ಹಳ್ಳಿಯ ಮಹಿಳೆಯ ಇಂಗ್ಲಿಷ್’ಗೆ ಪ್ರಿಯಾಂಕಾ ಚೋಪ್ರಾ ಫಿದಾ! ಯಾರು ಈ ವೈರಲ್ ಸೋಶಿಯಲ್ ಮೀಡಿಯಾ ಸ್ಟಾರ್

Published : Oct 07, 2026, 01:55 PM IST
Priyanka Chopra

ಸಾರಾಂಶ

Viral News: ಉತ್ತರ ಪ್ರದೇಶದ ಯಶೋದಾ ಲೋಧಿ ಸ್ವತಃ ಇಂಗ್ಲಿಷ್ ಕಲಿತು, ಸರಳವಾಗಿ ಇಂಗ್ಲಿಷ್ ಕಲಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗಿದ್ದಾರೆ. ಅವರ ವಿಡಿಯೋವನ್ನು ಪ್ರಿಯಾಂಕಾ ಚೋಪ್ರಾ ಹಂಚಿಕೊಂಡ ಬಳಿಕ ‘ಇಂಗ್ಲಿಷ್ ವಿತ್ ದೇಹಾತಿ ಮ್ಯಾಡಂ’ ಅವರ ಕಥೆ ಮತ್ತಷ್ಟು ವೈರಲ್ ಆಗಿದೆ.

ಗ್ರಾಮೀಣ ಮಹಿಳೆಯ ಇಂಗ್ಲಿಷ್ ಪಾಠ

ಕೆಲವೊಮ್ಮೆ ಒಂದು ಸಣ್ಣ ಪ್ರಯತ್ನವೇ ವ್ಯಕ್ತಿಯ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ. ಅದಕ್ಕೆ ಉದಾಹರಣೆ ಯಶೋದಾ ಲೋಧಿ. ಒಂದು ಪುಟ್ಟ ಗ್ರಾಮದ ಸಾಮಾನ್ಯ ಮಹಿಳೆ ಯಶೋದಾ, ಇದೀಗ ಸ್ವತಃ ಇಂಗ್ಲಿಷ್ ಕಲಿತುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಇತರರಿಗೆ ಇಂಗ್ಲಿಷ್ ಕಲಿಸುತ್ತಿದ್ದಾರೆ. ಇಂದು ಅವರು ‘ಇಂಗ್ಲಿಷ್ ವಿತ್ ದೇಹಾತಿ ಮ್ಯಾಡಂ’ ಎಂಬ ಹೆಸರಿನಿಂದಲೇ ಜನಪ್ರಿಯರಾಗಿದ್ದಾರೆ.

ಪ್ರಿಯಾಂಕಾ ಚೋಪ್ರಾ ಶೇರ್ ಮಾಡಿದ ವಿಡಿಯೋ

ಯಶೋದಾ ಅವರ ವಿಶೇಷತೆ ಎಂದರೆ, ಅವರು ಯಾವುದೇ ದೊಡ್ಡ ಇಂಗ್ಲಿಷ್ ಶಾಲೆ ಅಥವಾ ಸಂಸ್ಥೆಯಲ್ಲಿ ತರಬೇತಿ ಪಡೆದು ಈ ಹಂತಕ್ಕೆ ಬಂದವರಲ್ಲ. ತಮ್ಮದೇ ಪ್ರಯತ್ನದಿಂದ ಇಂಗ್ಲಿಷ್ ಕಲಿತುಕೊಂಡಿದ್ದಾರೆ. ಇದೀಗ ಸರಳವಾಗಿ ಇಂಗ್ಲಿಷ್ ಕಲಿಸುವ ಶೈಲಿ ಸಾವಿರಾರು ಜನರನ್ನು ಆಕರ್ಷಿಸಿದೆ. ಇತ್ತೀಚೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಯಶೋದಾ ಅವರ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಾದ ಬಳಿಕ ಯಶೋದಾ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.

ಯಾರು ಈ ಯಶೋದಾ ಲೋಧಿ?

