ಕಾಮುಕರೇ ಎಚ್ಚರ, ಇನ್ನು ಮುಂದೆ ಹುಡುಗಿಯರನ್ನು ಚುಡಾಯಿಸಿದರೆ ಮಹಿಳಾ ಪೊಲೀಸರಿಂದಲೇ ಸಾಕಷ್ಟು ಗೂಸಾ ತಿನ್ನಬೇಕಾಗುವುದು.
ಉಡುಪಿ[ಏ. 02] ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿರುವ ಉಡುಪಿ ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ಚುಡಾಯಿಸುವ, ಅಸಭ್ಯವಾಗಿ ವರ್ತಿಸುವ ಘಟನೆಗಳಿಗೆ ಕಡಿವಾಣ ಹಾಕುವುದಕ್ಕೆ ಜಿಲ್ಲೆಯ ಎಸ್ಪಿ ನಿಶಾ ಜೇಮ್ಸ್ ರಾಣಿ ಅಬ್ಬಕ್ಕ ಪಡೆಯನ್ನು ಸಿದ್ದಗೊಳಿಸಿದ್ದಾರೆ.
ನಿಶಾ ಅವರು ಈ ಹಿಂದೆ ಎಸ್ಪಿಯಾಗಿದ್ದ ಚಿತ್ರದುರ್ಗದಲ್ಲಿ ಓನಕೆ ಓಬವ್ವ, ಸಾಗರದಲ್ಲಿ ಕೆಳದಿ ಚೆನ್ನಮ್ಮ ಪಡೆಗಳನ್ನು ರಚಿಸಿ, ಅವುಗಳ ಮೂಲಕ ಯುವತಿಯನ್ನು ಮಹಿಳೆಯರನ್ನು ಚುಡಾಯಿಸುತ್ತಿದ್ದ ಕಾಮುಕರಿಗೆ ಗೂಸಾ ನೀಡಿ ಯಶಸ್ವಿಯಾಗಿದ್ದರು. ಇದೇ ಪ್ರೇರಣೆಯಿಂದ ಆರಂಭಿಸಲಾಗಿರುವ ರಾಣಿ ಅಬ್ಬಕ್ಕ ಪಡೆ ಮಂಗಳವಾರದಿಂದ ಉಡುಪಿಯಲ್ಲಿ ಕಾರ್ಯಾಚರಣೆ ಆರಂಭಿಸಿದೆ.
undefined
ಉಡುಪಿಯಲ್ಲಿ ಪತ್ತೆಯಾಯ್ತು ಅಪರೂಪದ ಹಾವು
ಜಿಲ್ಲೆಯ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ದಿನದಂದು ಮಹಿಳೆಯ ಸುರಕ್ಷತೆಗೆ ಆದ್ಯತೆ ನೀಡುವುದಾಗಿ ಹೇಳಿದ್ದ ಅವರು, ಅದರಂತೆ ಉಡುಪಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ರಾಣಿ ಅಬ್ಬಕ್ಕೆ ಪಡೆಯನ್ನು ರಚಿಸಿದ್ದಾರೆ.
ಪಿಂಕ್ ಬಣ್ಣದ ವಾಹನದಲ್ಲಿ ಸಂಚರಿಸುವ ಈ ಸಂಚಾರಿ ಪಡೆ ಕೇವಲ ಚುಡಾಯಿಸುವುದನ್ನು ತಡೆಯುವುದಕ್ಕೆ ಸೀಮತವಲ್ಲ, ಶಾಲಾ ಕಾಲೇಜು ಪರಿಸರದಲ್ಲಿ ಗಸ್ತು ನಡೆಸಲಿದೆ, ವಾಹನ ತಪಾಸಣೆ ನಡೆಸಲಿದೆ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವವರ ಮೇಲೆ ನಿಗಾ ಇಡಲಿದೆ, ಇತರ ಕ್ರಮಿನಲ್ ಪ್ರಕರಣಗಳಲ್ಲಿಯೂ ಸೇವೆ ನೀಡಲಿದೆ. ಮುಖ್ಯವಾಗಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಿದೆ ಎಂದು ಎಸ್ಪಿ ನಿಶಾ ಅವರು ತಿಳಿಸಿದ್ದಾರೆ.
ಮಂಗಳವಾರ ಪೊಲೀಸ್ ಧ್ವಜ ದಿನಾಚರಣೆಯ ಸಂದರ್ಭದಲ್ಲಿ ಈ ರಾಣಿ ಅಬ್ಬಕ್ಕ ಪಡೆಗೆ ಚಾಲನೆ ನೀಡಿದ ಅವರು, ಈ ಪಡೆಯಲ್ಲಿ ಮಹಿಳಾ ಎಸ್‍ಐ/ಎಎಸ್‍ಐ, 3 ಮಹಿಳಾ ಸಿಬ್ಬಂದಿ ಮತ್ತು ಓರ್ವ ಪುರುಷ ಸಿಬ್ಬಂದಿ ಕೂಡ ಇರುತ್ತಾರೆ. ಪ್ರಸ್ತುತ ಉಡುಪಿ ಮತ್ತು ಮಣಿಪಾಲದ ಶಾಲಾ ಕಾಲೇಜು, ಬಸ್ಸು - ರೈಲ್ವೆ ನಿಲ್ದಾಣ, ಪಾರ್ಕಿಂಗ್ ಪ್ರದೇಶಗಳಲ್ಲಿ ಈ ಪಡೆ ಕಾರ್ಯಾಚರಣೆ ನಡೆಸುತ್ತದೆ, ಮುಂದೆ ಜಿಲ್ಲೆಗೂ ವಿಸ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ.ಈ ಕಾರ್ಯಕ್ರಮದಲ್ಲಿ ಮಹಿಳಾ ಠಾಣೆಯ ಎಸೈ ರೇಖಾ ನಾಯಕ್, ಸಂಚಾರಿ ಠಾಣೆಯ ಎಸೈ ವೆಲೆಂಟ್ ಸೆಮಿನಾ, ಎಎಸ್‍ಐ ಮುಕ್ತ ಬಾಯಿ, ಕಾನೂನು ಅಧಿಕಾರಿ ಮುಮ್ತಾಜ್ ಮುಂತಾದವರಿದ್ದರು.