ಉಡುಪಿ ಜಿಲ್ಲೆಗೆ ಶೀಘ್ರದಲ್ಲೇ ಮತ್ತೊಂದು ಹೊಸ ತಾಲೂಕು ಸೇರ್ಪಡೆಯಾಗುತ್ತಿದ್ದು, ಈ ಸಂಬಂಧ ಸ್ಥಳ ಪರಿಶೀಲನೆಯನ್ನು ನಡೆಸಲಾಗಿದೆ.
ಕಾರ್ಕಳ [ಅ.18]: ಕಳೆದ ಸಾಲಿನ ಬಜೆಟ್‌ನಲ್ಲಿ ಹೆಬ್ರಿಯನ್ನು ನೂತನ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದ್ದು, ಇದೀಗ ನೂತನ ತಾಲೂಕು ಕಚೇರಿ ರಚನೆಗೆ ಸರ್ಕಾರದಿಂದ ಅನುದಾನ ಮಂಜೂರಾಗಿದೆ. ನೂತನ ತಾಲೂಕು ಕಚೇರಿ ಕಟ್ಟಡಕ್ಕೆ ಹೆಬ್ರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲೇ ಸ್ಥಳ ಪರಿಶೀಲನೆ ನಡೆಸಲಾಗಿದ್ದು, ಇದಕ್ಕೆ ಗ್ರಾಮಸ್ಥರು ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ಹಾಗೂ ಹೆಬ್ರಿ ತಹಸೀಲ್ದಾರ್ ಮಹೇಶ್ಚಂದ್ರ ಮುಂತಾದ ಅಧಿಕಾರಿಗಳ ತಂಡ ಬುಧವಾರ ಬೆಳಗ್ಗೆ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಆರಂಭಿಕ ಹಂತವಾಗಿ ಕಾಲೇಜಿಗೆ ಮೀಸಲಿರಿಸಿರುವ 5 ಎಕರೆ ಜಾಗದ ಪರಿಶೀಲನೆಗೆ ಮುಂದಾಗಿದ್ದರು. ಈ ಮೊದಲೇ ಕಾಲೇಜು ಕ್ಯಾಂಪಸ್ ಒಳಗೆ ಯಾವುದೇ ಕಾರಣಕ್ಕೂ ತಾಲೂಕು ಕಚೇರಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಗ್ರಾಮಸ್ಥರು ಸ್ಪಷ್ಟಪಡಿಸಿದ್ದರು. ಆದರೆ, ಪ್ರಸ್ತುತ ಗ್ರಾಮಸ್ಥರ ವಿರೋಧದ ನಡುವೆಯೇ ಶಾಸಕರು ಸ್ಥಳ ಪರಿಶೀಲನೆಗೆ ಮುಂದಾಗಿರುವುದು ಸರಿಯಲ್ಲ, ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಎಂದು ಪ್ರತಿಭಟನಾಕಾರ ಎಚ್.ಕೆ. ಶ್ರೀಧರ್ ಶೆಟ್ಟಿಆಗ್ರಹಿಸಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸರ್ಕಾರಿ ಕಚೇರಿಗಳ ಸಂಕೀರ್ಣ, ನ್ಯಾಯಾಲಯ, ಪೊಲೀಸ್ ಇಲಾಖೆ ಮುಂತಾದವುಗಳು ಶಿಕ್ಷಣ ಸಂಸ್ಥೆಗಳ ಪಕ್ಕದಲ್ಲಿಯೇ ಇದ್ದರೆ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ತೊಡಕುಂಟಾಗುತ್ತದೆ. ಅಲ್ಲದೆ ಶಿಕ್ಷಣ ಇಲಾಖೆಗೆ ಕಾದಿರಿಸಿದ ಜಾಗವನ್ನು ಬೇರೊಂದು ಇಲಾಖೆಗೆ ವರ್ಗಾಯಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲೂ ಸಿದ್ಧ. ಗ್ರಾಮಸ್ಥರ ವಿರೋಧದ ನಡುವೆಯೂ ತಾಲೂಕು ಕಚೇರಿ ನಿರ್ಮಾಣಕ್ಕೆ ಮುಂದಾದರೆ ಇದರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶ್ರೀಧರ್ ಶೆಟ್ಟಿಎಚ್ಚರಿಸಿದ್ದಾರೆ.
ಕಳೆದ 40 ವರ್ಷಗಳ ಹಿಂದೆ ಚಾರಾ ಗ್ರಾಮದಲ್ಲಿ ಸರ್ಕಾರಿ ಕಚೇರಿಗಳ ನಿರ್ಮಾಣಕ್ಕೆಂದೇ 11 ಎಕರೆ ಕಂದಾಯ ಭೂಮಿಯನ್ನು ಮೀಸಲಿರಿಸಲಾಗಿದ್ದು, ಇಲ್ಲಿಯೇ ತಾಲೂಕು ಕಚೇರಿ ನಿರ್ಮಿಸಬೇಕೆನ್ನುವ ಸಾರ್ವಜನಿಕರ ಆಗ್ರಹವಾಗಿತ್ತು. ಇದಲ್ಲದೆ ಚಾರಾ ಗ್ರಾಮ ಪಂಚಾಯಿತಿ ಕೂಡ ಕಂದಾಯ ಇಲಾಖೆ ತಾಲೂಕು ಕಚೇರಿ ನಿರ್ಮಾಣಕ್ಕೆ ಮುಂದಾದರೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿತ್ತು. ಆದರೆ ಚಾರಾದಲ್ಲಿ ಮೀಸಲಿರಿಸಿದ ಸರ್ಕಾರಿ ಜಾಗವನ್ನು ಕೈ ಬಿಟ್ಟು ಕಾಲೇಜಿಗೆ ಮೀಸಲಿರಿಸಿದ ಜಾಗವನ್ನು ಯಾಕೆ ಆಯ್ಕೆ ಮಾಡಿಕೊಂಡರೆನ್ನುವುದು ನಿಗೂಢವಾಗಿದೆ. ಮೂಲಗಳ ಪ್ರಕಾರ ಈಗಾಗಲೇ ಜಿಲ್ಲಾಧಿಕಾರಿ ಗಳು ಶಿಕ್ಷಣ ಇಲಾಖೆಯ ಜಾಗವನ್ನು ತಾಲೂಕು ಕಚೇರಿ ನಿರ್ಮಾಣಕ್ಕೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ ಎನ್ನಲಾಗುತ್ತಿದೆ.
ಕಾಲೇಜು ವಿದ್ಯಾರ್ಥಿಗಳ ಹಾಗೂ ಗ್ರಾಮಸ್ಥರ ಮನವಿಯನ್ನು ತಹಸೀಲ್ದಾರ್ ಮಹೇಶ್ಚಂದ್ರ ಸ್ವೀಕರಿಸಿ ಈ ಬಗ್ಗೆ ಪರಿಶೀಲಿಸುವುದಾಗಿ ಭರವಸೆ ನೀಡಿದರು.