ವಿಶ್ವನಾಥ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿದಿದ್ದು, ಇದೇ ವೇಳೆ ಬಿಜೆಪಿಯಲ್ಲಿನ ಮುಸುಕಿನ ಗುದ್ದಾಟವೂ ಕೂಡ ಬಯಲಾಗಿದೆ.
ಶಿರಸಿ [ಅ.19]: ಶಿರಸಿಯ ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿಯ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ವಿಶ್ವನಾಥ ಹೆಗಡೆ ಶೀಗೆಹಳ್ಳಿ ಅಧ್ಯಕ್ಷರಾಗಿ, ವಿಮಲಾ ಹೆಗಡೆ ಉಪಾಧ್ಯಕ್ಷರಾಗಿ ಸ್ಥಾನ ಅಲಂಕರಿಸಿದ್ದಾರೆ.
ಶುಕ್ರವಾರ ಶಿರಸಿಯ ಎಪಿಎಂಸಿ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಕೇಕೆ ಹಾಕಿದರೂ ಕೂಡ ಬಿಜೆಪಿಯೊಳಗಿನ ಮುಸುಕಿನ ಗುದ್ದಾಟ ಬಯಲಾಗಿದೆ. ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧವೇ ಇನ್ನಿಬ್ಬರು ಸ್ಪರ್ಧಿಸಿ ಪಕ್ಷಕ್ಕೆ ಮುಜುಗರ ಉಂಟು ಮಾಡಿದ ಘಟನೆಯೂ ನಡೆದಿದೆ. ಕಚೇರಿ ಹೊರ ಆವಾರದಲ್ಲಿ ಶೀಗೆಹಳ್ಳಿ ಅವರೇ ನಮ್ಮ ಅಭ್ಯರ್ಥಿಯೆಂದು ಪಕ್ಷದ ಪ್ರಮುಖರು ಸಮರ್ಥಿಸಿಕೊಂಡು ಓಡಾಡಿದ ಘಟನೆ ಕೂಡ ನಡೆಯಿತು.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿ ಎಂದು ಘೋಷಣೆಯಾಗಿದ್ದ ಶಿವಳ್ಳಿ ಕ್ಷೇತ್ರದ ವಿಶ್ವನಾಥ ಹೆಗಡೆ ಶೀಗೆಹಳ್ಳಿ ವಿರುದ್ಧ ಬನವಾಸಿಯ ಶಿವಕುಮಾರ ಗೌಡ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಧಿಕೃತ ಅಭ್ಯರ್ಥಿಯಾಗಿದ್ದ ವಿಮಲಾ ಹೆಗಡೆ ವಿರುದ್ಧ ದಾಸನಕೊಪ್ಪದ ಧನಂಜಯ ಸಾಕಣ್ಣನವರ ಸ್ಪರ್ಧಿಸಿದ್ದರು. ಒಟ್ಟೂಚಲಾವಣೆಗೊಂಡ 15 ಮತಗಳಲ್ಲಿ ಬಿಜೆಪಿ ಪ್ರಾಬಲ್ಯ 10 ಮತ ಹೊಂದಿದ್ದವು. ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ 15 ರಲ್ಲಿ 8 ಮತಗಳು ಶೀಗೆಹಳ್ಳಿಗೆ ಹಾಗೂ 7 ಮತಗಳು ಶಿವಕುಮಾರ ಅವರಿಗೆ ಲಭ್ಯವಾಯಿತು. ಉಪಾಧ್ಯಕ್ಷರ ಆಯ್ಕೆಯಲ್ಲಿ ವಿಮಲಾ ಹೆಗಡೆ 9 ಮತ, ಸಾಕಣ್ಣನವರಿಗೆ 6 ಮತಗಳು ದೊರೆತವು. 11ರೈತ ಪ್ರತಿನಿಧಿ, 3 ನಾಮನಿರ್ದೇಶಿತ ಹಾಗೂ ಓರ್ವ ವ್ಯಾಪಾರಸ್ಥ ಪ್ರತಿನಿಧಿ ಸೇರಿ ಒಟ್ಟೂ15 ನಿರ್ದೇಶಕರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು. 12 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭಗೊಂಡು 1.30ಕ್ಕೆ ಚುನಾವಣಾಧಿಕಾರಿಗಳು ವಿಜಯ ಅಭ್ಯರ್ಥಿಗಳನ್ನು ಘೋಷಿಸಿ ಅಧಿಕಾರ ಹಸ್ತಾಂತರಿಸಲಾಯಿತು. ಚುನಾವಣಾ ಅಧಿಕಾರಿಯಾಗಿ ತಹಸೀಲ್ದಾರ್ ಎಂ.ಆರ್. ಕುಲಕರ್ಣಿ, ಅಧಿಕಾರಿ ಕಾಮಕರ ಇತರರು ಸಹಕಾರ ನೀಡಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೂತನ ಅಧ್ಯಕ್ಷ ವಿಶ್ವನಾಥ ಹೆಗಡೆ ಶೀಗೇಹಳ್ಳಿ ಮಾತನಾಡಿ, ಎಲ್ಲರ ಸಹಕಾರ ಪಡೆದು ಅಭಿವೃದ್ಧಿ ಮಾಡುತ್ತೇವೆ. ಹಳೆಯ ಯೋಜನೆಗಳನ್ನೂ ಮುಂದುವರಿಸುತ್ತೇವೆ ಎಂದರು. ಈವರೆಗೆ ಸಹಕಾರ ನೀಡಿದವರಿಗೆ ನಿಕಟಪೂರ್ವ ಅಧ್ಯಕ್ಷ ಸುನೀಲ ನಾಯ್ಕ ವಂದಿಸಿದರು.
ಮೂವರು ನಾಮ ನಿರ್ದೇಶಿತ ಸದಸ್ಯರು
ಎಪಿಎಂಸಿಗೆ ಸರ್ಕಾರ ಮೂವರನ್ನು ನೇಮಕ ಮಾಡುವ ಮೂಲಕ ಎಪಿಎಂಸಿ ಬಿಜೆಪಿ ತೆಕ್ಕೆಗೆ ಬೀಳಲು ಸಹಕಾರ ನೀಡಿದೆ. ಮಧು ಭಟ್ಟಭೈರುಂಬೆ, ಕುಸುಮಾ ಹೆಗಡೆ ಗುಬ್ಬಿಗದ್ದೆ, ಶಶಿಧರ ನಾಯ್ಕ ಬನವಾಸಿ ನೂತನ ಸದಸ್ಯರಾಗಿ ಆಯ್ಕೆಗೊಂಡಿದ್ದಾರೆ.