವಾದ ವಿಶ್ವ ಪರ್ಯಟನೆ
ಕಾರ್ಲ್ ಬುಶ್ಬಿ ಮಾಜಿ ಬ್ರಿಟಿಷ್ ಪ್ಯಾರಾಟ್ರೂಪರ್. ಸೇನೆಯಲ್ಲಿದ್ದಾಗಲೇ ಪ್ರಪಂಚವನ್ನು ಕಾಲ್ನಡಿಗೆಯಲ್ಲಿ ಸುತ್ತುವ ಆಲೋಚನೆ ಅವರಿಗೆ ಬಂದಿತ್ತು. 1998ರ ನವೆಂಬರ್ 1ರಂದು ಚಿಲಿಯಿಂದ ಅವರು ತಮ್ಮ ಪ್ರಯಾಣ ಆರಂಭಿಸಿದರು.
ಈ ಸಾಹಸಕ್ಕೆ ಅವರು ‘Goliath Expedition’ ಎಂದು ಹೆಸರಿಟ್ಟರು. ಪ್ರಯಾಣದ ಆರಂಭದಲ್ಲಿ ಅವರ ಮುಂದೆ ಇದ್ದ ಗುರಿ ಸುಮಾರು 50,000 ಕಿ.ಮೀ. ದೂರವನ್ನು ಕ್ರಮಿಸಿ ಇಂಗ್ಲೆಂಡ್‌ನ ಹಲ್‌ನಲ್ಲಿರುವ ತಮ್ಮ ತಾಯಿಯ ಮನೆ ತಲುಪುವುದಾಗಿತ್ತು.
ಎರಡು ಕಠಿಣ ನಿಯಮಗಳು
ಬುಶ್ಬಿ ತಮ್ಮ ಪ್ರಯಾಣಕ್ಕೆ ಎರಡು ನಿಯಮಗಳನ್ನು ಹಾಕಿಕೊಂಡಿದ್ದರು. ಮೊದಲನೆಯದು, ಪ್ರಯಾಣವನ್ನು ಮುಂದುವರಿಸಲು ಯಾವುದೇ ಸಾರಿಗೆ ವ್ಯವಸ್ಥೆ ಬಳಸಬಾರದು. ಎರಡನೆಯದು, ಬ್ರಿಟನ್‌ಗೆ ಕಾಲಿಡುವುದು ಪ್ರಯಾಣ ಸಂಪೂರ್ಣಗೊಂಡ ಬಳಿಕ ಕಾಲ್ನಡಿಗೆಯಲ್ಲೇ ಆಗಬೇಕು.
ಈ ನಿಯಮಗಳನ್ನು ಪಾಲಿಸುವುದರಿಂದ ಅವರ ಪಯಣ ಹಲವು ವರ್ಷಗಳ ಕಾಲ ಮುಂದುವರಿಯಿತು. ವೀಸಾ ಸಮಸ್ಯೆಗಳು, ಆರ್ಥಿಕ ಬಿಕ್ಕಟ್ಟು, ಕೋವಿಡ್-19 ಸಾಂಕ್ರಾಮಿಕ ಮತ್ತು ವಿವಿಧ ದೇಶಗಳ ಗಡಿ ನಿಯಮಗಳು ಕೂಡ ಅವರ ವೇಗಕ್ಕೆ ಅಡ್ಡಿಯಾದವು.
ಅಪಾಯಕಾರಿ ಪ್ರದೇಶಗಳನ್ನೂ ದಾಟಿದ ಸಾಹಸಿ
ಕಾರ್ಲ್ ದಕ್ಷಿಣ ಅಮೆರಿಕಾದ ಹಲವು ದೇಶಗಳ ಮೂಲಕ ನಡೆದು, ಕೊಲಂಬಿಯಾ ಮತ್ತು ಪನಾಮಾ ನಡುವಿನ ಅಪಾಯಕಾರಿ ಡೇರಿಯನ್ ಗ್ಯಾಪ್ ಪ್ರದೇಶವನ್ನೂ ದಾಟಿದರು. ಬಳಿಕ ಉತ್ತರ ಅಮೆರಿಕಾದತ್ತ ಸಾಗಿದರು.
2006ರಲ್ಲಿ ಅಲಾಸ್ಕಾ ಮತ್ತು ರಷ್ಯಾ ನಡುವಿನ ಬೇರಿಂಗ್ ಜಲಸಂಧಿಯನ್ನು ಹಿಮದ ಮೇಲೆ ಕಾಲ್ನಡಿಗೆಯಲ್ಲಿ ದಾಟಿದ ಅಪರೂಪದ ಸಾಧನೆಯನ್ನೂ ಮಾಡಿದ್ದಾರೆ. ನಂತರ ಸೈಬೀರಿಯಾ, ಮಂಗೋಲಿಯಾ, ಚೀನಾ ಸೇರಿದಂತೆ ಏಷ್ಯಾದ ಹಲವು ಭಾಗಗಳನ್ನು ದಾಟಿ ಯುರೋಪ್ ತಲುಪಿದರು. 2024ರಲ್ಲಿ ಕ್ಯಾಸ್ಪಿಯನ್ ಸಮುದ್ರದ ಭಾಗವನ್ನು ಈಜುವ ಮೂಲಕ ದಾಟಿದರು.
ಕೊನೆಗೂ ಬ್ರಿಟನ್ ನೆಲಕ್ಕೆ ಕಾಲಿಟ್ಟ ಕಾರ್ಲ್
ಇತ್ತೀಚೆಗೆ ಫ್ರಾನ್ಸ್‌ನಿಂದ ಇಂಗ್ಲಿಷ್ ಚಾನೆಲ್‌ನ್ನು ಈಜಿಕೊಂಡು ದಾಟಿ ದಕ್ಷಿಣ ಇಂಗ್ಲೆಂಡ್‌ನ ಡೋವರ್ ಸಮೀಪದ ಶೇಕ್ಸ್‌ಪಿಯರ್ ಬೀಚ್‌ಗೆ ಕಾರ್ಲ್ ಬುಶ್ಬಿ ತಲುಪಿದ್ದಾರೆ. ಅಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ಅವರನ್ನು ಸ್ವಾಗತಿಸಿದರು.
ಕಾರ್ಲ್ ಅವರ ಸುಮಾರು 50,000 ಕಿ.ಮೀ ಸಾಹಸ ಇನ್ನೂ ಸಂಪೂರ್ಣ ಮುಗಿದಿಲ್ಲ. ಅವರು ಹಲ್‌ನಲ್ಲಿರುವ ತಮ್ಮ ತಾಯಿಯ ಮನೆ ತಲುಪಬೇಕಿದೆ. ಈ ಅಂತಿಮ ಹಂತವನ್ನು ಪೂರ್ಣಗೊಳಿಸಿದರೆ, 28 ವರ್ಷಗಳ ಹಿಂದೆ ಆರಂಭಿಸಿದ ಅವರ ಐತಿಹಾಸಿಕ ಪಯಣಕ್ಕೆ ಅಧಿಕೃತ ತೆರೆ ಬೀಳಲಿದೆ.