Hijab Row ಕಾಲೇಜು ಪ್ರವೇಶ ಪಡೆಯುವಾಗ ಸಮವಸ್ತ್ರ ಧರಿಸುತ್ತೇವೆ, ಶಿಸ್ತಿಗೆ ಭಂಗ ತರಲ್ಲ ಪತ್ರಕ್ಕೆ ಸಹಿ, ದಾಖಲೆಯಿಂದ ಸಂಕಷ್ಟ!

By Kannadaprabha News  |  First Published Feb 6, 2022, 4:02 AM IST
  • ಕಾಲೇಜು ಪ್ರವೇಶದ ವೇಳೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದ ವಿದ್ಯಾರ್ಥಿನಿಯರು
  • ಶಿಸ್ತು ಭಂಗ, ನಿಯಮ ಉಲ್ಲಂಘನೆಯಾದಲ್ಲಿ ಕಾಲೇಜಿನಿಂದ ಟಿಸಿ
  • ಶಿಸ್ತು ಪಾಲಿಸುವುದು ಸೇರಿದಂತೆ, 10 ನಿಮಯಗಳ ಬಗ್ಗೆ ಸಹಿ

ಉಡುಪಿ(ಫೆ.06): ಸರ್ಕಾರಿ ಬಾಲಕಿಯರ ಪಿಯು ಕಾಲೇಜಲ್ಲಿ ಸಮವಸ್ತ್ರದ ಜೊತೆಗೆ ಹಿಜಾಬ್‌(Hijab) ಧರಿಸುತ್ತೇವೆಂದು ಜಿದ್ದಿಗೆ ಬಿದ್ದಿರುವ 6 ವಿದ್ಯಾರ್ಥಿನಿಯರು(Students) ಕಾಲೇಜಿಗೆ ಪ್ರವೇಶ ಪಡೆಯುವಾಗ, ಕಾಲೇಜಿನ ನಿಗದಿತ ಸಮವಸ್ತ್ರ(Uniform) ಧರಿಸುತ್ತೇವೆ, ಶಿಸ್ತಿಗೆ(discipline) ಭಂಗ ತರಲ್ಲ ಎಂಬ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಕುರಿತ ದಾಖಲೆಯನ್ನು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಕೆ.ರಘುಪತಿ ಭಟ್‌(raghupathi bhat ) ಬಿಡುಗಡೆ ಮಾಡಿದ್ದಾರೆ.

ಸಮವಸ್ತ್ರ ಧರಿಸುವುದು ಮತ್ತು ಶಿಸ್ತು ಪಾಲಿಸುವುದು ಸೇರಿದಂತೆ, 10 ನಿಮಯಗಳ ಬಗ್ಗೆ ನನಗೆ ನನ್ನ ಹೆತ್ತವರಿಗೆ ಸಂಪೂರ್ಣ ಅರಿವಿದೆ. ನನ್ನಿಂದ ಶಿಸ್ತು ಭಂಗ, ನಿಯಮ ಉಲ್ಲಂಘನೆಯಾದಲ್ಲಿ ಕಾಲೇಜಿನಿಂದ(college) ಟಿಸಿ ನೀಡಲಾಗುತ್ತದೆ ಎಂಬ ಬಗ್ಗೆ ನನಗೆ ತಿಳಿವಳಿಕೆ ಇದೆ ಎಂದು ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರು ತಿಳಿವಳಿಕೆ ಪತ್ರಕ್ಕೆ ಸಹಿ ಮಾಡಿದ್ದಾರೆ.

Latest Videos

undefined

Hijab Controversy ಹಿಜಾಬ್ ಹಾಕದೇ ಬರಲಾಗುವುದಿಲ್ಲ ಅಂದ್ರೆ ಕಾಲೇಜಿಗೆ ಬರಬೇಡಿ ಎಂದ ಬಿಜೆಪಿ ಶಾಸಕ

ಹಿಜಾಬ್‌ ವಿವಾದಕ್ಕೆ ಬ್ರೇಕ್‌: ಶಾಲಾ,ಕಾಲೇಜಲ್ಲಿ ಸಮವಸ್ತ್ರ ಕಡ್ಡಾಯ
ರಾಜ್ಯದಲ್ಲಿ ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದ ತಾರಕ್ಕೇರಿದ ಬೆನ್ನಲ್ಲೇ ಪದವಿ ಪೂರ್ವ ಶಿಕ್ಷಣ ಇಲಾಖೆಯು ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಧರಿಸುವುದನ್ನು ಕಡ್ಡಾಯಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.

ಸರ್ಕಾರಿ ಶಾಲೆ ಹಾಗೂ ಕಾಲೇಜುಗಳ ವಿದ್ಯಾರ್ಥಿಗಳು ತಮಗೆ ನಿಗದಿಪಡಿಸಿರುವ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು. ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಆಡಳಿತ ಮಂಡಳಿಗಳು ನಿರ್ಧರಿಸಿರುವ ಸಮವಸ್ತ್ರವನ್ನೇ ಧರಿಸಬೇಕು ಎಂದು ಸ್ಪಷ್ಟಪಡಿಸಿದೆ.

Student Police Cadets ಹಿಜಾಬ್‌ ಧರಿಸಲು ಕೇರಳ ಸರ್ಕಾರ ನಕಾರ!

