Sep 29, 2024, 4:47 PM IST
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಈಗ ಅಭಿಮಾನಿಗಳ ಪಾಲಿಗೆ ದೇವರಾಗಿದ್ದಾರೆ. ಮನೆ ಮನೆಯಲ್ಲೂ ಮನ ಮನದಲ್ಲೂ ಅಪ್ಪು ದೇವರಂತೆ ನೆಲೆಸಿದ್ದಾರೆ. ಮಹಾಲಯ ಅಮವಾಸ್ಯೆಯಲ್ಲಿ ಅಪ್ಪು ಅಭಿಮಾನಿಗಳು ಪುನೀತ್ರನ್ನ ನೆನೆದು ಪೂಜಿಸಿ ಆಶೀರ್ವಾದ ಪಡೆಯೋ ಅದೆಷ್ಟೋ ಉದಹಾರಣೆಗಳು ಸಿಗುತ್ತವೆ. ಇದೀಗ ಇಲ್ಲೊಬ್ಬ ಅಭಿಮಾನಿ ಪುನೀತ್ರಾಜ್ಕುಮಾರ್ರ ದೇವಸ್ಥಾನವನ್ನೇ ಪ್ರತಿಷ್ಠಾಪಿಸಿದ್ದಾನೆ. ಹಾಗಾದ್ರೆ ಅಪ್ಪು ಟೆಂಪಲ್ ಎಲ್ಲಿದೆ. ಹೇಗಿದೆ.? ಕನ್ನಡಿಗರ ಪ್ರೀತಿಯ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಅಭಿಮಾನಿಗಳನ್ನ ಮನೆ ದೇವರು ಅಂತಾನೇ ಕರೀತಾ ಇದ್ರು. ಅಣ್ಣಾವ್ರು ಅಭಿಮಾನಿಗಳೇ ದೇವ್ರು ಅಂತಂದ್ರೆ ಅಪ್ಪು, ಅಭಿಮಾನಿಗಳೇ ನಮ್ಮನೇ ದೇವ್ರು ಅಂತ ಹಾಡಿ ಕುಣಿದು, ಅಭಿಮಾನಿಗಳಿಗೆ ಇನ್ನಷ್ಟು ಮೇಲಿನ ಸ್ಥಾನ ಕೊಟ್ಟಿದ್ರು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್.
ದೊಡ್ಮನೆಯ ದೊರೆ. ದಾನ ಧರ್ಮ ಮಾಡಿ ತುಂಬು ಪ್ರೀತಿ ಕೊಡುತ್ತಿದ್ದ ಅಪ್ಪಟ ಅಪರಂಜಿ ಅಪ್ಪು. ಪುನೀತ್ ಇಲ್ಲವಾಗಿ ಮೂರು ವರ್ಷ ಆಗ್ತಾ ಬಂದಿದೆ. 29 October 2021 ಅಪ್ಪು ನಮ್ಮನ್ನೆಲ್ಲಾ ಅಗಲಿದ್ರು. ಈಗ ಪುನೀತ್ ರಾಜ್ಕುಮಾರ್ ಅಭಿಮಾನಿಗಳ ಪಾಲಿಗೆ ಅಕ್ಷರಶಃಹ ದೇವರಾಗಿದ್ದಾರೆ. ಪುನೀತ್ ಇರೋ ಗುಡಿ ಗೋಪುರಗಳು ಲೋಕಾಪರ್ಣೆ ಆಗುತ್ತಿವೆ. ಕೆಲ ಹೀರೋಗಳು ಕೊಲೆ, ಗಲಾಟೆ, ಮೀಟು ಕೇಸ್ ಗಳಿಂದ ಸುದ್ದಿ ಆಗ್ತಾರೆ. ಆದ್ರೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ತನ್ನ ವ್ಯಕ್ತಿತ್ವದಿಂದಲೇ ಎಲ್ಲರ ಮನಸ್ಸು ಗೆದ್ದವರು. ಅಪ್ಪು ಈಗ ಅಜರಾಮರ.
