
ಬೆಂಗಳೂರು (ಡಿ.25): ಆಕೆ ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದಾಕೆ. ಆದರೆ, ಕನಸು ಮನಸಲ್ಲೂ ತನ್ನ ಸಾವು ರಸ್ತೆಯಲ್ಲಿ ಈ ರೀತಿಯಲ್ಲಿ ಆಗುತ್ತದೆ ಎಂದು ಊಹಿಸಿಯೇ ಇದ್ದಿರಲಿಲ್ಲ. ಭಟ್ಕಳದಂಥ ಪುಟ್ಟ ಪಟ್ಟಣದಲ್ಲಿಯೇ ಬೆಳೆದು ತನ್ನೆಲ್ಲಾ ವಿದ್ಯಾಭ್ಯಾಸವನ್ನು ಭಟ್ಕಳದಲ್ಲಿಯೇ ಮಾಡಿದ್ದ ರಶ್ಮಿ ಮಹಾಲೆ, ಚಿತ್ರದುರ್ಗದ ಹಿರಿಯೂರು ಸಮೀಪ ಜವನಗೊಂಡನಹಳ್ಳಿಯ ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಸಾವು ಕಂಡಿದ್ದಾರೆ. ಗೆಳತಿಯರಾದ ಗಗನಾ ಹಾಗೂ ರಕ್ಷಿತಾ ಜೊತೆ ಗೋಕರ್ಣಕ್ಕೆ ಹೋಗುವ ಹಾದಿಯಲ್ಲಿದ್ದ ರಶ್ಮಿ ಮಹಾಲೆ ಅವರ ದೇಹ ಗುರುತೇ ಸಿಗದಷ್ಟು ಸುಟ್ಟು ಕರಕಲಾಗಿದೆ.
10ನೇ ತರಗತಿಯವರಗೆ ಭಟ್ಕಳದ ಆನಂದ ಆಶ್ರಮ ಕಾನ್ವೆಂಟ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದ ರಶ್ಮಿ, ಪಿಯುಸಿಯ ದಿನಗಳನ್ನು ಸಿದ್ಧಾರ್ಥ ಪ್ರೀ ಯುನಿವರ್ಸಿಟಿ ಕಾಲೇಜಿನಲ್ಲಿ ಮಾಡಿದ್ದರು. ಕಾಮರ್ಸ್ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದ ರಶ್ಮಿ ನಂತರ ತಮ್ಮ ಬಿಕಾಮ್ ಪದವಿಯನ್ನು ಶ್ರೀ ಗುರು ಸುಧೀಂಧ್ರ ಡಿಗ್ರಿ ಕಾಲೇಜಿನಲ್ಲಿ ಮಾಡಿದ್ದರು. 2020 ರಿಂದ 2023ರಲ್ಲಿ ವಿದ್ಯಾಭ್ಯಾಸ ಮಾಡಿದ್ದ ರಶ್ಮಿ, ಕೊನೆಯ ವರ್ಷದ ಪದವಿಯಲ್ಲಿದ್ದಾಗಲೇ ಟಿಸಿಎಸ್ ಕಂಪನಿಯಲ್ಲಿ ಪರೀಕ್ಷೆ ಬರೆದು ಕೆಲಸ ಗಿಟ್ಟಿಸಿಕೊಂಡಿದ್ದರು.
ಒಂದು ವರ್ಷ 8 ತಿಂಗಳ ಕಾಲ ಟಿಎಸ್‌ನಲ್ಲಿ ಬ್ಯುಸಿನೆಸ್ ಪ್ರೊಸೆಸ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ರಶ್ಮಿ ಮಹಾಲೆ ಏಳು ತಿಂಗಳ ಹಿಂದೆಯಷ್ಟೇ ಡೆಲಾಯ್ಟ್ ಕಂಪನಿಯಲ್ಲಿ ಎಎಂಎಲ್ ಅನಾಲಿಸ್ಟ್ ಆಗಿ ಕೆಲಸಕ್ಕೆ ಸೇರಿದ್ದರು. ಹೈಬ್ರಿಡ್ ಮಾದರಿಯಲ್ಲಿ ಅವರು ಕೆಲಸ ಸಾಗುತ್ತಿತ್ತು. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ, ನೆಮ್ಮದಿಯ ಜೀವನ ನೋಡಿಕೊಂಡು ಬೆಳೆದಿದ್ದ ರಶ್ಮಿ ಹೊಸ ವರ್ಷದ ಸಂಭ್ರಮವನ್ನು ಸ್ನೇಹಿತರ ಜೊತೆಯಲ್ಲಿ ಆಚರಿಸುವಾಗಲೇ ದುರಂತ ಸಾವು ಕಂಡಿದ್ದಾರೆ.
