24 ಗಂಟೆಯಲ್ಲಿ ಭಟ್ಕಳ ನಾಶ, ಕಣ್ಣನ್‌ ಹೆಸರಲ್ಲಿಈ-ಮೇಲ್‌ ಕಳಿಸಿದ್ದ ನಿತಿನ್‌ ಶರ್ಮಾ aka ಖಾಲಿದ್‌ ಬಂಧನ!

Published : Jul 14, 2025, 04:06 PM IST
Bhatkal Hoax Mail

ಸಾರಾಂಶ

ಭಟ್ಕಳದಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ಎಂಬಾತನನ್ನು ಬಂಧಿಸಲಾಗಿದ್ದು, ಈತ ಹಲವು ರಾಜ್ಯಗಳಲ್ಲಿ ಇದೇ ರೀತಿಯ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ. 

ಕಾರವಾರ (ಜು.14): ಉತ್ತರ ಕನ್ನಡ ಜಿಲ್ಲೆಯ ಬಂದರು ಪಟ್ಟಣ ಭಟ್ಕಳವನ್ನು ಇನ್ನು 24 ಗಂಟೆಯಲ್ಲಿ ಸ್ಫೋಟ ಮಾಡುವುದಾಗಿ ಈ-ಮೇಲ್‌ ಬಂದ ಹಿನ್ನಲೆಯಲ್ಲಿ ಕಳೆದು ಕೆಲವು ದಿನಗಳಿಂದ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಡಾಗ್ ಸ್ಕ್ವಾಡ್ ನಗರದಾದ್ಯಂತ ತಪಾಸಣೆ ನಡೆಸುತ್ತಿದೆ. ಇದರ ನಡುವೆ ಸೈಬರ್ ವಿಭಾಗದ ಸಹಾಯದಿಂದ ಈ ಮೇಲ್‌ ಮೂಲವನ್ನೂ ಪತ್ತೆ ಹಚ್ಚಲಾಗಿದೆ.

ಹುಸಿ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ನಿತಿನ್ ಶರ್ಮಾ ಅಲಿಯಾಸ್ ಖಾಲಿದ್‌ನನ್ನು ಭಟ್ಕಳ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಉತ್ತರಕನ್ನಡ ಜಿಲ್ಲಾ ಎಸ್ಪಿ ಎಂ.ನಾರಾಯಣ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೊನೆಗೂ 40 ವರ್ಷದ ಅರೋಪಿ ಸಿಕ್ಕಿಬಿದ್ದಿದ್ದಾರೆ. ಕಾರ್ಯಾಚರಣೆಯಲ್ಲಿ ಭಟ್ಕಳ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ. ಪಿಎಸ್ಐಗಳಾದ ನವೀನ್ ಎಸ್. ನಾಯ್ಕ್, ಸೋಮರಾಜ ರಾಠೋಡ ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು.

ಮೈಸೂರಿನ ನಜರಬಾದ್ ಪೊಲೀಸ್ ಠಾಣೆಯಲ್ಲಿ 351(4), 353(1) (b) BNS ಪ್ರಕರಣದಲ್ಲಿ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದ ಎನ್ನಲಾಗಿದೆ. ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ಆರೋಪಿ ನಿತಿನ್ ಅಲಿಯಾಸ್ ಖಾಲಿದ್ ವಿಚಾರಣಾ ಕೈದಿಯಾಗಿದ್ದಾನೆ.

ಆರೋಪಿ ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ಮೂಲತಃ ದೆಹಲಿಯವನಾಗಿದ್ದು ಆರೋಪಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾನೋ ಇಲ್ಲವೋ ಎಂದು ಪೊಲೀಸರು ತನಿಖೆ ಮುಂದುವರಿಸುತ್ತಿದ್ದಾರೆ. BNS ಕಾಯ್ದೆ 351(4)ಅಡಿಯಲ್ಲಿ ಬಾಡಿ ವಾರೆಂಟ್ ಪಡೆದು ಭಟ್ಕಳ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.

ಈಗಾಗಲೇ ಆರೋಪಿ ನಿತಿನ್ ಶರ್ಮಾ ಅಲಿಯಾಸ್ ಖಾಲಿದ್ ವಿರುದ್ಧ 16 ಪ್ರಕರಣಗಳು ದಾಖಲಾಗಿದೆ. ಕೇರಳದಲ್ಲಿ 6, ಕರ್ನಾಟಕದಲ್ಲಿ 3, ಪುದುಚೇರಿಯಲ್ಲಿ 2, ದೆಹಲಿ, ಮಧ್ಯಪ್ರದೇಶ, ಉತ್ತರಾಖಂಡ್‌, ಒಡಿಶಾ ಹಾಗೂ ಆಂಧ್ರಪ್ರದೇಶದಲ್ಲಿ 1 ತಲಾ ಒಂದು ಪ್ರಕರಣ ದಾಖಲಾಗಿದೆ.

2016-17ರಲ್ಲಿ ದೆಹಲಿಗೆ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿ 1 ವರ್ಷ ಜೈಲಿನಲ್ಲಿದ್ದ. ಪ್ರತಿಯೊಂದು ಕಡೆಯೂ ಹುಸಿಬಾಂಬ್ ಸ್ಫೋಟಿಸುವ ಬೆದರಿಕೆಯ ಈ-ಮೇಲ್‌ಅನ್ನು ಖಾಲಿದ್‌ ಹಾಕುತ್ತಿದ್ದ ಎನ್ನಲಾಗಿದೆ.

ಅದೇ ರೀತಿ ಭಟ್ಕಳದಲ್ಲೂ 24 ಗಂಟೆಯೊಳಗೆ ಸ್ಫೋಟಿಸುವುದಾಗಿ ಇ-ಮೇಲ್ ಹಾಕಿದ್ದ. ಕಣ್ಣನ್ ಗುರುಸಾಮಿ ಎಂಬ ಹೆಸರಿನ ವ್ಯಕ್ತಿಯಿಂದ kannnannandik@gmail.com ನಿಂದ ಭಟ್ಕಳ ಶಹರ ಠಾಣೆಗೆ ಈಮೇಲ್ ಸಂದೇಶ ರವಾನೆ ಮಾಡಿದ್ದ. ಜುಲೈ10 ರ ಬೆಳಗ್ಗೆ 7.23 ಕ್ಕೆ ಇ-ಮೇಲ್ ರವಾನೆ ಮಾಡಿ ಭೀತಿ ಸೃಷ್ಠಿಸಲು ಪ್ರಯತ್ನ ಮಾಡಿದ್ದ.

ಭಟ್ಕಳ ಶಹರ ಠಾಣೆಯ bhatkaltownkwr@ksp.gov.in ಗೆ ಇ-ಮೇಲ್‌ಗೆ ಸಂದೇಶ ರವಾನೆ ಮಾಡಿದ್ದ ಆರೋಪಿ. 'We will plant bomb in bhatkal town. the bomb will blast within 24 hours' ಎಂದು ಸಂದೇಶ ಕಳುಹಿಸಿದ್ದ ಇ-ಮೇಲ್ ಬಂದ ನಂತರ ಅಲರ್ಟ್ ಆಗಿದ್ದ ಭಟ್ಕಳ ಪೊಲೀಸರು ನಗರದೆಲ್ಲೆಡೆ ಹದ್ದಿನ ಕಣ್ಣು ಇರಿಸಿದ್ದರು.

ಜಿಲ್ಲಾ ಬಾಂಬ್ ನಿಷ್ಕ್ರಿಯ ದಳ ಹಾಗೂ ಡಾಗ್ ಸ್ಕ್ವಾಡ್‌ನಿಂದ ಭಟ್ಕಳ ನಗರದ ಪ್ರಮುಖ ಪ್ರದೇಶದಲ್ಲಿ ತಪಾಸಣೆ ನಡೆದಿತ್ತು. ಭಟ್ಕಳ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಇತರ ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಭಟ್ಕಳ ಶಹರ ಠಾಣಾ PSI ನವೀನ್ ನಾಯ್ಕ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಮೆಸೇಜ್ ಮೂಲಕ ಮೊಬೈಲ್‌ನ ಐಎಂಇಐ ನಂಬರ್ ಹಾಗೂ ವಿಳಾಸ ಪಡೆದು ತಂಡ ರಚಿಸಿ ತಮಿಳುನಾಡಿನ ಕಣ್ಣನ್ ಗುರುಸಾಮಿಯನ್ನು ಪೊಲೀಸರು ಹಿಡಿದ್ದರು. ಭಟ್ಕಳ ಪೊಲೀಸರು ಕಣ್ಣನ್ ಗುರುಸಾಮಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿತ್ತು. ಜುಲೈ 9ರಂದು ರಾತ್ರಿ ಕೇರಳ ಮುನ್ನಾರ ಪೊಲೀಸ್ ಠಾಣೆಗೆ ವಂಚನೆ ಪ್ರಕರಣದಡಿ ಕಣ್ಣನ್ ಗುರುಸಾಮಿ ವಿಚಾರಣೆಗೆ ತೆರಳಿದ್ದ. ಜುಲೈ 10ರಂದು ಬೆಳಗ್ಗೆ 7 ಗಂಟೆ ಅಂದಾಜಿಗೆ ಅದೇ ಠಾಣೆಯಲ್ಲಿ ಕಾಯ್ದೆ 479/2025ರ 118(b), 120 (o)ಯಡಿ ಬಂಧಿತನಾಗಿದ್ದ ನಿತಿನ್ ಶರ್ಮಾ ಅಲಿಯಾಸ್‌ ಖಾಲಿದ್‌ ಕೂಡ ಇದ್ದ. ಮೈಸೂರಿನಿಂದ ಬಾಡಿ ವಾರೆಂಟ್ ಪಡೆದು ಕೇರಳಕ್ಕೆ ಕರೆದುಕೊಯ್ದು ಕೇರಳ ಪೊಲೀಸರು ವಿಚಾರಣೆ ನಡೆಸುತ್ತಿದ್ದರು.

ಈ ವೇಳೆ ಆರೋಪಿ ನಿತಿನ್ ಶರ್ಮಾ/ಖಾಲಿದ್‌, ಕಣ್ಣನ್ ಗುರುಸ್ವಾಮಿ ಬಳಿ ಅರ್ಜಂಟ್ ಮಾತನಾಡಲು ಮೊಬೈಲ್ ಕೇಳಿದ್ದ. ಮೊಬೈಲ್‌ನಲ್ಲಿ ಮಾತನಾಡುವ ನೆಪದಲ್ಲಿ ಕಣ್ಣನ್ ಗುರುಸಾಮಿ ಮೊಬೈಲ್‌ನಿಂದ ಭಟ್ಕಳ ಠಾಣೆಗೆ ನಿತಿನ್‌/ಖಾಲಿದ್ ಹುಸಿ ಬಾಂಬ್ ಸ್ಫೋಟದ ಬೆದರಿಕೆ ಹಾಕಿದ್ದ. ಕಣ್ಣನ್ ಗುರುಸಾಮಿಯನ್ನು ಹುಡುಕಿಕೊಂಡು ಹೋಗಿದ್ದ ಭಟ್ಕಳ ಪೊಲೀಸರು ಕೊನೆಗೂ ನೈಜ ಆರೋಪಿಯನ್ನು ಹಿಡಿಯಲು ಸಫಲರಾಗಿದ್ದಾರೆ.

 

PREV
Read more Articles on
click me!

Recommended Stories

ಕಾರವಾರದಲ್ಲಿ ಭಾರತೀಯ ನೌಕಾ ದಿನಾಚರಣೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿ!
Photos: ಗೋಕರ್ಣದ ಬೀಚ್‌ನಲ್ಲಿ ಹಿಂದೂ ಪದ್ಧತಿಯಂತೆ ವಿದೇಶಿ ಜೋಡಿಯ ವಿವಾಹ!