ಮೂರು ದಿನದ ಮಳೆಗೆ 4 ಲಕ್ಷಕ್ಕೂ ಹೆಚ್ಚಿನ ಹಾನಿ: ಇಬ್ಬರುಸಾವು

By Kannadaprabha NewsFirst Published Oct 19, 2019, 10:45 AM IST
Highlights

ಕರಾವಳಿಯಲ್ಲಿ ಭಾರೀ ಮಳೆಯಾಗಿದ್ದು, ಉಡುಪಿ ಭಾಗದಲ್ಲಿ ಮೂರು ದಿನದಲ್ಲಿ 4 ಲಕ್ಷಕ್ಕೂ ಹೆಚ್ಚ ನಷ್ಟವಾಗಿದೆ. ಬೈಂದೂರು ತಾಲೂಕಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದು, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಲಕ್ಷಾಂತರ ರು. ಆಸ್ತಿ ಹಾನಿಯಾಗಿದೆ.

ಉಡುಪಿ(ಅ.19): ಕಳೆದ ಮೂರು ದಿನಗಳಿಂದ ಉಡುಪಿ ಜಿಲ್ಲೆಯಾದ್ಯಂತ ಸಿಡಿಲು, ಗುಡುಗು ಮತ್ತು ಮಳೆ-ಗಾಳಿಗೆ ಬೈಂದೂರು ತಾಲೂಕಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದು, ಕುಂದಾಪುರ ಮತ್ತು ಕಾರ್ಕಳ ತಾಲೂಕುಗಳಲ್ಲಿ ಲಕ್ಷಾಂತರ ರು. ಆಸ್ತಿ ಹಾನಿಯಾಗಿದೆ.

ಗುರುವಾರ ಬೈಂದೂರು ತಾಲೂಕಿನ ಕಂಬದಕೋಣೆ ಗ್ರಾಮದ ಹಳೆಗೇರಿ ಎಂಬಲ್ಲಿನ 7ನೇ ತರಗತಿಯ ವಿದ್ಯಾರ್ಥಿಗಳಾದ ವಂಶಿತ್‌ ಶೆಟ್ಟಿ(12) ಮತ್ತು ರಿತೇಶ್‌ ಶೆಟ್ಟಿ(12) ಹೆರಂಜಾಲ ಗ್ರಾಮದ ಹೊಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಆಟವಾಡಲು ಹೋಗಿ ಆಕಸ್ಮಿಕವಾಗಿ ಮಳೆ ನೀರು ಹರಿಯುತ್ತಿದ್ದ ನದಿಗೆ ಬಿದ್ದು ಮೃತಪಟ್ಟಿದ್ದಾರೆ.

ಕುಂದಾಪುರ ತಾಲೂಕು:

ಇಲ್ಲಿನ ಬಳ್ಕೂರು ಗ್ರಾಮದ ಸುಮಾರು 7 ಮನೆಗಳಿಗೆ ಹಾನಿಯಾಗಿದೆ. ಚಂದ್ರ ಬಂಗೇರ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್‌ ಪರಿಕರಗಳು ಸುಟ್ಟು ಹೋಗಿ 50 ಸಾವಿರ ರು., ರತ್ನಾವತಿ ಅವರ ಮನೆಗೆ ಸಿಡಿಲು ಬಡಿದು ವಿದ್ಯುತ್‌ ಪರಿಕರಗಳು ಸುಟ್ಟು ಹೋಗಿ 35 ಸಾವಿರ ರು. ನಷ್ಟವಾಗಿದೆ.

ಕೊಡಗಿನಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ಲಾರೆನ್ಸ್‌ ಡಿಸೋಜ ಎಂಬವರ ಮನೆಗೆ ಸಿಡಿಲು ಬಡಿದು 25 ಸಾವಿರ ರು., ಲಚ್ಚ ಪೂಜಾರಿ ಅವರ ಮನೆಗೆ ಸಿಡಿಲು ಬಡಿದು 10 ಸಾವಿರ ರು., ನರಸಿಂಹ ಸೇರೆಗಾರ ಅವರ ಮನೆಗೆ ಸಿಡಿಲು ಬಡಿದು 20 ಸಾವಿರ ರು., ಲಿಗೋರಿ ಡಿಸೋಜ ಅವರ ಜಾನುವಾರು ಕೊಟ್ಟಿಗೆ ಮಳೆಗಾಳಿಯಿಂದ 10 ಸಾವಿರ ರು., ರಾಜೀವ ಪುತ್ರನ್‌ ಅವರ ವಾಸದ ಮನೆ ಮೇಲೆ ಮರ ಬಿದ್ದು 80 ಸಾವಿರ ರು. ನಷ್ಟವಾಗಿದೆ.

ಕಾರ್ಕಳ ತಾಲೂಕು:

ಕಾರ್ಕಳ ತಾಲೂಕಿನಲ್ಲಿ 4 ಮನೆಗಳಿಗೆ ಹಾನಿಯಾಗಿದ್ದು ಒಬ್ಬರಿಗೆ ಸಿಡಿಲು ಬಡಿದು ಆಸ್ಪತ್ರೆ ಪಾಲಾಗಿದ್ದಾರೆ. ಇಲ್ಲಿನ ದುರ್ಗಾ ಗ್ರಾಮದ ಜೀನತ್‌ ಬಾನು ಶಾಬುಲಾಲ್‌ ಅವರ ಮನೆ ಗಾಳಿಮಳೆಗೆ ಬಹುತೇಕ ಕುಸಿದಿದ್ದು 1 ಲಕ್ಷ ರು. ಹಾನಿಯಾಗಿದೆ. ನಿಟ್ಟೆಗ್ರಾಮದ ಚಂದ್ರಯ್ಯ ಹೆಗ್ಡೆ ಅವರ ಮನೆಗೆ ಸಿಡಿಲು ಬಡಿದು 10 ಸಾವಿರ ರು., ಪುಷ್ಪ ಅವರ ಮನೆಗೆ ಸಿಡಿಲು ಬಡಿದು 10 ಸಾವಿರ ರು., ಮರ್ಣೆ ಗ್ರಾಮದ ಅಚ್ಯುತ ನಾಯಕ್‌ ಅವರ ಮನೆಗೆ ಸಿಡಿಲು ಬಡಿದು 20 ಸಾವಿರ ರು. ನಷ್ಟವಾಗಿದೆ.

ಕುಕ್ಕುಂದೂರು ಗ್ರಾಮದ ಸೋಮಶೇಖರ ಅವರಿಗೆ ಸಿಡಿಲು ಬಡಿದು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ.

ಕಾಪು ತಾಲೂಕಿನಲ್ಲಿಯೂ ಒಂದು ಮನೆಗೆ ಗಾಳಿ​-ಮಳೆಯಿಂದ ಹಾನಿಯಾಗಿದೆ. ಇಲ್ಲಿನ ಬೆಳಪು ಗ್ರಾಮದ ಸತೀಶ್‌ ಮೋನಯ್ಯ ಆಚಾರ್ಯ ಅವರ ಮನೆಯ ಮೇಲೆ ತೆಂಗಿನ ಮರಬಿದ್ದು ಭಾಗಶಃ ಹಾನಿಯಾಗಿ ಅವರಿಗೆ 10 ರು. ನಷ್ಟವಾಗಿದೆ.

ನಿರ್ವಸಿತರಿಗೆ ಶೀಘ್ರ ಮನೆ ನಿರ್ಮಾಣ: ಸೋಮಣ್ಣ ಭರವಸೆ

click me!