ರಾಜ್ಯ ಮೀನುಗಾರರ ಮೇಲೆ ಬೋಟ್ ಎಳೆದೊಯ್ದು ರತ್ನಗಿರಿಯಲ್ಲಿ ದಾದಾಗಿರಿ

By Kannadaprabha NewsFirst Published Oct 14, 2019, 1:00 PM IST
Highlights

ಕರ್ನಾಟಕ ಮೀನುಗಾರರ ಮೇಲೆ ರತ್ನಗಿರಿ ಮೀನುಗಾರರು ದಾದಾಗಿರಿ ನಡೆಸಿದ್ದಲ್ಲದೇ ನಾಲ್ಕು ಬೋಟುಗಳನ್ನು ಎಳೆದೊಯ್ದಿದ್ದಾರೆ. 

ಕಾರವಾರ [ಅ.14]:  ಕರ್ನಾಟಕ ಹಾಗೂ ಮಹಾರಾಷ್ಟ್ರದ ಮೀನುಗಾರರ ನಡುವೆ ಅರಬ್ಬಿ ಸಮುದ್ರದಲ್ಲಿ ವೈಮನಸ್ಸು ತಲೆದೋರಿದ್ದು, ರತ್ನಾಗಿರಿ ಬಳಿ ಮೀನುಗಾರಿಕೆಗೆ ತೆರಳಿದ ಮಲ್ಪೆ, ಮಂಗಳೂರು ಬೋಟುಗಳನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ಹೀಗೆ ಮುಂದುವರಿದಲ್ಲಿ ಮಲ್ಪೆ ಹಾಗೂ ರತ್ನಾಗಿರಿ ಮೀನುಗಾರರ ನಡುವೆ ಘರ್ಷಣೆ ನಡೆಯುವ ಸಾಧ್ಯತೆಯೂ ಇದೆ.

ಮಲ್ಪೆ ಬೋಟಿನಲ್ಲಿ ಮೀನುಗಾರಿಕೆ ನಡೆಯುವ ಬಹುತೇಕರು ಉತ್ತರ ಕನ್ನಡದವರು. ಹೀಗಾಗಿ ಇದು ಉತ್ತರ ಕನ್ನಡದ ಮೀನುಗಾರರಲ್ಲಿ ಕಳವಳಕ್ಕೆ ಕಾರಣವಾಗಿದೆ. ತೀರ ಇತ್ತೀಚೆಗೆ ರತ್ನಾಗಿರಿ ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಉಡುಪಿ ಜಿಲ್ಲೆಯ ಮಲ್ಪೆಯ ಸ್ಪೀಡ್ ಬೋಟ್ ಅನ್ನು ಸುತ್ತುವರಿದ ರತ್ನಾಗಿರಿ ಬೋಟ್‌ಗಳು ಹಿಮ್ಮೆಟ್ಟಿಸಿದವು. ತಮ್ಮ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ಬರದಂತೆ ಅಲ್ಲಿನ ಮೀನು ಗಾರರು ಬೆದರಿಕೆ ಹಾಕಿದರು. ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಪ್ರದೇಶದಲ್ಲಿ ಮಲ್ಪೆ ಹಾಗೂ ಮಂಗಳೂರಿನ ಸ್ಪೀಡ್ ಬೋಟ್‌ಗಳು ಮೀನುಗಾರಿಕೆ ನಡೆಸುತ್ತಿವೆ. ಇದರಿಂದ ನಮಗೆ ಮೀನು ಸಿಗುತ್ತಿಲ್ಲ ಎನ್ನುವುದು ರತ್ನಾಗಿರಿ ಮೀನುಗಾರರ ವಾದ. ಅಲ್ಲಿನ ತೀರ ಪ್ರದೇಶಕ್ಕೆ ಹೋಗುತ್ತಿಲ್ಲ, ವಿನಾಕಾರಣ ನಮ್ಮ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವುದು ರಾಜ್ಯದ ಮೀನುಗಾರರ ವಾದ.

