ಕ್ಲಾಸ್‌ಮೇಟ್ಸ್ ಕೆಲಸ ಹುಡುಕ್ತಿದ್ರೆ, ಈತ 5 ಕೋಟಿ ಆಸ್ತಿ ಮಾಡಿದ; ಬೆಂಗಳೂರು IIM ವಿದ್ಯಾರ್ಥಿಯ 'ಹಣವೇ ಇಂಧನ' ಮಂತ್ರ

Published : Aug 01, 2026, 10:29 AM IST
25 year old IIM Bangalore student says money is fuel after building 5 crore net worth

ಸಾರಾಂಶ

ಕೇವಲ 25ನೇ ವಯಸ್ಸಿನಲ್ಲೇ ಸುಮಾರು ₹5 ಕೋಟಿ ನಿವ್ವಳ ಮೌಲ್ಯ (Net Worth) ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಜೈದ್ ಖಾನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

ಕೇವಲ 25ನೇ ವಯಸ್ಸಿನಲ್ಲೇ ಸುಮಾರು ₹5 ಕೋಟಿ ನಿವ್ವಳ ಮೌಲ್ಯ (Net Worth) ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಜೈದ್ ಖಾನ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಬ್ರ್ಯಾಂಡಿಂಗ್ ಸಂಸ್ಥೆ Zedital Mediaಯ ಸಂಸ್ಥಾಪಕರಾಗಿರುವ ಜೈದ್, ಇತ್ತೀಚೆಗೆ The Crore Club ಪಾಡ್‌ಕಾಸ್ಟ್‌ನಲ್ಲಿ ಭಾಗವಹಿಸಿ ತಮ್ಮ ಯಶಸ್ಸಿನ ಪಯಣ, ಉದ್ಯಮ, ಶಿಕ್ಷಣ ಹಾಗೂ ಹಣದ ಬಗ್ಗೆ ತಮ್ಮ ನಿಲುವನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ನೀವು ಸಾಧಿಸಬೇಕಾದ ಗುರಿಗೆ ಹಣವೇ ಇಂಧನ (Money is Fuel) ಎಂದು ಅವರು ಹೇಳಿರುವ ಮಾತು ಸಾವಿರಾರು ಯುವಕರ ಗಮನ ಸೆಳೆದಿದೆ.

25ರಲ್ಲೇ ₹5 ಕೋಟಿ ನೆಟ್‌ವರ್ತ್

ಜೈದ್ ಖಾನ್ ಅವರ ಪ್ರಕಾರ, ತಮ್ಮ ಕಂಪನಿಯ ಬೆಳವಣಿಗೆ ಹಾಗೂ ರಿಯಲ್ ಎಸ್ಟೇಟ್‌ನಲ್ಲಿ ಮಾಡಿದ ಬುದ್ಧಿವಂತಿಕೆಯ ಹೂಡಿಕೆಗಳಿಂದ ಇಂದು ಸುಮಾರು ₹5 ಕೋಟಿ ನಿವ್ವಳ ಮೌಲ್ಯ ಹೊಂದಿದ್ದಾರೆ. ಯುವ ವಯಸ್ಸಿನಲ್ಲೇ ಕೋಟ್ಯಾಧಿಪತಿಯಾಗಿರುವ ಅವರು, ಹಣವನ್ನು ಕೇವಲ ಐಷಾರಾಮಿ ಜೀವನಕ್ಕೆ ಅಲ್ಲ, ಭವಿಷ್ಯದ ಕನಸುಗಳನ್ನು ನನಸಾಗಿಸುವ ಸಾಧನವಾಗಿ ಬಳಸಬೇಕು ಎಂದು ಹೇಳಿದ್ದಾರೆ.

ಯಶಸ್ವಿ ಉದ್ಯಮಿಯಾಗಿದ್ದರೂ IIM ಬೆಂಗಳೂರಿನಲ್ಲಿ ಓದು

ಈಗಾಗಲೇ ಯಶಸ್ವಿ ಉದ್ಯಮಿಯಾಗಿದ್ದರೂ, ಜೈದ್ ಖಾನ್ ಪ್ರಸ್ತುತ IIM ಬೆಂಗಳೂರುನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, "ನನ್ನ ವ್ಯವಹಾರ ಚೆನ್ನಾಗಿ ನಡೆಯುತ್ತಿತ್ತು. ಆದರೆ ಶಿಕ್ಷಣದ ವಿಷಯದಲ್ಲಿ ನಾನು ಹಿಂದೆ ಬಿದ್ದಿದ್ದೇನೆ ಎಂದು ಅನಿಸಿತು. ಅದಕ್ಕಾಗಿ ಮತ್ತೆ ಓದಲು ನಿರ್ಧರಿಸಿದೆ. IIMನಲ್ಲಿ ಕಲಿಯುತ್ತಿರುವ ವಿಷಯಗಳನ್ನು ನನ್ನ ಕಂಪನಿಯಲ್ಲೇ ಅನುಷ್ಠಾನಗೊಳಿಸುತ್ತಿದ್ದೇನೆ" ಎಂದು ಹೇಳಿದ್ದಾರೆ.

