ವಿಜಯಪುರ: ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ ಸಂಸದ ಜಿಗಜಿಣಗಿ

By Web DeskFirst Published Oct 24, 2019, 2:28 PM IST
Highlights

ಶುದ್ಧ ನೀರು ಘಟಕ ದುರಸ್ತಿಗೊಳಿಸಿ| ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಂಸದ ಜಿಗಜಿಣಗಿ ಅಧಿಕಾರಿಗಳಿಗೆ ಸೂಚನೆ| ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ| ಇದರಿಂದ ಅನೇಕ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ| ಕೂಡಲೇ ಘಟಕಗಳ ಆರ್‌ಒ ದುರಸ್ತಿ ಮಾಡುವಂತೆ ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಸೂಚನೆ|

ವಿಜಯಪುರ[ಅ.24]: ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಹೋಗಿ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ, ಇದರಿಂದ ಅನೇಕ ಗ್ರಾಮದ ಜನರಿಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಕೂಡಲೇ ಘಟಕಗಳ ಆರ್‌ಒ ದುರಸ್ತಿ ಮಾಡುವಂತೆ ಸಂಸದ ರಮೇಶ ಜಿಗಜಿಣಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆದ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಘಟಕ ಸ್ಥಾಪಿಸಿದೆ. ಆದರೆ ಇಂದು ಶುದ್ಧ ಕುಡಿಯುವ ನೀರಿನ ಘಟಕಗಳ ಬಹುತೇಕ ಆರ್‌ಒ ಟ್ಲಾಂಟ್‌ ಕೆಟ್ಟಿವೆ. ಹೀಗಾಗಿ ಶುದ್ಧ ಕುಡಿಯುವ ನೀರಿನಿಂದ ಗ್ರಾಮೀಣ ಜನತೆ ವಂಚಿತರಾಗಿದ್ದಾರೆ. ಇಂದು ಗ್ರಾಮೀಣ ಪ್ರದೇಶದ ಜನರಿಗೆ ಕಲುಷಿತ ನೀರೇ ಗತಿಯಾಗಿದೆ. ಗ್ರಾಮೀಣ ಪ್ರದೇಶದ ಜನರು ಕಲುಷಿತ ನೀರು ಕುಡಿದು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಇದನ್ನು ಗಂಭೀರ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಕುರಿತು ವಿವರಣೆ ನೀಡಿದ ಅಧಿಕಾರಿಗಳು, ವಿಜಯಪುರ ಜಿಲ್ಲೆಯಲ್ಲಿ 849 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿದ್ದು, ಅದರಲ್ಲಿ ಈಗಾಗಲೇ 824 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಲಾಗಿದೆ. ಆದರೆ 50 ಘಟಕಗಳು ಮಾತ್ರ ಸಣ್ಣ ಪುಟ್ಟ ದುರಸ್ತಿಯಾಗಬೇಕು ಎಂದರು.

ಆಗ ಸಂಸದ ರಮೇಶ ಜಿಗಜಿಣಗಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾದ್ಯಂತ ಹಲವು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸಮಸ್ಯೆ ಇದೆ. 50 ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಒಗಳು ಕೆಟ್ಟು ಹೋಗಿವೆ. ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಬೇಕಾದರೆ ಬನ್ನಿ ನಾನೇ ನನ್ನ ಕಾರ್‌ನಲ್ಲಿಯೇ ಕರೆದುಕೊಂಡು ಹೋಗಿ ಕೆಟ್ಟು ಹೋಗಿದ್ದ ಘಟಕಗಳನ್ನು ತೋರಿಸುತ್ತೇನೆ. ಕೂಡಲೇ ಈ ಸಮಸ್ಯೆ ನಿವಾರಣೆ ಮಾಡುವಂತೆ ಸೂಚಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ನಾಮಫಲಕವಿಲ್ಲ:

ಜಿಲ್ಲೆಯಲ್ಲಿ ಲೋಕಸಭಾ ಸದಸ್ಯರು ಕೈಗೊಂಡ ಅಭಿವೃದ್ಧಿ ಕಾಮಗಾರಿ ಕುರಿತು ಒಂದೂ ನಾಮಫಲಕ ಇಲ್ಲ. ನಾನು ಕಳೆದ ಲೋಕಸಭಾ ಸದಸ್ಯನಾಗಿ ಎರಡು ಅವಧಿಗೆ ಸುಮಾರು 50 ಕೋಟಿಗೂ ಅಧಿಕ ಅನುದಾನವನ್ನು ವಿವಿಧ ಭೌತಿಕ ಕಾಮಗಾರಿಗಳಿಗೆ ನೀಡಿದ್ದೇನೆ. ಆದರೆ ಎಲ್ಲಿಯೂ ಲೋಕಸಭಾ ಸದಸ್ಯರ ಅನುದಾನದಿಂದ ನಿರ್ಮಿಸಿದ ಕಟ್ಟಡ ಎಂದು ಎಲ್ಲಿಯೂ ನಾಮಫಲಕ ಅಳವಡಿಸಿಲ್ಲ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ಕೆಲವರು ಒಂದು ಲಕ್ಷದ ಕಾಮಗಾರಿ ಮಾಡಿದರೆ ದೊಡ್ಡ ನಾಮಫಲಕ ಹಾಕುತ್ತಾರೆ. ನನ್ನ ಕಾಮಗಾರಿಗೆ ಸಣ್ಣ ನಾಮಫಲಕ ಕೂಡ ಅಳವಡಿಸಿಲ್ಲ. ನನ್ನ ಹೆಸರು ಬರೆಸಲು ಮುಜುಗರವಾದರೆ ಬಿಡಿ, ರಮೇಶ ಜಿಗಜಿಣಗಿ ಎಂದು ಬರೆಯಿಸಬೇಡಿ, ಕನಿಷ್ಟ ಪಕ್ಷ ವಿಜಯಪುರ ಸಂಸದರ ಅನುದಾನದಿಂದ ನಿರ್ಮಾಣವಾದ ಕಟ್ಟಡ ಎಂದಾದರೂ ಬರೆಸಿ ಹಾಕಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾರಾಷ್ಟ್ರ ಮಾದರಿಯಲ್ಲಿ ಪ್ಲಾಸ್ಟಿಕ್‌ ತ್ಯಾಜ್ಯ ಬಳಸಿ:

ಪರಿಸರಕ್ಕೆ ವಿರೋಧಿಯಾಗಿರುವ ಪ್ಲಾಸ್ಟಿಕ್‌ ಸಂಪೂರ್ಣ ದೂರವಾಗಬೇಕಿದೆ. ಸಂಗ್ರಹಿಸಿದ ಪ್ಲಾಸ್ಟಿಕ್‌ನ್ನು ಮಹಾರಾಷ್ಟ್ರದಲ್ಲಿ ರಸ್ತೆ ಮೊದಲಾದ ಕಾಮಗಾರಿಗಳಲ್ಲಿ ಬಳಕೆ ಮಾಡಲಾಗುತ್ತದೆ. ಇಲ್ಲಿಯೂ ಈ ಬಗ್ಗೆ ಮಹಾನಗರ ಪಾಲಿಕೆ ಗಮನ ಹರಿಸಬೇಕು. ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ವ್ಯವಸ್ಥೆ ಕಂಡುಕೊಂಡಿರುವ ಜಿಲ್ಲೆಗಳಿಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಅಧ್ಯಯನ ಮಾಡಬೇಕು. ಸಂಗ್ರಹಿಸಿದ ಪ್ಲಾಸ್ಟಿಕ್‌ ತ್ಯಾಜ್ಯ ಇತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಜಿಲ್ಲೆಗಳಿಗೆ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಅಧ್ಯಯನ ಮಾಡಬೇಕು. ಅದನ್ನು ನಮ್ಮಲ್ಲಿಯೂ ಅನುಷ್ಠಾನ ಮಾಡಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಮಾತನಾಡಿ, ಮಹಾನಗರವನ್ನು ಪ್ಲಾಸ್ಟಿಕ್‌ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ಅನೇಕ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ವಿವಿಧ ಅಂಗಡಿಗಳಲ್ಲಿ ಜಪ್ತು ಮಾಡಿಕೊಳ್ಳಲಾಗಿರುವ 14 ಟನ್‌ ಪ್ಲಾಸ್ಟಿಕ್‌ ಅನ್ನು ತಮ್ಮ ಸ್ವಂತ ಖರ್ಚಿನಲ್ಲಿ ಜೆಕೆ ಸಿಮೆಂಟ್‌ ಒಯ್ದಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಮಾತನಾಡಿ, ಈ ಹಿಂದೆ ನಮ್ಮ ಪೂರ್ವಜರು ಪ್ಲಾಸ್ಟಿಕ್‌ ಇಲ್ಲದೇ ಜೀವನ ನಡೆಸಿದ್ದಾರೆ. ಈಗ ಪ್ಲಾಸ್ಟಿಕ್‌ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಚರಂಡಿ ಬ್ಲಾಕ್‌ ಆಗುವುದು ಪ್ಲಾಸ್ಟಿಕ್‌ ಕಾರಣದಿಂದಾಗಿಯೇ. ಪ್ಲಾಸ್ಟಿಕ್‌ ಪರಿಸರದಿಂದ ದೂರವಾದರೆ ಈ ಸಮಸ್ಯೆಗಳು ಬರುವುದಿಲ್ಲ. ಪ್ಲಾಸ್ಟಿಕ್‌ ಬ್ಯಾಗ್‌ ಒಂದೆರಡು ಬಾರಿ ದೊರಕುವುದು ಪುನರಾವರ್ತನೆಯಾದರೆ ಅದು ಹೋಟೆಲ್‌ ಇದ್ದರೆ ಆ ಹೋಟೆಲ್‌ನ ಫುಡ್‌ ಲೈಸನ್ಸ್‌ ಹಾಗೂ ಅಂಗಡಿಯಲ್ಲಿ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ವಸ್ತುಗಳು ಕಂಡು ಬಂದರೆ ಆ ಅಂಗಡಿಯ ಟ್ರೇಡ್‌ ಲೈಸನ್ಸ್‌ ಕಡ್ಡಾಯವಾಗಿ ರದ್ದುಗೊಳಿಸಿ, ಕಡ್ಡಾಯವಾಗಿ ಪ್ಲಾಸ್ಟಿಕ್‌ ಬಳಸುವುದಿಲ್ಲ ಎಂದು ಬಾಂಡ್‌ ಬರೆದುಕೊಟ್ಟನಂತರವಷ್ಟೇ ಅವರ ಲೈಸನ್ಸ್‌ ನವೀಕರಣ ಮಾಡಲು ಅವಕಾಶ ನೀಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಆಶ್ರಯ ಮನೆ ಮಜಬೂತ್‌ ಇಲ್ಲ:

ನಗರದಲ್ಲಿ ಬಡ ಜನರಿಗಾಗಿ ಕಟ್ಟುತ್ತಿರುವ ಆಶ್ರಯ ಮನೆಗಳ ಗುಣಮಟ್ಟದ ಬಗ್ಗೆ ಸಂಶಯ ವ್ಯಕ್ತವಾಗುತ್ತದೆ. ನೋಡಲು ಚೆನ್ನಾಗಿವೆ. ಆದರೆ ಕಟ್ಟಡ ಮಜಬೂತ್‌ ಇಲ್ಲ. ಈ ಬಗ್ಗೆ ಅನೇಕ ದೂರುಗಳು ಬಂದಿವೆ. ಬಡವರ ಮನೆಗಳು ಮಜಬೂತ್‌ ಇಲ್ಲವಾದರೆ ಏನು ಅರ್ಥ? ಈ ರೀತಿ ಮಾಡಬೇಡಿ. ನಾನೇ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವೆ ಎಂದು ರಮೇಶ ಜಿಗಜಿಣಗಿ ಹೇಳಿದರು. ಸಭೆಯಲ್ಲಿ ಜಿ.ಪಂ ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಗೋವಿಂದ ರಡ್ಡಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸೇರಿದಂತೆ ಮುಂತಾದವರು ಇದ್ದರು.
 

click me!