ಉತ್ತರ ಕನ್ನಡದ ಪರ್ಸೈನ್, ಗಿಲ್‌ನೆಟ್ ಬೋಟ್‌ಗಳು ಮಹಾರಾಷ್ಟ್ರದತ್ತ ತೆರಳುವುದಿಲ್ಲ. ಹೆಚ್ಚೆಂದರೆ ಗೋವಾದ ವಾಸ್ಕೋ ತನಕ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮರಳುತ್ತವೆ. ಆದರೆ ಮಲ್ಪೆ ಹಾಗೂ ಮಂಗಳೂರಿನ ಸ್ಪೀಡ್ ಬೋಟ್‌ಗಳು ಮುಂಬೈ ತನಕ ತೆರಳಿ ಮೀನುಗಾರಿಕೆ ನಡೆಸುತ್ತವೆ. 15  ದಿನಗಳ ಕಾಲ ಮೀನುಗಾರಿಕೆ ನಡೆಸುವ ವ್ಯವಸ್ಥೆ ಆ ಬೋಟ್‌ಗಳಲ್ಲಿದೆ. ಉತ್ತರ ಕನ್ನಡದ ಮೀನುಗಾರರೆ
ಹೆಚ್ಚಿನ ಸಂಖ್ಯೆಯಲ್ಲಿ ಮಲ್ಪೆ ಬೋಟಿನಲ್ಲಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೀನನ್ನು ಹುಡುಕುತ್ತ ಹುಡುಕುತ್ತ ರತ್ನಾಗಿರಿ ಬಳಿ ತೆರಳಿದರೆ ಸಾಕು ಅಲ್ಲಿನ ಮೀನುಗಾರರು ತೀವ್ರ ಪ್ರತಿರೋಧ ಒಡ್ಡುತ್ತಿದ್ದಾರೆ. ಈಚೆಗೆ ರತ್ನಾಗಿರಿ ಮೀನುಗಾರರು ಸಭೆ ನಡೆಸಿ ಮಲ್ಪೆ, ಮಂಗಳೂರಿನ ಬೋಟುಗಳಿಗೆ ಯಾವುದೆ ಕಾರಣಕ್ಕೆ ತಮ್ಮ ತೀರದಲ್ಲಿ ಮೀನುಗಾರಿಕೆಗೆ ಅವಕಾಶ ಮಾಡಿಕೊಡ ಬಾರದು. ಒಂದು ವೇಳೆ ಮೀನುಗಾರಿಕೆಗೆ ಬಂದರೆ ಹಿಮ್ಮೆಟ್ಟಿ ಸಲು ತೀರ್ಮಾನ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. 

ಕಡಲ ಮಕ್ಕಳ ಕಂಗೆಡಿಸಿವೆ ಬಲೆಗೆ ಬಿದ್ದ ಕಾರ್ಗಿಲ್‌ ಮೀನು...

ಮಲ್ಪೆ ಬೋಟುಗಳಿಗೆ ಬೆಂಕಿ ಹಚ್ಚುವ ಮಾತು ಗಳನ್ನೂ ರತ್ನಾಗಿರಿ ಮೀನುಗಾರರು ಆಡಿದ್ದಾರೆ ಎನ್ನುವುದು ಇಲ್ಲಿಯ ಮೀನುಗಾರರ ಹೇಳಿಕೆ. ದಶಕದ ಹಿಂದೆ ಮಲ್ಪೆ ಮೀನುಗಾರರು ಹಾಗೂ ರತ್ನಾಗಿರಿ ಮೀನುಗಾರರ ನಡುವೆ ತೀವ್ರ ಘರ್ಷಣೆ ಉಂಟಾಗಿತ್ತು. ಆ ಘರ್ಷಣೆ ಒಬ್ಬ ಮೀನುಗಾರನ ಸಾವಿನೊಂದಿಗೆ ಅಂತ್ಯವಾಗಿತ್ತು. 

ಡಿ.  15, 2018 ರಂದು ನಾಪತ್ತೆಯಾಗಿದ್ದ ಮಲ್ಪೆಯ ಸುವರ್ಣ ತ್ರಿಭುಜ ಬೋಟ್‌ನ ಅವಶೇಷ ರತ್ನಾಗಿರಿ ಸಮೀಪ ಅರಬ್ಬಿ ಸಮುದ್ರದಲ್ಲಿ ಮೇ ೨೦೧೯ರಲ್ಲಿ ಪತ್ತೆಯಾಗಿತ್ತು. ಬೋಟ್ ಮುಳುಗಲು ನೌಕಾಪಡೆಯ ಹಡಗು ಡಿಕ್ಕಿ ಹೊಡೆದಿರುವುದು ಕಾರಣ ಎಂಬ ಮಾತುಗಳು ಕೇಳಿಬಂದಿದ್ದವು. ಇದರ ಜತೆಗೆ ರತ್ನಾಗಿರಿ ಮೀನುಗಾರರ ಮೇಲೂ ಶಂಕೆ ವ್ಯಕ್ತವಾಗಿತ್ತು. ಈ ವರೆಗೆ ಮಲ್ಪೆ ಬೋಟ್ ಮುಳುಗಲು ಕಾರಣವೇನು? ಬೋಟ್ ನಲ್ಲಿದ್ದ ಮೀನುಗಾರರ ಏನಾದರು ಎನ್ನುವುದು ತನಿ ಖೆಯಿಂದ ತಿಳಿದುಬಂದಿಲ್ಲ. ಸುವರ್ಣತ್ರಿಭುಜ ಬೋಟಿನಲ್ಲಿದ್ದ 7 ಮೀನುಗಾರರಲ್ಲಿ ಐವರು ಉತ್ತರ ಕನ್ನಡವರಾಗಿದ್ದರು. ಈ ಬಿಕ್ಕಟ್ಟು ಬಗೆಹರಿಯದೆ ಇದ್ದಲ್ಲಿ ಮಲ್ಪೆ ಹಾಗೂ ರತ್ನಾಗಿರಿ ಮೀನುಗಾರರ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ದಟ್ಟವಾಗಿದೆ. 

click me!