Nov 1, 2023, 1:33 PM IST
ಚಿಕ್ಕಮಗಳೂರು (ನ.01): ಕೂಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ದಂಪತಿ ಬಡತನದ ನಡುವೆಯೂ ಮಗನನ್ನು ಬಿಕಾಂ ಓದಿಸಿದ್ದಾರೆ. ನಮ್ಮ ದೇಶದಲ್ಲಿ ಕಡಿಮೆ ಸಂಬಳವೆಂದು ಬೇಸತ್ತು ವಿದೇಶಕ್ಕೆ ಹೋಗಲು ನಿರ್ಧರಿಸಿದ್ದಾನೆ. ಹೀಗಾಗಿ, ಆನ್ಲೈನ್‌ಲ್ಲಿ ಕಾಂಬೋಡಿಯಾದಲ್ಲಿ ಡಾಟಾ ಎಂಟ್ರಿ ಆಪರೇಟರ್ ಕೆಲಸ ಇರುವುದನ್ನು ಖಚಿತಪಡಿಸಿಕೊಂಡು ಕಾಂಬೋಡಿಯಾಗೆ ಹೋಗಿದ್ದಾನೆ. ಆದರೆ, ಅಲ್ಲಿ ಡಾಟಾ ಎಂಟ್ರಿ ಕೆಲಸವಿಲ್ಲದೇ ಭಾರತೀಯರಿಗೆ ಕರೆ ಮಾಡಿ ವಂಚಿಸಿ ಹಣ ಮಾಡುವ ದಂಧೆಯಲ್ಲಿ ಸಿಲುಕಿದ್ದಾನೆ. ತಾನು ಕೂಡ ಮೋಸದ ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ. ಈಗ ಭಾರತಕ್ಕೆ ಮರಳಿ ಹೋಗುತ್ತೇನೆಂದರೂ ಬಿಡದೇ ಚಿತ್ರಹಿಂಸೆ ನೀಡಿ ಕೆಲಸ ಮಾಡಿಸಲಾಗುತ್ತಿದೆ. ಒಂದು ವೇಳೆ ಕೆಲಸ ತೊರೆಯುವುದಾದರೆ 13 ಲಕ್ಷ ರೂ. ಹಣವನ್ನು ನೀಡಬೇಕು. ಇಲ್ಲವಾದರೆ ನಿನ್ನನ್ನು ಕೊಲೆ ಮಾಡುವುದಾಗಿ ಮಾಲೀಕ ಬೆದರಿಕೆ ಒಡ್ಡುತ್ತಿದ್ದಾನೆ ಎಂಬ ದೂರು ಕೇಳಿಬಂದಿದೆ.
ಕಾಂಬೋಡಿಯಾದಲ್ಲಿ ಸಿಲುಕಿರುವ ಯವಕನನ್ನು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಮಹಲ್ಗೋಡು ಗ್ರಾಮದ ಅಶೋಕ್ ಆಗಿದ್ದಾನೆ. ಹೆತ್ತವರಿಗೆ ಆಸರೆ ಆಗಲೇಬೇಕೆಂದು ದುಡಿಮೆಯ ದಾರಿ ನೋಡಿಕೊಂಡು ಕಾಂಬೋಡಿಯಾಗೆ ಹೋದಾಗ ಬ್ರೋಕರ್ ಗಳಿಂದ ಮೋಸ ಹೋಗಿರುವುದು ತಿಳಿದರೂ ವಿದೇಶದಿಂದ ಸ್ವದೇಶಕ್ಕೆ ವಾಪಾಸ್ ಬರಲಾಗದೆ ಬಂಧಿ ಆಗಿದ್ದಾರೆ. ಕಾಂಬೋಡಿಯಾಕ್ಕೆ ತೆರಳುವ ಮೊದಲೇ ಬ್ರೋಕರ್‌ಗಳಾದ ಭರತ್ ಮತ್ತು ನಿಕ್ಷೇಪ್ ಅವರಿಗೆ ಅಶೋಕ್ 2 ಲಕ್ಷ ರೂ. ಹಣವನ್ನು ನೀಡಿದ್ದಾರೆ. ವಾಪಾಸ್ ಭಾರತಕ್ಕೆ ತೆರಳುತ್ತೇನೆ ಎಂದಾಗ ಅದರ ಮಾಲೀಕ ಯುವಕನಿಗೆ ವಿಚಿತ್ರ ಶಿಕ್ಷೆ ನೀಡಿ ಬೆದರಿಸುತ್ತಾ ಆತನಿಂದ ಒತ್ತಾಯಪೂರ್ವಕವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಬಾಳೆಹೊನ್ನೂರು ಠಾಣೆಗೆ ದೂರು ನೀಡಲಾಗಿದ್ದು, ಸರ್ಕಾರ ನೆರವುಗೆ ಧಾವಿಸುತ್ತಾ ಕಾದು ನೊಡಬೇಕಿದೆ.