ಸಮುದ್ರದಲ್ಲಿ ಮುಳುಗಿದ್ದ ಬೋಟ್‌ನಿಂದ 25 ಮೀನುಗಾರರ ರಕ್ಷಣೆ

By Kannadaprabha NewsFirst Published Oct 12, 2019, 11:23 AM IST
Highlights

ನೀರು ನುಗ್ಗಿ ಮುಳುಗುತ್ತಿದ್ದ ಬೋಟಲ್ಲಿದ್ದ 25 ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಇದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. 

ಭಟ್ಕಳ [ಅ.12]:   ನೇತ್ರಾಣಿ ಗುಡ್ಡದ ಸಮೀಪದ ಸಮುದ್ರದಲ್ಲಿ ಬೋಟೊಂದಕ್ಕೆ ಆಕಸ್ಮಿಕವಾಗಿ ನೀರು ನುಗ್ಗಿ ಅಪಾಯದಂಚಿನಲ್ಲಿದ್ದ 25 ಮೀನುಗಾರರನ್ನು ಇನ್ನೊಂದು ಬೋಟಿನಲ್ಲಿದ್ದ ಮೀನುಗಾರರು ಹಾಗೂ ಕರಾವಳಿ ಕಾವಲು ಪಡೆಯ ತಂಡ ರಕ್ಷಿಸಿದ ಘಟನೆ ಶುಕ್ರವಾರ ನಡೆದಿದೆ.

ನೀರು ನುಗ್ಗಿ ಮುಳುಗಡೆ ಹಂತಕ್ಕೆ ಹೋಗಿದ್ದ ಬೋಟ್‌ ಸೀತಾಲಿ ನವದುರ್ಗಾ( ಮೂಕಾಂಬಿಕಾ) ಎನ್ನುವ ಹೆಸರಿನದ್ದಾಗಿದ್ದು, ಇದು ಗಂಗೊಳ್ಳಿಯ ಮಧುಕರ್‌ ಪೂಜಾರಿ ಮಾಲೀಕತ್ವದ್ದು ಎಂದು ಗೊತ್ತಾಗಿದೆ. ಶುಕ್ರವಾರ ಮಧ್ಯಾಹ್ನ ನೇತ್ರಾಣಿ ಗುಡ್ಡದ ಸನಿಹದ ಸಮುದ್ರದಲ್ಲಿ ಈ ಬೋಟ್‌ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಒಳಗಡೆಯಿಂದ ದಿಢೀರ್‌ ನೀರು ಬರಲಾರಂಭಿಸಿದೆ. ಇದನ್ನು ಗಮನಿಸಿದ ಮೀನುಗಾರರು ತಕ್ಷಣ ಇನ್ನೊಂದು ಬೋಟಿನತ್ತ ಕೈ ಮಾಡಿ ಕರೆದಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಕ್ಷಣ ಆಗಮಿಸಿದ ಇನ್ನೊಂದು ಬೋಟ್‌ ಮೂಕಾಂಬಿಕಾ ಬೋಟಿನಲ್ಲಿ ಸಂಕಷ್ಟದಲ್ಲಿದ್ದ 25 ಮಂದಿ ಮೀನುಗಾರರನ್ನು ರಕ್ಷಿಸಿದ್ದಲ್ಲದೇ ನೀರು ನುಗ್ಗಿ ಹಾನಿಯಾದ ಬೋಟನ್ನೂ ಇತರ ಎರಡು ಮೂರು ಬೋಟುಗಳ ಸಹಾಯದಿಂದ ಎಳೆದು ಭಟ್ಕಳ ಬಂದರಿನ ದಕ್ಕೆಗೆ ತರಲಾಗಿದೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಕರಾವಳಿ ಕಾವಲು ಪಡೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಭಟ್ಕಳದಲ್ಲಿ ಕಳೆದ ಒಂದೂವರೆ ತಿಂಗಳಿನಲ್ಲಿ ನಡೆದ ನಾಲ್ಕನೇ ಪ್ರಕರಣ ಇದಾಗಿದೆ.

click me!