ಹೀಗಾಗೆ ಪುನೀತ್ಗಾಗಿ ದೇವಸ್ಥಾನ ನಿರ್ಮಾಣ ಆಗುತ್ತಿವೆ. ಹಾವೇರಿ ಜಿಲ್ಲೆಯ ಯಲಗಚ್ಚ ಗ್ರಾಮದಲ್ಲಿ ದಿವಂಗತ ಪುನೀತ್ ರಾಜಕುಮಾರ ದೇವಸ್ಥಾನ ನಿರ್ಮಾಣ ಆಗಿದೆ. ದೇವಸ್ಥಾನದ ಉದ್ಘಾಟನೆಯನ್ನ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಮತ್ತು ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜಕುಮಾರ್ ಮಾಡಿದ್ದಾರೆ. ಪುನೀತ್ ರಾಜಕುಮಾರ ಅಪ್ಪಟ ಅಭಿಮಾನಿ ಯಲಗಚ್ಚ ಗ್ರಾಮದ ಡ್ಯಾನ್ಸ್ ಮಾಸ್ಟರ್ ಪ್ರಕಾಶ ಮತ್ತು ದೀಪಾ ದಂಪತಿ ತಮ್ಮ ಮನೆಯ ಎದುರು, ತಮ್ಮದೇ ಸ್ವಂತ ಜಾಗದಲ್ಲಿ ಈ ದೇವಸ್ಥಾನ ಕಟ್ಟಿಸಿದ್ದಾರೆ. 10 ಲಕ್ಷ ವೆಚ್ಚ ಮಾಡಿ ಈ ಕಟ್ಟಡವನ್ನ ಕಟ್ಟಿಸಿದ್ದು ಪುನೀತ್ ರಾಜ್ ಕುಮಾರ್ ಪ್ರತಿಮೆಯನ್ನ ಪ್ರತಿಷ್ಠಾಪಿಸಲಾಗಿದೆ.
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಈ ದೇವಸ್ಥಾನ ಉದ್ಘಾಟನೆ ಮಾಡಿದ್ದು ವಿಶೇಷ. ಅಷ್ಟೆ ಅಲ್ಲ ನಟ ಕಿಚ್ಚ ಸುದೀಪ್ಗು ರಾಯಚೂರಿನ ಅಭಿಮಾನಿಗಳು 12 ಲಕ್ಷ ರೂಪಾಯಿ ವೆಚ್ಚದಲ್ಲಿ ಗುಡಿಯೊಂದನ್ನು ಕಟ್ಟಿಸಿದ್ದಾರೆ. ಇತ್ತೀಚೆಗಷ್ಟೆ ನಟಿ ಖುಷ್ಬುಗು ಅಭಿಮಾನಿಗಳೆಲ್ಲಾ ಸೇರಿ ದೇವಸ್ಥಾನ ನಿರ್ಮಿಸಿದ್ದಾರೆ. ಈಗ ಅಪ್ಪು ದೇವಸ್ಥಾನ ಉದ್ಘಾಟನೆ ಆಗಿದೆ. ಈಗಾಗ್ಲ ಪುನೀತ್ ರಾಜ್ ಕುಮಾರ್ ಹೆಸರನ್ನ ಅನೇಕ ರಸ್ತೆಗಳಿಗೆ, ಪಾರ್ಕ್ ಗಳಿಗೆ, ರಂಗಮಂದಿರಗಳಿಗೆ ಇಡಲಾಗಿದೆ. ಅಪ್ಪು ಪ್ರತಿಮೆಗಳು, ಪುತ್ಥಳಿಗಳು ರಾಜ್ಯದ ನಾನಾ ಕಡೆ ತಲೆ ಎತ್ತಿನಿಂತಿವೆ. ಈಗ ದೇವಸ್ಥಾನ ನಿರ್ಮಾಣ ಆಗಿದ್ದು ಅಭಿಮಾನಿಗಳು ಅಪ್ಪುಗೆ ದೇವರ ಸ್ಥಾನ ಕೊಟ್ಟಿದ್ದಾರೆ.