ಟಿಎಸ್‌ಎಸ್‌ನಲ್ಲಿ ಆಯ್ಕೆಯಾದಾಗ ಕಾಲೇಜಿನ ಯೂಟ್ಯೂಬ್ ಚಾನೆಲ್‌ಗೆ ಮಾತನಾಡಿದ್ದ ಆಕೆ, ಟಿಸಿಎಸ್‌ನಲ್ಲಿ ತಮಗೆ ಕೆಲಸ ಸಿಕ್ಕ ಖುಷಿಯನ್ನು ಹಂಚಿಕೊಂಡಿದ್ದರು.
'ಟಿಎಸ್‌ನಲ್ಲಿನಲ್ಲಿ ಪ್ಲೇಸ್‌ಮೆಂಟ್ ಅವಕಾಶ ಇದೆ ಎಂದಾಗ ನಮ್ಮ ಪ್ರೊಫೆಸರ್ ಅಪ್ಲೈ ಮಾಡುವಂತೆ ನನಗೆ ತಿಳಿಸಿದ್ದರು. ಟಿಸಿಎಸ್ ಆನ್‌ಲೈನ್ ಎಕ್ಸಾಮ್ ಮಾಡ್ತಿದೆ. ಅದಕ್ಕೆ ಅಪ್ಲೈ ಮಾಡು ಎಂದು ಹೇಳಿದ್ದರು. ಅಪ್ಲೈ ಮಾಡಿದ ಬಳಿಕ ನಾನು ನನ್ನದೇ ಆದ ರೀತಿಯಲ್ಲಿ ಇದಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದೆ. ಮೊದಲಿಗೆ ಅವರ ಪರೀಕ್ಷೆ ಹೇಗೆ ನಡೆಯುತ್ತದೆ ಅನ್ನೋದು ತಿಳಿದುಕೊಳ್ಳೋದು ಮುಖ್ಯವಾಗಿತ್ತು. ಅದಕ್ಕಾಗಿ ಹಳೆಯ ಯೂಟ್ಯೂಬ್ ವಿಡಿಯೋಗಳನ್ನು ನೋಡಿದೆ. ಯಾವ ರೀತಿ ಅವರು ಪರೀಕ್ಷೆ ಮಾಡುತ್ತಾರೆ. ಯಾವ ಟಾಪಿಕ್‌ಅನ್ನು ಅವರು ಟಚ್ ಮಾಡುತ್ತಾರೆ ಅನ್ನೋ ಕುತೂಹಲ ನನಗೆ ಇತ್ತು. ಪರೀಕ್ಷೆಯಲ್ಲಿ ಒಟ್ಟು ಮೂರು ಪಾರ್ಟ್‌ಗಳು ಇರುತ್ತಿದ್ದವು. ಲಾಜಿಕಲ್ ರೀಸನಿಂಗ್, ಮ್ಯಾಥಮೆಟಿಕ್ಸ್ ಸೇರಿ ಹಲವು ವಿಚಾರಗಳ ಬಗ್ಗೆ ಪ್ರಶ್ನೆಗಳು ಇರುತ್ತಿದ್ದವು' ಎಂದು ಹೇಳಿದ್ದರು.
ಹೊಸ ಬದುಕಿನ ಕನಸು ಕಟ್ಟಿಕೊಂಡು, ಜೀವನದಲ್ಲಿ ಸ್ವಚ್ಛಂದವಾಗಿ ಹಾರಾಡುವ ಇರಾದೆಯಲ್ಲಿದ್ದ ರಶ್ಮಿ ಮಹಾಲೆ ಅವರ ಜೀವನ ಒಂದೇ ದಿನದಲ್ಲಿ ಕುಸಿದು ಹೋಗಿದೆ.