
ವಿಜಯಪುರ (ಜೂ.19) ಬೈಕ್ ಮೂಲಕ ಶಾಲೆಗೆ ತೆರಳುತ್ತಿದ್ದ ವೇಳೆ ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋದ ಶಿಕ್ಷಕ ಸ್ಕಿಡ್ ಆಗಿ ಬಿದ್ದ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಅಂಬಳನೂರ ಕ್ರಾಸ್ ಬಳಿ ನಡೆದಿದೆ. 46 ವರ್ಷದ ಶಿಕ್ಷಕ ವಾಸುದೇವ ಹಂಚಾಟೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಶಾಲೆಯ ಮಕ್ಕಳು ಕಣ್ಣೀರಿಟಿದ್ದಾರೆ. ನೆಚ್ಚಿನ ಶಿಕ್ಷಕನ ಕಳೆದುಕೊಂಡ ಮಕ್ಕಳು ಗೋಳಾಡಿದ್ದಾರೆ.
ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಕರ್ತವ್ಯ ನಿರ್ವಯಿಸುತ್ತಿದ್ದ ವಾಸುದೇವ ಹಂಚಾಟೆ ಮಕ್ಕಳ ನೆಚ್ಚಿನ ಶಿಕ್ಷಕರಾಗಿದ್ದರು. ಶೈಕ್ಷಣಿಕ ಪಾಠದ ಜೊತೆ ಪಠ್ಯೇತರ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಪ್ರೇರಪಣೆ ನೀಡುತ್ತಿದ್ದರು. ಟ್ರಾಫಿಕ್ ನಿಯಮ ವಿಚಾರದಲ್ಲಿ ಮಕ್ಕಳಿಗೆ ಪ್ರತಿ ದಿನ ತಿಳಿ ಹೇಳುತ್ತಿದ ಶಿಕ್ಷಕ, ಹೆಲ್ಮೆಟ್ ಧರಿಸಲು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ಪೋಷಕರನ್ನು ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸುವಂತೆ ಸೂಚಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳುತ್ತಿದ್ದರು.
ಪ್ರತಿ ದಿನ ಹೆಲ್ಮೆಟ್ ಧರಿಸಿ ಸಂಚರಿಸುತ್ತಿದ್ದ ಶಿಕ್ಷಕ
ವಾಸುದೇವ ಹಂಚಾಟೆ ಶಾಲೆಗೆ ಬೈಕ್ ಮೂಲಕ ಆಗಮಿಸುತ್ತಿದ್ದರು. ಮನೆಯಿಂದ ಕೆಲ ದೂರದಲ್ಲಿದ್ದ ಶಾಲೆಗೆ ಬೈಕ್ ಮೂಲಕ ತಕ್ಕ ಸಮಯಕ್ಕೆ ಹಾಜರಾಗುತ್ತಿದ್ದರು. ಪ್ರತಿ ದಿನವೂ ಶಿಕ್ಷಕ ಹೆಲ್ಮೆಟ್ ಧರಿಸಿ ಪ್ರಯಾಣಿಸುತ್ತಿದ್ದರು. ಆದರೆ ಘಟನೆ ನಡೆದ ದಿನ ವಿಳಂಬವಾಗಿದ್ದ ಕಾರಣ ಹೆಲ್ಮೆಟ್ ಮರೆತು ಸಂಚರಿಸಿದ್ದಾರೆ. ಹೆಲ್ಮೆಟ್ ಮರಳಿ ತಂದರೆ ಶಾಲೆಗೆ ತಲುಪಲು ವಿಳಂಬವಾಗಲಿದೆ ಅನ್ನೋ ಕಾರಣಕ್ಕೆ ಹಾಗೇ ತೆರಳಿದ್ದರು. ಹೆಲ್ಮೆಟ್್ ಇಲ್ಲದ ಕಾರಣ ಬೈಕ್ ಸ್ಕಿಡ್ ಆದಾಗ ತಲೆಗೆ ಗಂಭೀರ ಗಾಯವಾಗಿದೆ.
ತಲೆಗೆ ಗಂಭೀರ ಗಾಯ
ಶಿಕ್ಷಕ ಬೈಕ್ ಸ್ಕಿಡ್ ಆಗಿ ರಸ್ತೆಗೆ ಅಪ್ಪಳಿಸಿದ್ದಾರೆ. ಈ ವೇಳೆ ತಲೆಗೆ ಗಂಭೀರವಾದ ಗಾಯವಾಗಿದೆ. ದೇಹದ ಇತರ ಭಾಗಕ್ಕೆ ಹೆಚ್ಚಿನ ಗಾಯವಿಲ್ಲ. ತಲೆಗೆ ಗಾಯದ ಪ್ರಮಾಣ ಹೆಚ್ಚಾಗಿದ್ದ ಕಾರಣ ಸ್ಥಳದಲ್ಲೇ ಶಿಕ್ಷಕ ಮೃತಪಟ್ಟಿದ್ದಾರೆ. ಸ್ಥಳೀಯರು ಸೇರಿ ಆಸ್ಪತ್ರೆ ಸಾಗಿಸಿದ್ದಾರೆ. ಆದರೆ ಆಸ್ಪತ್ರೆ ವೈದ್ಯರು ಶಿಕ್ಷಕ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.