
ವಿಜಯಪುರ(ಅ.17): ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಎರಡು ಕೋಮುಗಳ ಮಧ್ಯೆ ನಡೆದ ಗುಂಪು ಘರ್ಷಣೆ ನಡೆದು, ಅಂಬೇಡ್ಕರ್ ಪುತ್ಥಳಿ ಭಗ್ನಗೊಂಡಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗ್ರಾಮದ ಎರಡು ಕೋಮುಗಳ ಮಧ್ಯೆ ಹಳೆ ವೈಷಮ್ಯವಿತ್ತು. ಮಂಗಳವಾರ ರಾತ್ರಿ ಒಂದು ಕೋಮಿಗೆ ಸೇರಿದ ವ್ಯಕ್ತಿಯೊಬ್ಬ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ಹೊರಟಿದ್ದ. ಆಗ ಮೂರ್ತಿ ಬಳಿ ಕುಳಿತಿದ್ದ ಕೆಲವರು ಆತನನ್ನು ಬೈದಿದ್ದಾರೆ. ಇದರಿಂದಾಗಿ ಸಿಟ್ಟಾದ ಆ ವ್ಯಕ್ತಿ ತನ್ನ ಕಡೆಯ ಸುಮಾರು 30 ಜನರನ್ನು ಕರೆದುಕೊಂಡು ಅಂಬೇಡ್ಕರ್ ಪುತ್ಥಳಿ ಬಳಿ ಬಂದಿದ್ದಾನೆ. ಆಗ ಎರಡು ಕೋಮಿನ ಗುಂಪಿನವರ ಮಧ್ಯೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಒಂದು ಕೋಮಿಗೆ ಸೇರಿದ ಇಬ್ಬರನ್ನು ಥಳಿಸಲಾಗಿದೆ.
ಪ್ರತಿಮೆ ಧ್ವಂಸ:
ಎರಡು ಗುಂಪುಗಳ ಮಧ್ಯೆ ಘರ್ಷಣೆ ವಿಕೋಪಕ್ಕೆ ಹೋಗಿ ಒಂದು ಗುಂಪಿನವರು ಅಲ್ಲಿದ್ದ ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ಈ ಘಟನೆಯಲ್ಲಿ ಒಂದು ಕೋಮಿಗೆ ಸೇರಿದ ಇಬ್ಬರು ಗಾಯಗೊಂಡಿದ್ದಾರೆ.
ಸುದ್ದಿ ತಿಳಿದ ತಕ್ಷಣ ಇಂಡಿ ಡಿವೈಎಸ್ಪಿ, ಸಿಂದಗಿ ಸಿಪಿಐ ಮತ್ತಿತರರು ತಡರಾತ್ರಿ ಗ್ರಾಮಕ್ಕೆ ತೆರಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಡಿಎಆರ್ ವಾಹನ ಹಾಗೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಗ್ರಾಮದಲ್ಲಿ ನಿಯೋಜಿಸಿದ್ದಾರೆ. ಬುಧವಾರ ಇಡೀ ದಿನ ಹಿರಿಯ ಪೊಲೀಸ್ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದರಿಂದಾಗಿ ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಘಟನೆಗೆ ಸಂಬಂಧಿಸಿದಂತೆ 11 ಜನರ ವಿರುದ್ಧ ಸಿಂದಗಿ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಈ ಸಂಬಂಧ 5 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇತರೆ 6 ಜನರ ಆರೋಪಿತರನ್ನು ಕೂಡಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಂ ತಿಳಿಸಿದ್ದಾರೆ.