ಅಲ್ಲದೆ, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಲ್ಲಿ ತಮ್ಮ ಧರ್ಮದ ಅನುಸಾರ ಆಚರಣೆಗಳನ್ನು ಪಾಲಿಸುತ್ತಿರುವುದರಿಂದ ಸಮಾನತೆ ಹಾಗೂ ಏಕತೆಗೆ ಧಕ್ಕೆ ಬರುತ್ತಿರುವುದು ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದೆ. ಸುಪ್ರೀಂಕೋರ್ಟ್‌ ಹಾಗೂ ವಿವಿಧ ರಾಜ್ಯಗಳ ಹೈಕೋರ್ಟ್‌ಗಳ ತೀರ್ಪುಗಳಿಂದಾಗಿ ಶಿರವಸ್ತ್ರ (ಹೆಡ್‌ ಸ್ಕಾಫ್‌ರ್‍) ಧರಿಸುವುದು ಅಥವಾ ತಲೆಯನ್ನು ಮುಚ್ಚಿಕೊಂಡು ಶಾಲಾ-ಕಾಲೇಜಿಗೆ ಬರದಂತೆ ನಿರ್ದೇಶಿಸುವುದು ಸಂವಿಧಾನದ 25ನೇ ವಿಧಿಯ ಉಲ್ಲಂಘನೆಯಲ್ಲ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ಕಡ್ಡಾಯವಾಗಿ ಸಮವಸ್ತ್ರ ಧರಿಸಿಯೇ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹಾಜರಾಗಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೆ ಹಿಜಾಬ್‌ ಧರಿಸಿ ಬರುವುದನ್ನು ವಿರೋಧಿಸಿ ಕೆಲ ಹಿಂದೂ ಯುವಕ-ಯುವತಿಯರು ಕೇಸರಿ ಶಾಲು ಧರಿಸಿ ತರಗತಿಗಳಿಗೆ ಬರಲು ಆರಂಭಿಸಿದ್ದಾರೆ. ಇದು ರಾಜ್ಯದ ವಿವಿಧೆಡೆ ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದ್ದು, ರಾಜಕೀಯ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ವ್ಯಾಪಕವಾಗುತ್ತಿವೆ.

ಈ ಹಂತದಲ್ಲಿ ಆದೇಶ ಹೊರಡಿಸಿರುವ ಇಲಾಖೆಯು, ಶಿಕ್ಷಣ ಕಾಯಿದೆ -1983ರ ಕಲಂ 7 (2)(5) ಪ್ರಕಾರ ಎಲ್ಲ ಶಾಲೆಗಳ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಒಂದೇ ಕುಟುಂಬದ ರೀತಿ ನಡೆದುಕೊಳ್ಳಬೇಕು. ಯಾವುದೇ ಒಂದು ವಿಷಯಕ್ಕೆ ಸೀಮಿತವಾಗಿರದೆ ಸಾಮಾಜಿಕ ನ್ಯಾಯದ ಪರವಾಗಿ ನಡೆದುಕೊಳ್ಳಬೇಕು ಎಂದು ಹೇಳಲಾಗಿದೆ. ಕಲಂ 133ರ ಪ್ರಕಾರ ಶಾಲಾ ಮತ್ತು ಕಾಲೇಜುಗಳಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವ ಅಧಿಕಾರವನ್ನೂ ಸರ್ಕಾರಕ್ಕೆ ನೀಡಲಾಗಿದೆ.

ಉಡುಪಿ ನಗರದ ಮಹಿಳಾ ಸರ್ಕಾರಿ ಪಿಯು ಕಾಲೇಜಿನಲ್ಲಿ ತಿಂಗಳ ಹಿಂದೆ 6 ವಿದ್ಯಾರ್ಥಿನಿಯರಿಗೆ ಹಿಜಾಬ್‌ ಧರಿಸಿ ತರಗತಿಗೆ ಹಾಜರಾಗಲು ವ್ಯಕ್ತವಾದ ವಿರೋಧ ಬಳಿಕ ಇದೀಗ ಹೈಕೋರ್ಟ್‌ ಮೆಟ್ಟಿಲೇರಿದೆ. ಆ ಬಳಿಕ ಕುಂದಾಪುರ-ಬೈಂದೂರಿನ ಕಾಲೇಜುಗಳಲ್ಲಿ ಹಿಜಾಬ್‌ಗೆ ಪ್ರತಿಯಾಗಿ ಕೆಲ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗಿದ್ದರು. ಇದೀಗ ಈ ತಿಕ್ಕಾಟ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಇನ್ನಷ್ಟುಕಾಲೇಜುಗಳಿಗೆ ವ್ಯಾಪಿಸಿದೆ. ಕುಂದಾಪುರದ ಆರ್‌.ಎನ್‌.ಶೆಟ್ಟಿಪ.ಪೂ. ಕಾಲೇಜಿನಲ್ಲಿ ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನೀಡಲಾಯಿತಾದರೂ, ಪ್ರತ್ಯೇಕ ಕೊಠಡಿಯಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿತ್ತು. ಇನ್ನು ಬಸ್ರೂರಿನ ಶಾರದಾ ಪಿಯು ಕಾಲೇಜು, ಬೈಂದೂರಿನ ಸರ್ಕಾರಿ ಪಿಯು ಕಾಲೇಜು ಹಾಗೂ ನಾವುಂದದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಆಗಮಿಸಿದ್ದು, ತರಗತಿಯಲ್ಲಿ ಕೂರಲು ಅನುಮತಿ ನೀಡಲಾಯಿತು.

click me!