ಯಶೋದಾ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಸಿರಾಥು ನಗರ ಪಂಚಾಯತ್ ವ್ಯಾಪ್ತಿಯ ಲೋಧನ್ ಕಾ ಪುರವಾ ಗ್ರಾಮದವರು. 12ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಅವರಿಗೆ ಆರಂಭದಲ್ಲಿ ಇಂಗ್ಲಿಷ್ ಸುಲಭವಾಗಿರಲಿಲ್ಲ. ಇಂಗ್ಲಿಷ್ ಮಾತನಾಡುವುದು ಗೊತ್ತಿರಲಿಲ್ಲ. ಅದನ್ನು ಎಲ್ಲಿ ಮತ್ತು ಹೇಗೆ ಕಲಿಯಬೇಕು ಎಂಬುದೂ ಸ್ಪಷ್ಟವಾಗಿರಲಿಲ್ಲ. ಆದರೆ ಇಂಗ್ಲಿಷ್ ಕಲಿಯಬೇಕು ಎಂಬ ಆಸೆ. ಇಂಗ್ಲಿಷ್ ಮಾತನಾಡುವವರ ವಿಡಿಯೋ ಕೇಳಲು ಆರಂಭಿಸಿದರು. ವಿಡಿಯೋದಲ್ಲಿ ಕೇಳಿಸುತ್ತಿದ್ದ ಪದಗಳು ಮತ್ತು ವಾಕ್ಯಗಳನ್ನು ಗಮನಿಸಿ, ಅದೇ ರೀತಿಯಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರು. ಸುಮಾರು 15 ದಿನಗಳ ಕಾಲ ನಿರಂತರವಾಗಿ ಇಂಗ್ಲಿಷ್ ಕೇಳುವ ಅಭ್ಯಾಸ ಮಾಡಿದ ನಂತರ ಅವರು ಸ್ವತಃ ಇಂಗ್ಲಿಷ್ ಮಾತನಾಡಲು ಪ್ರಯತ್ನಿಸಿದರು. ಹೀಗೆ ನಿಧಾನವಾಗಿ ಅವರ ಆತ್ಮವಿಶ್ವಾಸ ಹೆಚ್ಚಾಯಿತು.

ಸ್ವತಃ ಕಲಿತ ಇಂಗ್ಲಿಷ್‌ನಿಂದ ಯೂಟ್ಯೂಬ್‌ವರೆಗೆ!

ಇಂಗ್ಲಿಷ್ ಕಲಿತ ನಂತರ ಯಶೋದಾ ತಮ್ಮ ಅನುಭವವನ್ನು ಇತರರೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿ ಯೂಟ್ಯೂಬ್ ಚಾನೆಲ್ ಆರಂಭಿಸಿದರು. 2023ರ ಡಿಸೆಂಬರ್ 26ರಂದು ತಮ್ಮ ಯೂಟ್ಯೂಬ್ ಪ್ರಯಾಣ ಆರಂಭಿಸಿದರು. ಅವರ ಉದ್ದೇಶ ದೊಡ್ಡ ದೊಡ್ಡ ಗ್ರಾಮರ್ ನಿಯಮಗಳನ್ನು ಹೇಳುವುದಲ್ಲ. ಬದಲಾಗಿ ಸಾಮಾನ್ಯ ಜನರು ಪ್ರತಿದಿನ ಮಾತನಾಡುವಾಗ ಬಳಸಬಹುದಾದ ಸರಳ ಇಂಗ್ಲಿಷ್ ಕಲಿಸುವುದಾಗಿತ್ತು. ದಿನನಿತ್ಯದ ಸಂಭಾಷಣೆಯಲ್ಲಿ ಬಳಸುವ ಪದಗಳು, ಸಣ್ಣ ವಾಕ್ಯಗಳು ಮತ್ತು ಸಾಮಾನ್ಯ ಇಂಗ್ಲಿಷ್ ಮಾತನಾಡುವ ವಿಧಾನವನ್ನು ಅವರು ತಮ್ಮ ವಿಡಿಯೋಗಳ ಮೂಲಕ ಹೇಳತೊಡಗಿದರು. ಇದೇ ಸರಳ ವಿಧಾನ ಜನರಿಗೆ ಇಷ್ಟವಾಯಿತು.

ಯೂಟ್ಯೂಬ್ ಮಾಡಬೇಡ ಎಂದಿದ್ದ ಪತಿ

ಯಶೋದಾ ಯೂಟ್ಯೂಬ್‌ ಆರಂಭಿಸಿದಾಗ, ಆರಂಭದಲ್ಲಿ ಅವರ ಪತಿಗೂ ಈ ಕೆಲಸದ ಬಗ್ಗೆ ಹೆಚ್ಚಿನ ನಂಬಿಕೆ ಇರಲಿಲ್ಲ. ಯೂಟ್ಯೂಬ್‌ನಿಂದ ಹಣ ಗಳಿಸಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಆದರೆ ಯಶೋದಾ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಯಾರೇ ನಂಬಿಕೆ ಇಡದಿದ್ದರೂ ತಾವು ಮಾಡುತ್ತಿರುವ ಕೆಲಸದ ಮೇಲೆ ನಂಬಿಕೆ ಇಟ್ಟುಕೊಂಡು ನಿರಂತರವಾಗಿ ವಿಡಿಯೋ ಮಾಡುತ್ತಾ ಹೋದರು. ಅವರ ಪರಿಶ್ರಮಕ್ಕೆ ನಿಧಾನವಾಗಿ ಫಲ ಸಿಗತೊಡಗಿತು. ವರದಿಗಳ ಪ್ರಕಾರ, ಅವರ ಯೂಟ್ಯೂಬ್ ಚಾನೆಲ್ ಸುಮಾರು ಒಂದು ತಿಂಗಳಲ್ಲೇ ಮೋನೆಟೈಸ್ ಆಯಿತು. ಅದರ ಮುಂದಿನ ತಿಂಗಳಲ್ಲೇ ಅವರಿಗೆ ಮೊದಲ ಪಾವತಿಯೂ ಬಂದಿತು.