ಉದ್ಯಮಿಗಳಿಗೆ ಜೈದ್ ಖಾನ್ ಕೊಟ್ಟ ಎರಡು ಸಲಹೆಗಳು

ಪಾಡ್‌ಕಾಸ್ಟ್‌ನಲ್ಲಿ ನಿರೂಪಕಿ ಶ್ರೇಯಾ ಹೆಗ್ಡೆ, ನಿಮ್ಮ ಸಹಪಾಠಿಗಳು ವರ್ಷಕ್ಕೆ ₹35-40 ಲಕ್ಷ ಸಂಬಳದ ಉದ್ಯೋಗಕ್ಕಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ ನೀವು ಈಗಾಗಲೇ ಉದ್ಯಮಿಯಾಗಿದ್ದೀರಿ. ಯುವ ಉದ್ಯಮಿಗಳಿಗೆ ಏನು ಸಲಹೆ ನೀಡುತ್ತೀರಿ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜೈದ್ ಎರಡು ಪ್ರಮುಖ ಸಲಹೆಗಳನ್ನು ನೀಡಿದರು.

ಮೊದಲ ಸಲಹೆ: ಏನಾದರೂ ಮಾರಾಟ ಮಾಡಲು ಪ್ರಾರಂಭಿಸಿ, ಅದು ಒಂದು ಕೌಶಲ್ಯವಾಗಿರಬಹುದು, ಸಲಹೆಯಾಗಿರಬಹುದು ಅಥವಾ ಯಾವುದೇ ಸಣ್ಣ ಸೇವೆಯಾಗಿರಬಹುದು. ₹100 ಅಥವಾ ₹200 ಗಳಿಸಿದರೂ ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ" ಎಂದು ಹೇಳಿದರು.

ಎರಡನೇ ಸಲಹೆ: ನಿಮ್ಮ ಡಿಜಿಟಲ್ ಉಪಸ್ಥಿತಿಯನ್ನು ನಿರ್ಮಿಸಿಕೊಳ್ಳಿ, ಇಂದಿನ ಜಗತ್ತಿನಲ್ಲಿ ಕಂಟೆಂಟ್ ನಿಮ್ಮ ಡಿಜಿಟಲ್ ಕರೆನ್ಸಿ. ನೀವು ಆನ್‌ಲೈನ್‌ನಲ್ಲಿ ಕಾಣಿಸದಿದ್ದರೆ, ನೀವು ಇಲ್ಲದವರೇ. ಆದ್ದರಿಂದ ವೈಯಕ್ತಿಕ ಬ್ರ್ಯಾಂಡ್ ನಿರ್ಮಿಸಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದರು.

Zedital Media ಏನು ಮಾಡುತ್ತದೆ?

ಜೈದ್ ಖಾನ್ ಸ್ಥಾಪಿಸಿರುವ Zedital Media ಒಂದು ಬ್ರ್ಯಾಂಡಿಂಗ್ ಹಾಗೂ ಮೀಡಿಯಾ ಜಾಹೀರಾತು ಸಂಸ್ಥೆಯಾಗಿದೆ.

ಈ ಸಂಸ್ಥೆ,

ವೈಯಕ್ತಿಕ ಬ್ರ್ಯಾಂಡಿಂಗ್

ಬ್ರ್ಯಾಂಡ್ ಕನ್ಸಲ್ಟಿಂಗ್

ಮೀಮ್ ಮಾರ್ಕೆಟಿಂಗ್

ಕಂಟೆಂಟ್ ಡಿಸ್ಟ್ರಿಬ್ಯೂಷನ್

Online Reputation Management (ORM)

Content Distribution Management (CDM)

LinkedIn Profile Amplification Management (PAM) ಸೇರಿದಂತೆ ಹಲವು ಡಿಜಿಟಲ್ ಸೇವೆಗಳನ್ನು ಒದಗಿಸುತ್ತದೆ.

