
ಪೊಲೀಸರಿಂದ ತಪ್ಪಿಸಿಕೊಳ್ಳಲು ಮಹಿಳೆಯ ವೇಷ ಧರಿಸಿದ್ದ ಆರೋಪಿಯನ್ನು ಬಂಧಿಸಲಾಗಿದೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯಲ್ಲಿ 13 ಪ್ರಕರಣಗಳಲ್ಲಿ ಆರೋಪಿಯಾಗಿರುವ ದಯಾಶಂಕರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕಳ್ಳತನ, ಹಲ್ಲೆ, ಬೆದರಿಕೆ, ದರೋಡೆ ಸೇರಿದಂತೆ ಹಲವು ಅಪರಾಧಗಳಲ್ಲಿ ಈತ ಭಾಗಿಯಾಗಿದ್ದಾನೆ. ದಯಾಶಂಕರ್‌ನನ್ನು ಪೊಲೀಸರು ಬಂಧಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಂಧನದ ಸಮಯದಲ್ಲಿ ಆತ ಸೀರೆ ಮತ್ತು ಬ್ಲೌಸ್ ಧರಿಸಿದ್ದನು ಎಂದು ತಿಳಿದುಬಂದಿದೆ.
ಪೊಲೀಸರಿಂದ ತಲೆಮರೆಸಿಕೊಂಡಿದ್ದ ದಯಾಶಂಕರ್ ಕಳೆದ ಕೆಲವು ದಿನಗಳಿಂದ ಪೊಲೀಸರಿಗೆ ಸಿಗದೇ ಚಳ್ಳೆಹಣ್ಣು ತಿನ್ನಿಸುತ್ತಿದ್ದನು. ಆತನಿಗಾಗಿ ಪೊಲೀಸರು ವ್ಯಾಪಕ ಶೋಧ ನಡೆಸಿದ್ದರೂ ಆತನನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ನಂತರ ಆತ ವೇಷ ಮರೆಸಿಕೊಂಡು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದಾನೆ ಎಂಬ ಗುಪ್ತಚರ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಮಾಹಿತಿ ಲಭ್ಯವಾದ ನಂತರ ನಡೆಸಿದ ತನಿಖೆಯಲ್ಲಿ ಜೋಧ್‌ಪುರದ ಮನೆಯಲ್ಲಿ ಮಹಿಳೆಯ ವೇಷದಲ್ಲಿ ಆತನನ್ನು ಬಂಧಿಸಲಾಯಿತು. ಹೆಡ್ ಕಾನ್ಸ್‌ಟೇಬಲ್ ಶಂಶೇರ್ ಖಾನ್ ನೇತೃತ್ವದ ಪೊಲೀಸ್ ತಂಡವು ಆರೋಪಿ ದಯಾಶಂಕರ್‌ನನ್ನು ಬಂಧಿಸಿತು.
ಆರೋಪಿ ದಯಾಶಂಕರ್ 23 ವರ್ಷದ ಯುವಕನ ಮೇಲೆ ಕೋಲು ಮತ್ತು ಮದ್ಯದ ಬಾಟಲಿಗಳಿಂದ ಹಲ್ಲೆ ನಡೆಸಿದ್ದಾನೆಂದು ಪ್ರಕರಣ ದಾಖಲಾಗಿತ್ತು. ಈ ಘಟನೆ ಫೆಬ್ರವರಿ 13 ರಂದು ನಡೆದಿತ್ತು. ಹಲ್ಲೆ ಪ್ರಕರಣದ ನಂತರ ಆತನ ಅಪರಾಧ ಹಿನ್ನೆಲೆಯನ್ನು ಪತ್ತೆ ಮಾಡಿದಾಗ ಆತನ ಮೇಲೆ 13 ಪ್ರಕರಣ ಇರುವುದು ತಿಳಿದುಬಂದಿದೆ. ಆಗ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಎಲ್ಲೆಡೆಯೂ ಆತನನ್ನು ಹುಡುಕುವುದಕ್ಕೆ ಒಂದು ತಂಡವನ್ನು ನೇಮಿಸಿತ್ತು. ಹೀಗಾಗಿ, ದಯಾಶಂಕರ್ ಎಲ್ಲಿ ಅಡಗಿದ್ದಾನೆ ಎಂಬುದರ ಸ್ಪಷ್ಟ ಸುಳಿವಿಗಾಗಿ ಹಗಲಿರುಳು ಶ್ರಮಿಸುತ್ತಿದ್ದ ಪೊಲೀಸರಿಗೆ ಸಣ್ಣದೊಂದು ಸುಳಿವು ಸಿಕ್ಕಿದೆ. ಆಗ ಈ ಮಾಹಿತಿಯನ್ನು ಖಚಿತಪಡಿಸಿಕೊಂಡ ತಂಡವು ಸೀರೆಯಲ್ಲಿ ಪೊಲೀಸರಿಗೆ ಯಾಮಾರಿಸುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ.
ಇನ್ನು ಹಲ್ಲೆ ಪ್ರಕರಣದ ಆರೋಪಿ ದಯಾಶಂಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಲು ಹಲವು ಬಾರಿ ಆತನ ಮನೆಯ ಮೇಲೆ ದಾಳಿ ನಡೆಸಿದ್ದರು. ಆದರೆ, ಆಗಲೆಲ್ಲಾ ಅಲ್ಲಿ ಒಬ್ಬ ಮಹಿಳೆ ಮಾತ್ರ ಇರುತ್ತಿದ್ದಳು. ದಯಾಶಂಕರ್ ಮನೆಗೆ ಬರುವುದಿಲ್ಲ ಎಂದು ಆ ಮಹಿಳೆ ಹೇಳುತ್ತಿದ್ದಳು. ಮೊದಲಿಗೆ ಪೊಲೀಸರು ಇದನ್ನು ನಂಬಿದ್ದರು. ನಂತರ ಆತನ ಮನೆಯಲ್ಲಿದ್ದ ಮಹಿಳೆ ಬೇರೆ ಯಾರೂ ಅಲ್ಲ, ದಯಾಶಂಕರ್ ಎಂಬ ಗುಪ್ತಚರ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ನಂತರ ಮನೆಯ ಮೇಲೆ ಮತ್ತೆ ದಾಳಿ ನಡೆಸಿ ಪೊಲೀಸರು ಆತನನ್ನು ಬಂಧಿಸಿದರು.