ವಿಜಯಪುರ: ವೇದಿಕೆಯಲ್ಲೇ ಪರಸ್ಪರ ಬೈದಾಡಿಕೊಂಡ ಯತ್ನಾಳ-ಜಿಗಜಿಣಗಿ

By Web DeskFirst Published Oct 23, 2019, 12:17 PM IST
Highlights

ಶಾಸಕ ಯತ್ನಾಳ- ಸಂಸದ ಜಿಗಜಿಣಗಿ ಮಧ್ಯೆ ವಾಗ್ವಾದ| ರೈಲ್ವೆ ಸಚಿವ ಸುರೇಶ ಅಂಗಡಿ ಸಮ್ಮುಖದಲ್ಲೇ ನಡೆದ ಮಾತಿನ ಚಕಮಕಿ| ಯಾವ ಕಾರಣಕ್ಕಾಗಿ ವಾಗ್ವಾದ ನಡೆದಿದೆ ಎಂಬುವುದು ಯಾರಿಗೂ ಗೊತ್ತಾಗಲಿಲ್ಲ| ಯತ್ನಾಳರನ್ನ ಸಮಾಧಾನ ಪಡಿಸಿದ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ| 

ವಿಜಯಪುರ[ಅ.23]: ವಿಜಯಪುರ- ಯಶವಂತಪುರ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡುವ ಸಮಾರಂಭದ ವೇದಿಕೆಯಲ್ಲಿಯೇ ಸಂಸದ ರಮೇಶ ಜಿಗಜಿಣಗಿ ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮಧ್ಯೆ ಮಾತಿನ ಚಕಮಕಿ ನಡೆದಿದೆ.

ಮಂಗಳವಾರ ವಿಜಯಪುರ- ಯಶವಂತಪುರ ನೂತನ ರೈಲು ಸಂಚಾರಕ್ಕೆ ಚಾಲನೆ ನೀಡುವ ಸಮಾರಂಭಕ್ಕೆ ಇನ್ನೇನು ವಿದ್ಯುಕ್ತ ಚಾಲನೆ ಸಿಗಬೇಕಿತ್ತು. ಅಷ್ಟರಲ್ಲಿಯೇ ವೇದಿಕೆಯಲ್ಲಿ ಸಚಿವ ಸುರೇಶ ಅಂಗಡಿ ಪಕ್ಕದಲ್ಲಿ ಬಲಕ್ಕೆ ಆಸೀನರಾಗಿದ್ದ ಸಂಸದ ರಮೇಶ ಜಿಗಜಿಣಗಿ ಹಾಗೂ ಜಿಗಜಿಣಗಿ ಅವರ ಬಲ ಭಾಗದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಇಬ್ಬರೂ ಸಿಟ್ಟಿನಿಂದಲೇ ವಾಗ್ವಾದ ನಡೆಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವೇದಿಕೆ ಮುಂಬದಿಯಲ್ಲಿ ಕುಳಿತವರಿಗೆ ಜಿಗಜಿಣಗಿ, ಯತ್ನಾಳ ಪರಸ್ಪರ ಸಿಟ್ಟಿನಿಂದ ಕೈ ಮಾಡಿ ಮಾತನಾಡುವುದು ಕಂಡು ಬಂತು. ನೋಡುಗರಿಗೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂಬುವುದು ಖಚಿತವಾಯಿತು. ಆದರೆ ಅದು ಯಾವ ಕಾರಣಕ್ಕಾಗಿ ಎಂಬುವುದು ಯಾರಿಗೂ ಗೊತ್ತಾಗಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಶಾಸಕ ಯತ್ನಾಳ ಪಕ್ಕದಲ್ಲಿ ಬಲ ಬದಿಗೆ ಆಸೀನರಾಗಿದ್ದ ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಅವರು ಯತ್ನಾಳರನ್ನು ಸಮಾಧಾನ ಪಡಿಸಿದರು. ಅತ್ತ ಕೇಂದ್ರ ಸಚಿವ ಸುರೇಶ ಅಂಗಡಿ ಅವರು ಸಂಸದ ಜಿಗಜಿಣಗಿ ಅವರನ್ನು ಸಮಾಧಾನ ಪಡಿಸಿದರು. ಅಷ್ಟಕ್ಕೆ ಯತ್ನಾಳ, ಜಿಗಜಿಣಗಿ ಅವರು ಮಾತಿನ ಚಕಮಕಿ ನಿಲ್ಲಿಸಿದರು. ಅಷ್ಟರಲ್ಲಿಯೇ ಉದ್ಘೋಷಕರಿಂದ ದೀಪ ಬೆಳಗುವ ಬಗ್ಗೆ ಧ್ವನಿವರ್ಧಕದಲ್ಲಿ ಘೋಷಿಸಲಾಯಿತು.

ಆಗ ಎಲ್ಲರೂ ದೀಪ ಬೆಳಗುವ ಕಾರ್ಯಕ್ರಮಕ್ಕೆ ಎದ್ದು ವೇದಿಕೆ ಮುಂಬಂದಿಗೆ ತೆರಳಿದರು. ಆದರೆ ಯತ್ನಾಳ ಅವರು ದೀಪ ಬೆಳಗಿಸಲು ಮುಂದೆ ಬರಲಿಲ್ಲ. ವೇದಿಕೆ ಮೇಲಿದ್ದ ಮಾಜಿ ಸಚಿವ ಎಸ್‌.ಕೆ. ಬೆಳ್ಳುಬ್ಬಿ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ ಹಾಗೂ ರೈಲ್ವೆ ಅಧಿಕಾರಿಗಳು ದೀಪ ಬೆಳಗಿಸಲು ಮುಂದೆ ಬರುವಂತೆ ಶಾಸಕ ಯತ್ನಾಳ ಅವರಿಗೆ ಕರೆದರು. ಆದರೆ ಯತ್ನಾಳ ನಿರಾಕರಿಸಿದರು. ಸಚಿವ ಸುರೇಶ ಅಂಗಡಿ ಕರೆದರೂ ಬರಲಿಲ್ಲ. ಕೊನೆಗೆ ದೀಪ ಕೈಯಲ್ಲಿ ಹಿಡಿದುಕೊಂಡು ಸಚಿವ ಸುರೇಶ ಅಂಗಡಿ ಅವರು ಯತ್ನಾಳ ಕೈಗಿತ್ತು ಅವರ ಕೈ ಹಿಡಿದು ಮುಂದೆ ಕರೆದರು. ಆಗ ಯತ್ನಾಳ ದೀಪ ಬೆಳಗಿಸಲು ಮುಂದಾದರು.

ವೇದಿಕೆ ಮುಂಬದಿಯಲ್ಲಿ ಕುಳಿತಿದ್ದವರಿಗೆ ಯತ್ನಾಳ, ಜಿಗಜಿಣಗಿ ಮಧ್ಯೆ ಯಾವ ಕಾರಣಕ್ಕೆ ಮಾತಿನ ಚಕಮಕಿ ನಡೆಯಿತು. ದೀಪ ಬೆಳಗಿಸಲು ಯತ್ನಾಳ ಏಕೆ ನಿರಾಕರಿಸುತ್ತಿದ್ದಾರೆ ಎಂಬುವುದು ನಿಗೂಢವಾಗಿಯೇ ಉಳಿಯಿತು. ಈ ಬಗ್ಗೆ ಕೊನೆವರೆಗೂ ಯಾರೂ ಬಾಯಿ ಬಿಡಲಿಲ್ಲ.

click me!