ಹಾಲಿನ ಬೂತ್‌ಗಳಲ್ಲಿ ಸಂಸ್ಕರಿತ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರು ಇನ್ನು ಮುಂದೆ ರೆಡಿಮೇಡ್ ಕಷಾಯ ಹಾಗೂ ಕೋಲ್ಡ್ ಕಾಫಿಯ ಸ್ವಾದವನ್ನೂ ಸವಿಯಬಹುದು. ಕರಾವಳಿಯ ಜನಪ್ರಿಯ, ಆರೋಗ್ಯದಾಯಕ ಪೇಯ ಕಷಾಯ ಹಾಗೂ ಕೋಲ್ಡ್ ಕಾಫಿ ಉತ್ಪನ್ನವನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕರಾವಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ.
ಮಂಗಳೂರು(ನ.15): ಹಾಲಿನ ಬೂತ್‌ಗಳಲ್ಲಿ ಸಂಸ್ಕರಿತ ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರು ಇನ್ನು ಮುಂದೆ ರೆಡಿಮೇಡ್ ಕಷಾಯ ಹಾಗೂ ಕೋಲ್ಡ್ ಕಾಫಿಯ ಸ್ವಾದವನ್ನೂ ಸವಿಯಬಹುದು.
ಕರಾವಳಿಯ ಜನಪ್ರಿಯ, ಆರೋಗ್ಯದಾಯಕ ಪೇಯ ಕಷಾಯ ಹಾಗೂ ಕೋಲ್ಡ್ ಕಾಫಿ ಉತ್ಪನ್ನವನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಕರಾವಳಿ ಮತ್ತು ಸುತ್ತಮುತ್ತಲಿನ ಜಿಲ್ಲೆಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಈ ಉತ್ಪನ್ನಗಳು ನ.19ರಿಂದ ಹಾಲು ಒಕ್ಕೂಟದ ಎಲ್ಲ ಬೂತ್‌ಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ.
ಏನಿದು ಕಷಾಯ ಪೇಯ?:
ಕರಾವಳಿ ಜಿಲ್ಲೆಯಲ್ಲಿ ಕಾಫಿ, ಟೀ ಹೊರತುಪಡಿಸಿದರೆ ಹೆಚ್ಚು ಜನಪ್ರಿಯವಾಗಿರುವ ಪೇಯ ಕಷಾಯ. ವಿವಿಧ ಮೂಲಿಕೆಗಳನ್ನು ಬಳಸಿ ತಯಾರಿಸುವ ಈ ಕಷಾಯ ಪೇಯ ಆರೋಗ್ಯದಾಯಕ ಎಂಬುದು ಮನೆಮಾತು. ಇದೇ ಕಾರಣಕ್ಕೆ ಕಷಾಯವನ್ನು ನಂದಿನಿ ಬ್ರಾಂಡ್‌ನಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದೆ. ಈ ಕಷಾಯವನ್ನು 200 ಎಂಎಲ್‌ನ ಪೆಟ್ ಬಾಟಲ್‌ನಲ್ಲಿ ಹೊರತರಲಾಗುತ್ತದೆ. ಇದನ್ನು ಆರು ತಿಂಗಳವರೆಗೆ ಕೆಡದಂತೆ ಇಡಬಹುದು. ಕುದಿಸಿದರೂ ಇದರ ತಾಜಾತನ ಕೆಡುವುದಿಲ್ಲ ಎನ್ನುತ್ತಾರೆ ಒಕ್ಕೂಟದ ಅಧಿಕಾರಿಗಳು.
ಕೋಲ್ಡ್ ಕಾಫಿ ಜಮಾನ:
ಕೋಲ್ಡ್ ಹೌಸ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಸಿಗುವ ಕೋಲ್ಡ್ ಕಾಫಿ ಮಾದರಿಯಲ್ಲೇ ನಂದಿನಿ ಕೋಲ್ಡ್ ಕಾಫಿ ಮಾರುಕಟ್ಟೆಪ್ರವೇಶಿಸುತ್ತಿದೆ. ನಂದಿನಿ ಹೊಮೋಜಿನೈಸ್ಡ್ ಹಾಲನ್ನು ಇದಕ್ಕೆ ಬಳಸಲಾಗುತ್ತದೆ. ಆದ್ದರಿಂದ ಈ ಕೋಲ್ಡ್ ಕಾಫಿ ಕೂಡ ಬೇಗನೆ ಕೆಡುವುದಿಲ್ಲ. ಇದು ಕೂಡ 200 ಎಂಎಲ್‌ನ ಪೆಟ್ ಬಾಟಲ್‌ನಲ್ಲಿ ಲಭ್ಯವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ನಿಜವಾಯ್ತು ಪೂಜಾರಿ ಭವಿಷ್ಯ, ಘಟಾನುಘಟಿಗಳು ಬಂದ್ರು 'ಕೈ' ಹಿಡಿಯಲಿಲ್ಲ ಜನ..!
ಜನಸಾಮಾನ್ಯರಿಗೆ ಆರೋಗ್ಯದಾಯಕ ಪೇಯ ಪೂರೈಸಲು ನಂದಿನಿ ಬ್ರಾಂಡ್‌ನಲ್ಲಿ ಕಷಾಯ ಮತ್ತು ಕೋಲ್ಡ್ ಕಾಫಿಯನ್ನು ಪರಿಚಯಿಸಲಾಗುತ್ತಿದೆ. ಈ ಹೊಸ ಉತ್ಪನ್ನಗಳು ನ.19ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯವಿರಲಿದೆ ಎಂದು ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿ. ಹೆಗಡೆ ಹೇಳಿದ್ದಾರೆ.
-ಆತ್ಮಭೂಷಣ್