
ಕಾರವಾರ (ಡಿ.14) ಹುಬ್ಬಳ್ಳಿಯಿಂದ ಮುಂಡಗೋಡ ಕಡೆ ಬರುತ್ತಿದ್ದ ಕಾರು ಭೀಕರ ಅಪಘಾತವಾಗಿದೆ. ಮುಂಡಗೋಡ ತಾಲೂಕಿನ ಗಡಿಭಾಗ ತಡಸ ತಾಯವ್ವನ ದೇವಸ್ಥಾನದ ಬಳಿ ಕಿರು ಸೇತುವೆಗೆ ಡಿಕ್ಕಿ ಹೊಡೆದ ಕಾರು ಪ್ರಪಾತಕ್ಕೆ ಉರುಳಿ ಬಿದ್ದಿದೆ. ಈ ಅಪಘಾತದಲ್ಲಿ ಮುಂಡಗೋಡ ಪಟ್ಟಣದ ಗ್ರಾಮ ಲೆಕ್ಕಾಧಿಕಾರಿ ಗೋಪಾಲ್ ಎಂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುಂಡಗೋಡ ತಹಶೀಲ್ದಾರ ಕಚೇರಿಯ ಇನ್ನಿಬ್ಬರು ಗ್ರಾಮ ಲೆಕ್ಕಾಧಿಕಾರಿಗಳಾದ ಗೋವಿಂದ್ ರಾಠೋಡ ಮತ್ತು ಮಂಜುನಾಥ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೂವರು ಗ್ರಾಮಲೆಕ್ಕಾಧಿಕಾರಿಗಳು ಹುಬ್ಬಳ್ಳಿಯಿಂದ ಕಾರಿನ ಮೂಲಕ ಮುಂಡಗೋಡಕ್ಕೆ ಪ್ರಯಾಣ ಬೆಳೆಸಿದ್ದರು. ಪ್ರಯಾಣಕ್ಕೂ ಮೊದಲು ಕಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಆದರೆ ರಾತ್ರಿಯಾದರೂ ಮನೆಗೆ ಮರಳದ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದರು.ಹೀಗಾಗಿ ಕುಟುಂಬಸ್ಥರು ತಹಶಿಲ್ದಾರ್ ಕಚೇರಿಗೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ತಹಶಿಲ್ದಾರ್ ಕಚೇರಿಯಿಂದ ಸಿಬ್ಬಂದಿಗಳು ಹುಡುಕಾಟ ಆರಂಭಿಸಿದ್ದರು. ಮೂವರ ಫೋನ್ ಕೂಡ ಸಂಪರ್ಕಕ್ಕೆ ಸಿಗದ ಕಾರಣ ಆತಂಕ ಹೆಚ್ಚಾಗಿತ್ತು. ತಾಯವ್ವನ ದೇವಸ್ಥಾನ ಸಮೀಪ ಹುಡುಕಾಟ ನಡೆಸಿದಾಗ ಅಪಘಾತವಾಗಿರುವುದು ಬೆಳಕಿಗೆ ಬಂದಿದೆ. ಗೋಪಾಲ್ ಎಂ ಮೃತಪಟ್ಟಿದ್ದರೆ ಗಂಭೀರವಾಗಿ ಗಾಯಗೊಂಡಿದ್ದ ಗೋವಿಂದ ರಾಥೋಡ ಮತ್ತು ಮಂಜುನಾಥ ಅವರನ್ನು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಹಶೀಲ್ದಾರ್ ಶಂಕರ ಗೌಡಿ ಘಟನಾ ಸ್ಥಳಕ್ಕೆ ತೆರಳಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಗೋಪಾಲ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗೋಪಾಲ್ ಎಂ ಗರ್ಭಿಣಿ ಪತ್ನಿ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. ತಡಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನಗರ–ಧಾರವಾಡ ಮಾರ್ಗದ ಮುಂಡವಾಡ ಕ್ರಾಸ್ ಬಳಿ ನಡದ ಕಾರು ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದಾನೆ. ಮೂವರು ವ್ಯಾಗನ್ಆರ್ ಕಾರಿನಲ್ಲಿ ಗೋವಾ ಪಣಜಿಯಿಂದ ಅಳ್ನಾವರದತ್ತ ಸಾಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರು ಮರಕ್ಕೆ ಡಿಕ್ಕಿ ಹೊಡೆದ ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಚಾಲಕ 55 ವರ್ಷದ ಅಬ್ದುಲ್ ಖಾದರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ದಾದು (30), ಹೀನಾ ಕೌಸರ್ (39) ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ರಾಮನಗರ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ, ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಗೆ ಸ್ಥಳಾಂತರ ಮಾಡಲಾಗಿದೆ. ಖಾನಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.