ತಾನು ಕಲಿತ ರೀತಿಯಲ್ಲೇ ಇತರರಿಗೂ ಇಂಗ್ಲಿಷ್ ಪಾಠ

ಯಶೋದಾ ಅವರ ಇಂಗ್ಲಿಷ್ ಕಲಿಸುವ ವಿಧಾನವೇ ಅವರ ಜನಪ್ರಿಯತೆಗೆ ಪ್ರಮುಖ ಕಾರಣವಾಗಿದೆ. ಅವರು ಯಾವುದೇ ಕಠಿಣ ಭಾಷೆಯಲ್ಲಿ ಪಾಠ ಮಾಡುವುದಿಲ್ಲ. ತಾವು ಇಂಗ್ಲಿಷ್ ಕಲಿಯುವಾಗ ಅನುಭವಿಸಿದ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಅದೇ ರೀತಿಯ ಸರಳ ವಿಧಾನದಲ್ಲಿ ಇತರರಿಗೂ ಕಲಿಸುತ್ತಿದ್ದಾರೆ. ಅವರ ವಿಡಿಯೋಗಳಲ್ಲಿ ದಿನನಿತ್ಯದ ಮಾತುಕತೆ, ಸಾಮಾನ್ಯವಾಗಿ ಬಳಸುವ ಇಂಗ್ಲಿಷ್ ಪದಗಳು, ಸಣ್ಣ ಸಣ್ಣ ವಾಕ್ಯಗಳು ಮತ್ತು ಮಾತನಾಡುವಾಗ ಉಪಯೋಗವಾಗುವ ಪದಪ್ರಯೋಗಗಳು ಇರುತ್ತವೆ. ಹೀಗಾಗಿ ಇಂಗ್ಲಿಷ್ ಕಲಿಯಲು ಆಸಕ್ತಿ ಇದ್ದರೂ ಕಠಿಣ ಗ್ರಾಮರ್ ನಿಯಮಗಳಿಂದ ಹೆದರುವವರಿಗೆ ಅವರ ವಿಡಿಯೋಗಳು ಹೆಚ್ಚು ಇಷ್ಟವಾಗಿವೆ.

ವಿಡಿಯೋ ವೈರಲ್

ಯಶೋದಾ ಅವರ ಜೀವನದಲ್ಲಿ ಅತ್ಯಂತ ವಿಶೇಷವಾದ ಕ್ಷಣ ಬಂದಿದ್ದು ಇತ್ತೀಚೆಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಯಶೋದಾ ಅವರ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಯಶೋದಾ ಇದನ್ನು ಗ್ರಾಮೀಣ ಜೀವನದಿಂದ ಆರಂಭವಾದ ತಮ್ಮ ಪ್ರಯಾಣಕ್ಕೆ ಸಿಕ್ಕ ದೊಡ್ಡ ಗುರುತಾಗಿ ಇದನ್ನು ಪರಿಗಣಿಸಿದ್ದಾರೆ. ಅಷ್ಟೇ ಅಲ್ಲ, ಇದೇ ಸಮಯದಲ್ಲಿ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ 4 ಲಕ್ಷ ತಲುಪಿದೆ. ಪ್ರಿಯಾಂಕಾ ಚೋಪ್ರಾ ಅವರ ಶೇರ್‌ನಿಂದ ಯಶೋದಾ ಅವರ ಕಥೆ ಇನ್ನಷ್ಟು ಜನರಿಗೆ ತಲುಪಿದೆ.

PREV
Read more Articles on
click me!

Recommended Stories

‘ಪ್ರೇಮದ ಊರಲಿ’ ಸ್ಮಾಲ್ ಬಜೆಟ್ ಸಿನಿಮಾ ಭಾರತದಾದ್ಯಂತ ಟ್ರೆಂಡ್ ಆಗ್ತಿರೋದು ಹೇಗೆ? ಆ ಸೀಕ್ರೆಟ್ ಇಲ್ಲಿದೆ ನೋಡಿ!
Tirumala: ಕೈಗಳಿಲ್ಲದ ದಿವ್ಯಾಂಗ ತಿಮ್ಮಪ್ಪನ ಭಕ್ತನಿಗೆ ಊಟ ತಿನ್ನಿಸಿದ ಮಹಿಳಾ ಉದ್ಯೋಗಿ, ಸಿಎಂ ಪ್ರಶಂಸೆ