ವಿಜಯಪುರ: ಮ್ಯಾನ್‌ಹೋಲ್‌ನಿಂದ ಹೊರಬಂದ ಗಬ್ಬು ನೀರು!

By Web Desk  |  First Published Oct 27, 2019, 11:26 AM IST

ಜೋಡಗುಮ್ಮಟ ಸ್ಲಂ ಬಡಾ​ವ​ಣೆ, ಜಮಖಾನೆಗಲ್ಲಿ ನಿವಾಸಿಗಳ ನರ​ಕ​ಯಾ​ತನೆ| ವಿಜಯಪುರ-ಜಮಖಂಡಿ ಮುಖ್ಯರಸ್ತೆಯ ಬದಿಗೆ ಇರುವ ಈ ಸ್ಲಂ ಬಡಾವಣೆಯಲ್ಲಿ ಜಲಪಾತದಂತೆ ಚರಂಡಿ ನೀರು ಹರಿಯುತ್ತಿದೆ| ವಾಹನ ಸಂಚಾರ ಒಂದು ವಾರದಿಂದ ಸಂಪೂರ್ಣ ಬಂದ್‌| ಮಳೆ ನೀರು ಹಾಗೂ ಚರಂಡಿ ನೀರು ಹೆಚ್ಚಾಗಿ ಹರಿದು ಧುಮ್ಮಿಕ್ಕುತ್ತಲೇ ಇದೆ|


ಖಾಜಾಮೈನುದ್ದೀನ್‌ ಪಟೇಲ್‌ 

ವಿಜಯಪುರ(ಅ.27): ಮ್ಯಾನ್‌ಹೋಲ್‌ನಿಂದ ಹರಿಯುತ್ತಿರುವ ಗಬ್ಬು ನೀರು ರಸ್ತೆ ತುಂಬೆಲ್ಲ ಹರಿದಾಡಿ ಈ ಭಾಗದ ಜನರ ಜೀವನ ನರಕ ಮಾಡಿದೆ. ಹೌದು, ನಗರದ ಐತಿಹಾಸಿಕ ತಾಜ್‌ ಬಾವಡಿ ಸಮೀಪವಿರುವ ಜೋಡಗುಮ್ಮಟ ಸ್ಲಂ ಬಡಾವಣೆ ಹಾಗೂ ಜಮಖಾನೆ ಗಲ್ಲಿಯ ನಿವಾಸಿಗಳು ಕಳೆದ 5-6 ದಿನಗಳಿಂದ ಇಂತಹ ಪರಿಸ್ಥಿತಿಯಲ್ಲಿಯೇ ಜೀವನ ಸಾಗಿಸುವಂತಾಗಿದೆ.

Latest Videos

undefined

ವಿಜಯಪುರ-ಜಮಖಂಡಿ ಮುಖ್ಯರಸ್ತೆಯ ಬದಿಗೆ ಇರುವ ಈ ಸ್ಲಂ ಬಡಾವಣೆಯಲ್ಲಿ ಜಲಪಾತದಂತೆ ಚರಂಡಿ ನೀರು ಹರಿಯುತ್ತಿದೆ. ಹೀಗಾಗಿ ವಾಹನ ಸಂಚಾರ ಒಂದು ವಾರದಿಂದ ಸಂಪೂರ್ಣ ಬಂದ್‌ ಆಗಿದೆ. ಇಲ್ಲಿನ ರಸ್ತೆಯಲ್ಲಿರುವ ಐದಾರು ಮ್ಯಾನ್‌ ಹೋಲ್‌ಗಳು ತೆರೆದುಕೊಂಡಿದ್ದು, ಮಳೆ ನೀರು ಹಾಗೂ ಚರಂಡಿ ನೀರು ಹೆಚ್ಚಾಗಿ ಹರಿದು ಧುಮ್ಮಿಕ್ಕುತ್ತಲೇ ಇದೆ. ಮ್ಯಾನ್‌ಹೋಲ್‌ಗಳಿಂದ ಜಿನುಗುವ ಚರಂಡಿ ನೀರು ರಸ್ತೆಗೆ ನುಗ್ಗಿದೆ. ಅಷ್ಟೇ ಅಲ್ಲ, ಕೆಲವರ ಮನೆಗಳಿಗೂ ದಾಳಿಯಿಟ್ಟಿದೆ. ಅವರು ಈ ನರಕ ಯಾತನೆಯಿಂದ ಮನೆಯನ್ನೇ ತೊರೆದಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಳೆ ನೀರು, ಚರಂಡಿ ನೀರು ಸೇರಿಕೊಂಡು ಗಲೀಜು ವಾಸನೆ ಬರುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ನಿತ್ಯ ನರಕವಾದಂತಾಗಿದೆ. ಇದರಿಂದಾಗಿ ಇಲ್ಲಿನ ಸ್ಥಳೀಯ ಜನರು ಮೂಗು ಮುಚ್ಚಿಕೊಂಡು ಓಡಾಡುವುದೇ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ ಇಡೀ ಬಡಾವಣೆಯೇ ಚರಂಡಿ ನೀರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಸಾರ್ವಜನಿಕರು ಇಂತಹ ಪರಿಸ್ಥಿತಿ ನೋಡಿದ ಜನರು ಇದನ್ನು ಪಾಲಿಕೆಯವರು ಎಂದು ಇದನ್ನು ಸರಿ ಮಾಡುತ್ತಾರೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಇತ್ತ ತಿರುಗಿಯೂ ನೋಡಿಲ್ಲ ಎಂಬುವುದು ಸ್ಥಳೀಯರ ಆಕ್ರೋಶವಿದೆ. ಹೀಗಾಗಿ ಬಂದಿದ್ದು ಅನುಭವಿಸಲೇಬೇಕು ಎಂದು ಸಾರ್ವಜನಿಕರು ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ನರಕಯಾತನೆ ಅನುಭವಿಸುತ್ತ ಬದುಕುತ್ತಿರುವುದು ವಿಪರ್ಯಾಸವೇ ಸರಿ.

