ಕೊಳಚೆ ದುರ್ವಾ​ಸ​ನೆ​ಯಲ್ಲಿ ಮಕ್ಕಳ ಕಲಿಕೆ: ಕಣ್ಮುಚ್ಚಿ ಕುಳಿತ ಶಿಕ್ಷಣ ಇಲಾಖೆ

By Web DeskFirst Published Nov 6, 2019, 11:48 AM IST
Highlights

ಕೊಳಚೆ ದುರ್ವಾ​ಸ​ನೆ​ಯಲ್ಲಿ ಮಕ್ಕಳ ಓದು, ಬರಹ| ಶಾಲಾ ಆವ​ರ​ಣ​ದಲ್ಲಿ ಚರಂಡಿ ನೀರು| ಮಕ್ಕಳ ಆರೋಗ್ಯ ಮೇಲೆ ದುಷ್ಪ​ರಿಣಾಮ|ಮಕ್ಕಳು ಶೌಚಾಲಯಕ್ಕೆ ಹೋಗಬೇಕಾದರೆ ಕೆಸರು, ಕಸ ದಾಟಿಕೊಂಡು ಹೋಗಬೇಕಾದ ಪರಿಸ್ಥಿತಿ| ಚರಂಡಿ ಹಾಗೂ ಮಳೆ ನೀರು ನಿಂತಿರುವುದರಿಂದ ಆಟದ ಮೈದಾನ ಗಬ್ಬೆದ್ದು ನಾರುತ್ತಿದೆ|
 

ಖಾಜಾಮೈನುದ್ದೀನ್‌ ಪಟೇಲ್‌ 

ವಿಜಯಪುರ[ನ.6]: ಶಾಲೆಯ ಆವರಣದೊಳಗೆ ಚರಂಡಿ ನೀರಿನಿಂದ ಹೊರ ಸೂಸುವ ದುರ್ವಾಸನೆ... ಪ್ರಯಾಸ ಪಟ್ಟು ಶಾಲೆ ಪ್ರವೇಶಿಸುವ ಮಕ್ಕಳು... ಶೌಚಾಲಯಕ್ಕೆ ಹೋಗಲು ಸರ್ಕಸ್‌...

ಇದು ನಗರದ ಸರ್ಕಾರಿ ಉರ್ದು ಶಾಲೆ ನಂ.6 ದುಃಸ್ಥಿತಿ. ಹೌದು, ನಗರದ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ಇರುವ ಸರ್ಕಾರ ಉರ್ದು ಗಂಡು ಮಕ್ಕಳ ಶಾಲೆ ನಂ.6 ಆವರಣದಲ್ಲಿ ಚರಂಡಿ ನೀರು ಹರಿಯುತ್ತಿರುವುದರಿಂದ ವಿದ್ಯಾರ್ಥಿಗಳು ನರಕ ಯಾತನೆ ಅನುಭವಿಸುವಂತಾಗಿದೆ. ಆದರೂ ಜನಪ್ರತಿನಿಧಿಗಳು, ಅಧಿಕಾರಿಗಳು ತಮಗೇನೂ ಸಂಬಂಧವಿಲ್ಲ ಎಂಬಂತೆ ಕಣ್ಣುಮುಚ್ಚಿ ಕುಳಿತುಕೊಂಡಿರುವುದು ವಿಪರ್ಯಾಸ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಗರದಲ್ಲಿ ಸುರಿದ ಮಳೆಯಿಂದ ಮಳೆ ಹಾಗೂ ಚರಂಡಿ ನೀರು ಜೋಡಗುಮ್ಮಟ ಸ್ಲಂ ಬಡಾವಣೆಯಲ್ಲಿ ಹರಿಯುತ್ತಿರುವ ಚರಂಡಿ ನೀರು ಸರ್ಕಾರಿ ಹೈಸ್ಕೂಲ್‌ ಮೈದಾನ ಮೂಲಕ ಶಾಲಾ ಆವರಣದಲ್ಲಿ ನಿರಂತರವಾಗಿ ಹರಿಯುತ್ತಿದೆ. ಈ ನೀರು ದುರ್ವಾಸನೆ ಬೀರುತ್ತಿದೆ. ಬಿಸಿ ಅಡುಗೆ ತಯಾರಿಸುವ ಕೊಠಡಿಯ ಸುತ್ತ ಗಲೀಜು ನೀರು ಸಂಗ್ರಹವಾಗಿದೆ. ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಆತಂಕ ಸೃಷ್ಟಿಸಿದೆ.

ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಒಟ್ಟು 100 ವಿದ್ಯಾರ್ಥಿಗಳಿದ್ದಾರೆ. ಶಾಲೆಯ ಆವರಣದಲ್ಲಿ ಕುಲುಷಿತ ವಾತಾವರಣ ಇರುವುದಿಂದ ಪಾಲಕರು ತಮ್ಮ ಮಕ್ಕಳನ್ನು ವಿದ್ಯಾರ್ಥಿಗಳು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಈ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ.

ಶಾಲೆ ಮುಂದೆ ಚರಂಡಿಯಲ್ಲಿ ನೀರು ನಿಂತು ಗಬ್ಬು ವಾಸನೆ ಎದ್ದಿದೆ. ಕೊಳಚೆ ನೀರು ಸರಾಗವಾಗಿ ಹರಿಯದೇ ಚರಂಡಿಯಲ್ಲಿ ನಿಂತು ರೋಗಕ್ಕೆ ಕಾರಣವಾಗಿದೆ. ಆಸುಪಾಸಿನಲ್ಲಿ ಸಂಚರಿಸಲು ಸಾಧ್ಯವಿಲ್ಲದ ಸ್ಥಿತಿ ಇದೆ. ಇನ್ನು ವಿದ್ಯಾರ್ಥಿಗಳು ಪಾಠ ಕೇಳುವ, ಶಿಕ್ಷಕ ವರ್ಗದವರು ಪಾಠ ಮಾಡುವ ಸ್ಥಿತಿ ಹೇಗೆ? ಮಧ್ಯಾಹ್ನದ ಅಡುಗೆ ಸಿದ್ಧತೆ, ಸೇವನೆ ಹೇಗೆ? ಗಬ್ಬು ವಾಸನೆಯಲ್ಲಿ ಪಾಠ ಕೇಳುವ ಸಂಕಟ ಈ ಶಾಲೆಯ ಮಕ್ಕಳದಾಗಿದೆ.

ಶೌಚಾಲಯಕ್ಕೆ ಸರ್ಕಸ್‌:

ಶಾಲೆಯ ಆವರಣದಲ್ಲಿ ಕಲುಷಿತ ನೀರು ನಿಂತಿರುವುದರಿಂದ ಮಕ್ಕಳು ಏಳುತ್ತ, ಬೀಳುತ್ತ ಶೌಚಾಲಯಕ್ಕೆ ಹೋಗುವ ಸ್ಥಿತಿ ಇದೆ. ಶೌಚಾಲಯದ ಮುಂದೆ ತುಂಬಾ ನೀರು ನಿಂತಿರುವುದರಿಂದ ಮಕ್ಕಳ ಶೌಚಾಲಯಕ್ಕೆ ಹೋಗಬೇಕಾದರೆ ಕೆಸರು, ಕಸ ದಾಟಿಕೊಂಡು ಹೋಗಬೇಕು. ಆದರೆ ಕೆಲವೊಂದು ಸಾರಿ ಮಕ್ಕಳು ಕಾಲು ಜಾರಿ ಕಲುಷಿತ ನೀರಿನಲ್ಲಿ ಬಿದ್ದಿದ್ದಾರೆ. ಮೈ ರಾಡಿ ಮಾಡಿಕೊಂಡು ಮನೆಗೆ ಹೋಗಿರುವುದು ಹಲವಾರು ಉದಾಹರಣೆಗಳಿವೆ.

ಹಂದಿಗಳ ದರ್ಬಾರ್‌:

ಶಾಲೆಯ ಆವರಣದಲ್ಲಿ ನಿಂತಿರುವ ಕಲುಷಿತ ನೀರಿನಲ್ಲಿ ಎಲ್ಲೆಂದರಲ್ಲಿ ಓಡಾಡಿಕೊಂಡಿರುವ ಹಂದಿಗಳು. ಶಾಲೆಯ ಆವರಣದಲ್ಲಿ ಮಕ್ಕಳು ಓಡಾಡುವ ಬದಲಿಗೆ ಹಂದಿಗಳು ಓಡಾಡಿಕೊಂಡಿವೆ. ಕೊಳಕು ನೀರು ಶಾಲೆ ಬಳಿ ನಿಂತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಹಾಗಾಗಿ, ಶಾಲೆಗೆ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ ಎಂದು ಎಸ್‌ಡಿಎಂಸಿ ಸದಸ್ಯರು, ಪಾಲಕರು ಹೇಳಿದರು.

ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಹೈಸ್ಕೂಲ್‌ ಮೈದಾನದಲ್ಲಿ ಕೊಳಕು ನೀರು ನಿಂತಿರುವುದರಿಂದ ಇಲ್ಲಿ ಮಕ್ಕಳಿಗೆ ಆಟವಾಡಲು ಆಗುತ್ತಿಲ್ಲ. ಬೆಳಗ್ಗೆ-ಸಂಸೆ ಈ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದಾರೆ. ಈಗ ಚರಂಡಿ ಹಾಗೂ ಮಳೆ ನೀರು ನಿಂತಿರುವುದರಿಂದ ಮೈದಾನ ಗಬ್ಬು ನಾರುತ್ತದೆ. ಮೊಳಕಾಲು ತನಕ ಕೆಸರು ಇದೆ. ಆದರೂ ಈ ಸಮಸ್ಯೆಯನ್ನು ಸಂಬಂಧಪಟ್ಟವರು ಕಣ್ಣು ಮುಚ್ಚಿ ಕುಳಿತ್ತಿರುವುದು ವಿಪರ್ಯಾಸ.

ಕೊಳಚೆ ನೀರು ನಿಂತ ಪರಿಣಾಮ ರೋಗ ಹರಡುವ ಅಪಾಯ ಎದುರಾಗಿದೆ. ಶಾಲಾ ಮಕ್ಕಳು ಚರಂಡಿ ಗಬ್ಬುವಾಸನೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆ ಮೈದಾನ ಇದ್ದೂ ಇಲ್ಲದಂತಾ​ಗಿದೆ. ವಿದ್ಯಾರ್ಥಿಗಳು ದುರ್ವಾಸನೆಯಲ್ಲೇ ಪಾಠ ಕೇಳಬೇಕಾದ ಸ್ಥಿತಿಯೂ ಬಂದಿದೆ. ಇಲ್ಲಿನ ಸಮಸ್ಯೆ ಕುರಿತು ಪಾಲಿಕೆ ಆಯುಕ್ತರಿಗೆ ಎಷ್ಟೋ ಸಲ ದೂರು ಕೊಟ್ಟಿದ್ದೇವೆ. ಸಂಬಂಧಿಸಿ​ದ​ವರು ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು ವಿಜಯಪುರದ ನಂ. 6 ಉರ್ದು ಶಾಲೆಯ ಶಿಕ್ಷಕ  ಪಿ.ಎ. ಚಿಕ್ಕಅಗಸಿ ಅವರು ಹೇಳಿದ್ದಾರೆ. 

ನಾವು ಪ್ರತಿದಿನ ಹೊಲಸು ನೀರಿನಲ್ಲಿ ಓಡಾಡುವಂತಾಗಿದೆ. ಹಲವು ಬಾರಿ ಕಾಲು ಜಾರಿ ಕೊಳಚೆ ನೀರಿನಲ್ಲಿ ಬಿದ್ದಿದ್ದೇವೆ. ನಾವು ಶೌಚಾಲಯಕ್ಕೆ ಹೋಗಲು ಆಗುತ್ತಿಲ್ಲ. ಮನೆಗೆ ಹೋಗ ಬೇಕಾದರೆ ಮನೆ ದೂರವಿದ್ದು, ಶೌಚಾಲಯಕ್ಕೆ ತೆರಳಬೇಕಾದರೆ ಶಾಲೆ ಬಿಟ್ಟು ಮನೆಗೆ ಹೋಗುತ್ತಿದ್ದೇವೆ ಎಂದು ವಿದ್ಯಾರ್ಥಿನಿ ಸುಪ್ರೀಯಾ ನಾಲಬಂದ ಅವರು ಹೇಳಿದ್ದಾರೆ. 

click me!