ಸುರತ್ಕಲ್‌ ಟೋಲ್‌ ಸಮಸ್ಯೆ ಪರಿಹಾರಕ್ಕೆ ಗಡ್ಕರಿ ಭೇಟಿಯಾದ ಶಾಸಕ ರಘುಪತಿ ಭಟ್

By Sathish Kumar KHFirst Published Dec 1, 2022, 5:27 PM IST
Highlights

ಸುರತ್ಕಲ್ ಟೋಲ್ ರದ್ದು ಮಾಡಿ ಅದರ ಶುಲ್ಕವನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಿರುವುದು ಅವೈಜ್ಞಾನಿಕವಾಗಿದೆ. ಟೋಲ್‌ ವಿಲೀನದಿಂದ ಉಡುಪಿ ಜಿಲ್ಲೆಯ ಜನರ ಮೇಲೆ ಉಂಟಾಗುತ್ತಿರುವ ವ್ಯತಿರಿಕ್ತ ಪರಿಣಾಮ(ಅಧಿಕ ಶುಲ್ಕದ ಹೊರೆ)ಗಳನ್ನು ಪರಿಹರಿಸುವಂತೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರಿಗೆ ಸ್ಥಳೀಯ ಶಾಸಕ ರಘುಪತಿ ಭಟ್‌ ಅವರು ಮನವಿ ಸಲ್ಲಿಸಿದರು.

ಉಡುಪಿ (ಡಿ.1) : ಸುರತ್ಕಲ್ ಟೋಲ್ ರದ್ದು ಮಾಡಿ ಅದರ ಶುಲ್ಕವನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಿರುವುದು ಅವೈಜ್ಞಾನಿಕವಾಗಿದೆ. ಟೋಲ್‌ ವಿಲೀನದಿಂದ ಜಿಲ್ಲೆಯ ಜನರ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿವೆ. ಕೂಡಲೇ ಈ ಗೊಂದಲವನ್ನು ಬಗೆಹರಿಸುವಂತೆ ಇಂದು ಶಾಸಕ ರಘುಪತಿ ಭಟ್ ಅವರು ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರಿ ಮನವಿ ಸಲ್ಲಿಸಿದರು. 

ಉಡುಪಿ - ಚಿಕ್ಕಮಗಳೂರು ಸಂಸದೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಗುಜರಾತ್ ಚುನಾವಣೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವೆ ಶೋಭಾ ಕರಂದ್ಲಾಜೆ ಅವರ ದೆಹಲಿ ಕಚೇರಿ ಅಧಿಕಾರಿಗಳು ಹಾಗೂ ಆಪ್ತ ಕಾರ್ಯದರ್ಶಿ ಅವರೊಂದಿಗೆ ಸುರತ್ಕಲ್‌ ಟೋಲ್‌ ಸಮಸ್ಯೆ ಬಗ್ಗೆ ಚರ್ಚಿಸಲಾಗಿತ್ತು. ನಂತರ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರ ಕಚೇರಿ ಅಧಿಕಾರಿಗಳನ್ನು ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿ ಅವರಿಗೆ ಮನವರಿಕೆ ಮಾಡಲಾಯಿತು. ಬಳಿಕ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿಯಾಗಿ ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಿರುವುದರಿಂದ ಸ್ಥಳೀಯವಾಗಿ ಉಂಟಾಗುವ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಈ ವೇಳೆ ಮನವಿ ಸ್ವೀಕರಿಸಿದ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಡಿ. 5 ರಂದು ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ರಘುಪತಿ ಭಟ್‌ ತಿಳಿಸಿದರು.

Mangaluru News: ರದ್ದಾದ Suratkal Tollgate; ಹೆಜಮಾಡಿಯಲ್ಲಿ ವಸೂಲಿ!