ಚರಂಡಿ ನೀರಿನ ಮೇಲೆ ನಡೆಯುವ ಜನರು:

ಸಾಮಾನ್ಯವಾಗಿ ಎಲ್ಲರ ಮನೆ ಹೊರಗೆ ಕಾಲಿಟ್ಟರೆ ಟಾರು ರಸ್ತೆ ಮೇಲೆ ಓಡಾಡುತ್ತಾರೆ. ಆದರೆ ಇಲ್ಲಿನ ಜನರು ಚರಂಡಿ ನೀರಿನ ಮೇಲೆ ನಡೆಯುವಂತ ಸ್ಥಿತಿ ಬಂದಿದೆ. ಮನೆಯ ಮುಂದೆಯೇ ನೀರು ಹರಿಯುತ್ತಿರುವುದು ನೋಡುತ್ತಿದ್ದಾರೆ. ಇಲ್ಲಿನ ಬಡಾವಣೆಯ ನಿವಾಸಿಗಳು ಪಡುತ್ತಿರುವ ತೊಂದರೆ ಅಷ್ಟಿಷ್ಟಲ್ಲ. ಇನ್ನೂ ಕೆಲವರ ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಚರಂಡಿ ನೀರಿನಲ್ಲಿಯೇ ಬದುಕು ಸಾಗಿಸಬೇಕಿದೆ.
ಕೆಲ ಸ್ಥಿತಿವಂತರು ವಾಸನೆಗೆ ಹೆದರಿ ಮನೆಗೆ ಕೀಲಿ ಜಡಿದು ಬೇರೆ ಕಡೆಗೆ ಪ್ರಯಾಣ ಬೆಳೆಸಿದ್ದಾಗಿದೆ. ಆದರೆ ಬಡವರು ಮಾತ್ರ ಹೊರಗಡೆ ಹೋಗಲು ಸಾಧ್ಯವಾಗದೇ ಮನೆ ಬಾಗಿಲು ಬಂದ್‌ ಮಾಡಿ ನರಕಯಾತನೆ ಅನುಭವಿಸುತ್ತಿದ್ದಾರೆ.

ಸಾಂಕ್ರಾಮಿಕ ರೋಗದ ಭೀತಿ:

ಚರಂಡಿ ನೀರಿನಲ್ಲಿ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆ, ನೊಣಗಳಿಂದ ನಿವಾಸಿಗಳ ಆರೋಗ್ಯದ ಮೇಲೆಯೂ ಕೆಟ್ಟಪರಿಣಾಮ ಬೀರುತ್ತಿದೆ. ಅಲ್ಲಿ ಸಾಕಷ್ಟುಸಂಖ್ಯೆಯ ಸೊಳ್ಳೆ, ನೊಣಗಳ ಉತ್ಪತ್ತಿಗೆ ಇದು ಕಾರಣವಾಗುತ್ತಿದ್ದು, ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ. ಇದರಿಂದಾಗಿ ಸಾರ್ವಜನಿಕರು ಆತಂಕಪಡುವಂತಾಗಿದೆ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ.

ನಗರದಲ್ಲಿ ಎಲ್ಲ ಕಡೆ ದೀಪಾವಳಿ ಹಬ್ಬದ ಭರಾಟೆ ಇದೆ. ಆದರೆ ಈ ಭಾಗದ ಜನರಿಗೆ ಹಬ್ಬವೇ ಇಲ್ಲದಾಗಿದೆ. ತಮ್ಮ ಸಂಬಂಧಿಗಳ ಮನೆಗೆ ಹೋಗಿ ದೀಪಾವಳಿ ನಡೆಸಲು ಮುಂದಾಗಿದ್ದಾರೆ. ಈ ವರ್ಷ ದೀಪಾವಳಿಗೆ ಸಂಭ್ರಮ ಇಲ್ಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲಿ ಹಬ್ಬ ಮಾಡುವುದು ಎಂದು ಸ್ಥಳೀಯರು ಕಣ್ಣಿರು ಹಾಕುತ್ತಿದ್ದಾರೆ.

ಇಲ್ಲಿ ಕಳೆದ ನಾಲ್ಕೈದು ದಿನಗಳಿಂದ ಈ ಸಮಸ್ಯೆ ನಡೆಯುತ್ತಿದೆ. ಇಲ್ಲಿ ಯಾವ ಅಧಿಕಾರಿಯೂ ಬಂದಿಲ್ಲ. ಬಂದರೂ ಸಮಸ್ಯೆಗೆ ಪರಿಹಾರ ಮಾಡದೇ ನೆಪ ಹೇಳಿ ಹೋಗುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಎಲ್ಲಿ ಓವರ್‌ ಪ್ಲೋ ಆಗಿದೆ ಎಂದು ಪತ್ತೆ ಹಚ್ಚಿ ನಿವಾಸಿಗಳಿಗೆ ಈ ಕಷ್ಟದಿಂದ ಪಾರು ಮಾಡಬೇಕು ಎಂದು ಸ್ಥಳೀಯ ನಿವಾಸಿ ಅಬ್ಬಾಸ್‌ ಮುಲ್ಲಾ ಅವರು ತಿಳಿಸಿದ್ದಾರೆ. 
 

click me!