ವೈದ್ಯನಾಗಬೇಕಿದ್ದ ಹುಡುಗ ಉದ್ಯಮಿಯಾದ ಕಥೆ

ಜೈದ್ ಖಾನ್ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು. ಎಲ್ಲರೂ ನನಗೆ ವೈದ್ಯನಾಗು ಎಂದು ಹೇಳುತ್ತಿದ್ದರು. ವೈದ್ಯನಾಗದಿದ್ದರೆ ಎಂಜಿನಿಯರಿಂಗ್ ಅಥವಾ MBBS ಓದು ಎಂದು ಒತ್ತಡವಿತ್ತು" ಎಂದು ಅವರು ನೆನಪಿಸಿಕೊಂಡಿದ್ದಾರೆ. 12ನೇ ತರಗತಿಯಲ್ಲಿ NEET ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಅವರು ತಮ್ಮ ಆಸಕ್ತಿ ಬೇರೆ ಕ್ಷೇತ್ರದಲ್ಲಿದೆ ಎಂದು ಅರಿತುಕೊಂಡರು. ಗುಟ್ಟಾಗಿ ಕೆಲವು YouTube ಚಾನೆಲ್‌ಗಳೊಂದಿಗೆ ಕೆಲಸ ಆರಂಭಿಸಿದ ಅವರು, ಬಳಿಕ ಫ್ರೀಲ್ಯಾನ್ಸ್ ಪ್ರಾಜೆಕ್ಟ್‌ಗಳನ್ನು ಮಾಡತೊಡಗಿದರು. ಅಮೆರಿಕದ ಕ್ಯಾಲಿಫೋರ್ನಿಯಾದ ಇನ್‌ಫ್ಲುಯೆನ್ಸರ್ ಒಬ್ಬರಿಂದ ಬಂದ ₹1.24 ಲಕ್ಷ ಪಾವತಿಯೇ ತಮ್ಮ ವೃತ್ತಿಜೀವನದ ಮೊದಲ ದೊಡ್ಡ ಯಶಸ್ಸು ಎಂದು ಹೇಳಿದ್ದಾರೆ.

Canon ಕ್ಯಾಮೆರಾದಿಂದ ಆರಂಭವಾದ ಕನಸು

NEET ಬಿಟ್ಟು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನವನ್ನು ಆಯ್ಕೆ ಮಾಡಿಕೊಂಡ ಜೈದ್, ಪೋಷಕರ ಬೆಂಬಲದೊಂದಿಗೆ ಹೊಸ ಬದುಕು ಆರಂಭಿಸಿದರು. Canon 80D ಕ್ಯಾಮೆರಾ ಖರೀದಿಸಿ ವಿಡಿಯೊ ನಿರ್ಮಾಣ ಆರಂಭಿಸಿದ ಅವರು, ನಂತರ ತಮ್ಮದೇ ಪ್ರೊಡಕ್ಷನ್ ಹೌಸ್ ಹಾಗೂ ನಂತರ Zedital Media ಸ್ಥಾಪಿಸಿದರು.

22ರಲ್ಲೇ ಮೊದಲ ಕೋಟಿ

2023ರಲ್ಲಿ, ಅಂದರೆ ಕೇವಲ 22ನೇ ವಯಸ್ಸಿನಲ್ಲೇ ಮೊದಲ ₹1 ಕೋಟಿ ಗಳಿಸಿದ್ದಾಗಿ ಜೈದ್ ತಿಳಿಸಿದ್ದಾರೆ.ಆ ಹಣವನ್ನು ಐಷಾರಾಮಿ ಜೀವನಕ್ಕೆ ಬಳಸದೇ, ತಮ್ಮ ಕಂಪನಿಯಲ್ಲೇ ಮರುಹೂಡಿಕೆ ಮಾಡಿದರು.ಅದರ ಫಲವಾಗಿ ಕಂಪನಿ ವೇಗವಾಗಿ ಬೆಳೆಯಿತು ಮತ್ತು ಇಂದು ಕೋಟ್ಯಂತರ ಮೌಲ್ಯದ ವ್ಯವಹಾರವಾಗಿ ಬೆಳೆದಿದೆ.

'ಹಣವೇ ಇಂಧನ' ಎಂದಿದ್ದು ಏಕೆ?

ಪಾಡ್‌ಕಾಸ್ಟ್‌ನಲ್ಲಿ ಹಣ ಎಂದರೆ ನಿಮಗೆ ಏನು? ಎಂದು ಕೇಳಿದಾಗ ಜೈದ್ ಖಾನ್ ನೀಡಿದ ಉತ್ತರವೇ ಈಗ ವೈರಲ್ ಆಗಿದೆ. ನೀವು ಸಾಧಿಸಬೇಕೆಂದಿರುವ ಗುರಿಗೆ ಹಣವೇ ಇಂಧನ. ಹಣ ಅಂತಿಮ ಗುರಿಯಲ್ಲ, ಅದು ನಿಮ್ಮ ಕನಸುಗಳನ್ನು ನನಸಾಗಿಸಲು ನೆರವಾಗುವ ಸಾಧನ. ಎಂಬ ಅವರ ಮಾತು ಅನೇಕ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿ ಪರಿಣಮಿಸಿದೆ.

PREV
Read more Articles on
click me!

Recommended Stories

'ಖಾತೆಗೆ ಬಿತ್ತು ಕನ್ನ, ಲಂಡನ್‌ಗೆ ಹೋದ ಅಳಿಯ!' – ಫೇಕ್ UK ಪ್ಲಾನ್ ಮಾಡಿ ಹೆಂಡತಿ ಮನೆಗೇ 63 ಲಕ್ಷ ರೂ. ವಂಚಿಸಿದ ಖತರ್ನಾಕ್ ಗಂಡ!
Viral Robot:ಈ ರೋಬೋಟ್ ನೋಡೋಕೆ ರಾಕ್ಷಸನ ತರ, ಆದರೆ ಆಪತ್ಬಾಂಧವ, ರಕ್ಷಿಸೋಕೆ ಬಂದ್ರೂ ಜನ ಹೆದರಿ ಸಾಯ್ತಾರೆ!