ಉಡುಪಿ ಜಿಲ್ಲೆಯವರಿಗೆ ದುಬಾರಿ ಶುಲ್ಕ: ಸುರತ್ಕಲ್ ಟೋಲ್ ರದ್ದು ಮಾಡಿ ಅದರ ಶುಲ್ಕವನ್ನು ಹೆಜಮಾಡಿ ಟೋಲ್ ಜತೆ ವಿಲೀನ ಮಾಡಿ ಎರಡೂ ಟೋಲ್ ಶುಲ್ಕವನ್ನು ಒಂದೇ ಟೋಲ್ ಮೇಲೆ ಹೇರುವುದರಿಂದ ಉಡುಪಿ ಜಿಲ್ಲೆಯ ವಾಹನ ಸವಾರರು ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ. ಉಡುಪಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಟ್ಯಾಕ್ಸಿ ಅಥವಾ ಇತರ ವಾಹನಗಳು ಮುಲ್ಕಿಯಿಂದ ಕಿನ್ನಿಗೋಳಿ ಮುಖಾಂತರ ಹೋಗುತ್ತಿದ್ದರಿಂದ ಸುರತ್ಕಲ್ ಟೋಲ್ ಶುಲ್ಕ ಪಾವತಿಸುವ ಅವಶ್ಯಕತೆ ಇರಲಿಲ್ಲ. ಈಗ ಸುರತ್ಕಲ್ ಟೋಲ್ ಶುಲ್ಕ ಹೆಜಮಾಡಿ ಟೋಲ್ ಜತೆ ವಿಲೀನದಿಂದ ಮುಲ್ಕಿಯಿಂದ ಕಿನ್ನಿಗೋಳಿ ಮೂಲಕ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಟ್ಯಾಕ್ಸಿ ಸೇರಿ ಇತರ ವಾಹನ ಸವಾರರು ಹೆಜಮಾಡಿ ಟೋಲ್ ನಲ್ಲಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ ಎಂದು ಸಮಸ್ಯೆಯ ಮಾಹಿತಿ ಬಿಚ್ಚಿಟ್ಟಿದ್ದಾರೆ.

Mangaluru: ಕೊನೆಗೂ suratkal tollgate ರದ್ದು; ನಿಲ್ಲಿಸಿಲ್ಲ ಇನ್ನು ಹೋರಾಟ!

ಸ್ಥಳೀಯ ವಾಹನಗಳ ರಿಯಾಯಿತಿ ರದ್ದು: ಅಲ್ಲದೆ ಸುರತ್ಕಲ್ ಟೋಲ್ ನಲ್ಲಿ ಸ್ಥಳೀಯ ವಾಣಿಜ್ಯ ಉದ್ದೇಶಕ್ಕೆ ಬಳಸುವ ವಾಹನಗಳಿಗೆ ಶೇ.50 ರಷ್ಟು ರಿಯಾಯಿತಿ ಇತ್ತು. ಅದನ್ನು ಈ ಟೋಲ್ ನಲ್ಲಿ ವಿಲೀನ ಮಾಡುವಾಗ ಪರಿಗಣಿಸಿದೆ ಇರುವ ಬಗ್ಗೆಯೂ ಮನವಿಯಲ್ಲಿ ತಿಳಿಸಲಾಗಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧಾರ ಕೈಗೊಳ್ಳುವವರೆಗೆ ಟೋಲ್ ದರ ಹೆಚ್ಚಳ ಮಾಡದಂತೆ ಶಾಸಕ ರಘುಪತಿ ಭಟ್ ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಈ ವೇಳೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರ ಆಪ್ತ ಕಾರ್ಯದರ್ಶಿ ಸಾಕತ್ ಸಿಂಗ್ ರಾಣಾವತ್, ಹೆಚ್ಚುವರಿ ಆಪ್ತ ಕಾರ್ಯದರ್ಶಿ ಮಂಜುನಾಥ್ ಗೌಡ ಹಾಗೂ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಉಪಸ್ಥಿತರಿದ್ದರು.

click me!