ಕೃಷ್ಣಾ ಮೇಲ್ದಂಡೆ 3ನೇ ಹಂತ ಅನುಷ್ಠಾನಕ್ಕೆ ಕಟಿಬದ್ಧ, ಸಿಎಂ ಬೊಮ್ಮಾಯಿ!

By Kannadaprabha NewsFirst Published Apr 27, 2022, 3:31 AM IST
Highlights
  • ತಾಳಿಕೋಟೆಯಲ್ಲಿ ಏತನೀರಾವರಿ ಯೋಜನೆಗೆ ಶಂಕು
  • ನನಗೆ ಭಗೀರಥನಾಗುವ ಕನಸಿಲ್ಲ, ಪ್ರಚಾರವೂ ಬೇಕಿಲ್ಲ
  • ಯೋಜನೆಯ ಹಂತ-ಕಾಮಗಾರಿಯ ಶಂಕುಸ್ಥಾಪನೆ

ವಿಜಯಪುರ(ಏ.27): ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಕಾಮಗಾರಿಗಳ ಅನುಷ್ಠಾನಕ್ಕೆ ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆಯ ಹಂತ-01 ಪೈಪ್‌ ವಿತರಣೆ ಜಾಲದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಯೋಜನೆ ಸಂಬಂಧ ಕೋರ್ಚ್‌ನಲ್ಲಿ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ. ಇನ್ನು 2-3 ತಿಂಗಳಲ್ಲಿ ಈ ಸಂಬಂಧ ಆದೇಶ ಹೊರಬೀಳುವ ಸಾಧ್ಯತೆ ಇದೆ. ಬಳಿಕ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನೆ ಜಾರಿಗೊಳಿಸಲಾಗುವುದು. ಈ ಯೋಜನೆಗಾಗಿ ಈ ಬಾರಿ ಬಜೆಟ್‌ನಲ್ಲಿ .5,000 ಕೋಟಿ ತೆಗೆದಿಡಲಾಗಿದೆ. 3ನೇ ಹಂತದ ಯೋಜನೆಗೆ ಸಂಬಂಧಿಸಿದಂತೆ ಕಾನೂನಾತ್ಮಕ ಹೋರಾಟಕ್ಕೆ ಅಂತಿಮ ತೆರೆ ಬಿದ್ದರೆ 130 ಟಿಎಂಸಿ ನೀರು ಸದ್ಬಳಕೆ ಮಾಡಿಕೊಳ್ಳಲು ಕೈಗೊಳ್ಳಬೇಕಾದ ಎಲ್ಲ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲಾಗುವುದು ಎಂದರು.

ಕೊಪ್ಪಳ: ಕನಸಿನ‌ ನೀರಾವರಿ ಯೋಜನೆಗೆ ವಿಘ್ನ, ಟ್ರಯಲ್‌ ವೇಳೆ ಪೈಪ್ ಒಡೆದ ನೀರು ಪೋಲು

ಭಗೀರಥನಾಗುವ ಕನಸಿಲ್ಲ
ನನಗೆ ಭಗೀರಥನಾಗುವ ಕನಸಿಲ್ಲ. ಪ್ರಚಾರವೂ ಬೇಕಿಲ್ಲ. ಆದರೆ, ರೈತರು ನಲುಗಬಾರದೆನ್ನುವುದು ನನ್ನ ಕಾಳಜಿಯಾಗಿದೆ. ಬರದ ನೆಲಕ್ಕೆ ಹಸಿರು ಸೀರೆ ಉಡಿಸಬೇಕೆಂಬುದು ನನ್ನ ಕನಸಾಗಿದೆ. ಈ ಕಾರಣ- ಕಾಳಜಿಯಿಂದಾಗಿ ಏತ ನೀರಾವರಿಯಂತಹ ನೀರಾವರಿ ಯೋಜನೆಗಳು ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಪುನರ್ವಸತಿಗೆ ಸಿದ್ಧ:
ಆಲಮಟ್ಟಿಅಣೆಕಟ್ಟೆಎತ್ತರ 524.256 ಮೀಟರ್‌ಗೆ ಹೆಚ್ಚಿಸುವುದರಿಂದ ಮುಳುಗಡೆಯಾಗಲಿರುವ 20 ಹಳ್ಳಿಗಳ ಪುನರ್ವಸತಿ ಮತ್ತು ಪುನರ್‌ ನಿರ್ಮಾಣಕ್ಕೆ ಹಾಗೂ ಭೂಸ್ವಾಧೀನಕ್ಕೆ ಎಷ್ಟುಹಣದ ಅವಶ್ಯಕತೆ ಆಗುತ್ತದೆಯೋ ಅಷ್ಟೂಹಣವನ್ನು ರಾಜ್ಯ ಸರ್ಕಾರ ಒದಗಿಸಲು ಸಿದ್ಧವಿದೆ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಅನುಷ್ಠಾನಕ್ಕೆ .55,000 ಕೋಟಿ ಅಗತ್ಯವಿದೆ. ಭಾರಿ ಮೊತ್ತದ ಹಣ ಒದಗಿಸಲು ರಾಜ್ಯ ಸರ್ಕಾರ ಸಿದ್ಧವಿದೆ. ಮೂರನೇ ಹಂತದ ಯೋಜನೆ ಬೇಗನೆ ಪೂರ್ಣಗೊಂಡು ರೈತರ ಜಮೀನಿಗೆ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆ ಎಂದು ಹೇಳಿದರು.

Karnataka Politics: ಕಾಂಗ್ರೆಸ್‌ ಕಾವೇರಿ ಪರ ಹೋರಾಟ ಮಾಡಲಿಲ್ಲ: ದೇವೇಗೌಡ ಟೀಕೆ

ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ, ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಇತರರಿದ್ದರು.

ರೈತರ ಹಿತಕ್ಕಾಗಿ ಗಲ್ಲಿಗೇರಲು ಸಿದ್ಧ
ಈ ಹಿಂದಿನ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು ಯುಕೆಪಿ ಬಗ್ಗೆ ಹೇಳಿಕೆ ನೀಡಿ ನ್ಯಾಯಾಲಯದ ಕ್ಷಮೆ ಕೋರಿದ್ದರು. ಯುಕೆಪಿ ಬಗ್ಗೆ ಹೇಳಿಕೆ ನೀಡಬಾರದು. ನೀವು ಕೂಡ ನ್ಯಾಯಾಲಯದ ಕ್ಷಮೆ ಕೇಳುವ ಪ್ರಸಂಗ ಬರಬಹುದು ಎಂದು ಹೇಳಿದ್ದರು. ಆದರೆ ನನಗೆ ರಾಜ್ಯದ ಹಾಗೂ ರೈತರ ಹಿತ ಕಾಯುವುದು ಮುಖ್ಯ. ನಾನು ಕ್ಷಮೆ ಕೇಳುವವನಲ್ಲ. ಜೈಲಿಗೆ ಅಟ್ಟಿಗಲ್ಲಿಗೇರಿಸಿದರೂ ನಾನು ರೈತರ ಹಾಗೂ ರಾಜ್ಯದ ಹಿತಕ್ಕಾಗಿ ಎಲ್ಲದ್ದಕ್ಕೂ ಸಿದ್ಧ ಎಂದು ಹೇಳಿದ್ದೆ ಎಂದು ಸ್ಮರಿಸಿದರು.

click me!