
ಉತ್ತರ ಕನ್ನಡ (ಜು.11) ಸಾಲ ತೀರಿಸಲು ಕರುಳ ಬಳ್ಳಿಯನ್ನೇ ಮಾರಾಟ ಮಾಡಿದ ಹೃದಯ ವಿದ್ರಾವಕ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಳೆ ದಾಂಡೇಲಿಯಲ್ಲಿ ನಡೆದಿದೆ. ಹಳೇ ದಾಂಡೇಲಿ ದೇಶಪಾಂಡೆ ನಗರದ ನಿವಾಸಿ ಮಾಹೀನ್ ಜೂನ್ 17 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗುವಿನ ತಂದೆ ವಸೀಂ ನಜೀರ್ ತುಂಬಾ ಸಾಲ ಮಾಡಿಕೊಂಡಿದ್ದ ಕಾರಣ ಮಗುವನ್ನು ಮಾರಾಟ ಮಾಡಿದ್ದಾರೆ. 3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆದರೆ ಅಂಗನವಾಡಿ ಕಾರ್ಯಕರ್ತೆ ದೂರಿನಿಂದ ಪ್ರಕರಣ ಬೆಳಕಿಗೆ ಬಂದಿದ್ದು, ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದಾರೆ.
ಸಾಲಗಾರರ ಕಿರಿಕಿರಿಯಿಂದ ಮಗು ಮಾರಾಟ
ವಸೀಂ ಹಾಗೂ ಮಾಹೀನ್ ದಂಪತಿ ಸಾಲದ ಸುಳಿಯಲ್ಲಿ ಮುಳುಗಿತ್ತು. ಸಂಘದ ಸಾಲಗಾರರು ಪದೇ ಪದೇ ಮನೆಗೆ ಆಗಮಿಸಿ ಸಾಲ ಮರುಪಾವತಿಸುವಂತೆ ತಾಕೀತು ಮಾಡಿದ್ದರು. ಪ್ರತಿ ದಿನ ಒಂದಲ್ಲಾ ಒಂದು ಸಾಲಗಾರರು ಮನೆಗೆ ಆಗಮಿಸಿ ಕಿರುಕುಳ ನೀಡಲು ಆರಂಭಿಸಿದ್ದರು. ದಿನ ದೂಡಿಜ ವಸೀಂ ಹಾಗೂ ಮಾಹೀನ್ ದಂಪತಿ ಕೊನೆಗೆ ತಮ್ಮ ಮಗುವನ್ನೇ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಬೇರೆ ದಾರಿ ಕಾಣದೇ ಮಗು ಮಾರಾಟ ಮಾಡಿ ಕನಿಷ್ಠ ಒಂದಷ್ಟು ಸಾಲ ತೀರಿಸಲು ನಿರ್ಧರಿಸಿದ್ದಾರೆ.
ದಂಪತಿ ತಮ್ಮ 20 ದಿನದ ಮಗುವನ್ನು 3 ಲಕ್ಷ ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ದುಲೈ 8 ರಂದು ಧಾರವಾಡಕ್ಕೆ ತೆರಳಿದ ಈ ದಂಪತಿ ಬೆಳಗಾವಿ ಮೂಲದ ನೂರ್ ಅಹಮ್ಮದ್ ಎಂಬಾತನಿಗೆ ಮಾರಾಟ ಮಾಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ದೂರು
ಮಗುವಿನ ಆರೈಕೆ, ಸರ್ಕಾರದ ಸವಲತ್ತಿಗಾಗಿ ದಂಪತಿಗಳು ತಾಯಿಕಾರ್ಡ್ ಸೇರಿದಂತೆ ಇತರ ದಾಖಲೆ ಪತ್ರಗಳನ್ನು ಅಂಗನವಾಡಿ ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಥರ ಮಾಡಿಕೊಟ್ಟಿದ್ದರು. ಮಗು ಜನಸಿದ ಬಳಿಕ ಮನೆಗೆ ತೆರಳಿದಾಗ ಮಗು ಇಲ್ಲದಿರುವುದು ಅನುಮಾನ ಹೆಚ್ಚಿಸಿದೆ. ವಿಚಾರಿಸಿದರೆ ಹಾರಿಕೆ ಉತ್ತರ ನೀಡಿದ್ದಾರೆ. ಹೀಗಾಗಿ ಕಾರ್ಯಕರ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ದಾಂಡೇಲಿ ನಗರ ಠಾಣೆಯ ಪೊಲೀಸರು, ಪಿಎಸ್ಐಗಳಾದ ಅಮೀನ್ ಅತ್ತಾರ ಮತ್ತು ಕಿರಣ್ ಪಾಟೀಲ್ ನೇತೃತ್ವದಲ್ಲಿ ಎಎಸ್ಐ ಬಸವರಾಜ ಒಕ್ಕುಂದ, ಪೊಲೀಸ್ ಸಿಬ್ಬಂದಿಗಳಾದ ಸಿದ್ರಾಮ್ ರಾಮರಥ, ಚಂದ್ರಶೇಖರ ಪಾಟೀಲ್, ಜ್ಯೋತಿ ಬಾಳೇಕರ, ಮಹಾಂತೇಶ ಜಾಮಗೌಡ ಜತೆ ಬೆಳಗಾವಿಗೆ ಹೋಗಿ ಆರೋಪಿಗಳನ್ನು ಬಂಧಿಸಿ, ಮಾರಾಟ ಮಾಡಿದ್ದ ಮಗುವನ್ನು ರಕ್ಷಿಸಿದ್ದರು. ರಕ್ಷಿಸಿದ ಮಗುವಿನ ಸುರಕ್ಷತೆಯ ಬಗ್ಗೆ ಶಿರಸಿಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರು ಪಡಿಸಲಾಗಿದೆ. ಪ್ರಕರಣದಲ್ಲಿ ಮಗುವನ್ನು ಖರೀದಿಸಿದ ಆರೋಪಿಗಳಾದ ಬೆಳಗಾವಿ ಜಿಲ್ಲೆಯ ಆನಗೋಳದ ನಿವಾಸಿಗಳಾದ ನೂರು ಮಹಮ್ಮದ್ ಅಬ್ದುಲ್ ಮಜೀದ್ ಮತ್ತು ಕಿಶನ್ ಶ್ರೀಕಾಂತ ಐರೇಕರ ಎಂಬಿಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ .