ತುಮಕೂರು(ಮಾ.20): ಪಾವಗಡ ಸಮೀಪದ ಪಳವಳ್ಳಿ ಕೆರೆ ಕಟ್ಟೆಮೇಲೆ ಸಂಭವಿಸಿದ ಭೀಕರ ಬಸ್ ಅಪಘಾತದಲ್ಲಿ ಗಾಯಗೊಂಡು ನಗರದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯವನ್ನು ಸಂಸದ ಜಿ.ಎಸ್. ಬಸವರಾಜು, ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಹಾಗೂ ಬಿಜೆಪಿ ಮುಖಂಡ ಎಸ್. ಶಿವಪ್ರಸಾದ್ ವಿಚಾರಿಸಿದರು.
ಬಸ್ ಅಪಘಾತದಲ್ಲಿ ಗಾಯಗೊಂಡವರ ಪೈಕಿ 21 ಮಂದಿಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕರೆ ತಂದು ಚಿಕಿತ್ಸೆಗಾಗಿ ದಾಖಲಿಸಿರುವ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ವಿಧಾನ ಪರಿಷತ್ ಸದಸ್ಯರು ಗಾಯಾಳುಗಳ ಬೆಡ್ ಬಳಿ ತೆರಳಿ ಅವರಿಂದ ಬಸ್ ಅವಘಾತದ ಮಾಹಿತಿ ಪಡೆದು ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.
ಬಸ್ ದುರಂತ ನಡೆದ ಭಾಗದಲ್ಲಿ ಸರ್ಕಾರಿ ಬಸ್ ವ್ಯವಸ್ಥೆ: ಶ್ರೀರಾಮುಲು
ಗಾಯಾಳುಗಳಿಗೆ ಯಾವುದೇ ರೀತಿಯ ಕೊರತೆಯಾಗದಂತೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ವೀರಭದ್ರಯ್ಯನವರಿಗೆ ಸೂಚಿಸಿದರು. ನಂತರ ಮಾತನಾಡಿದ ಸಂಸದ ಜಿ.ಎಸ್. ಬಸವರಾಜು ಅವರು, ಆರ್‌ಟಿಒ ಇಲಾಖೆ ಸತ್ತು ಹೋಗಿದೆ. ಹೀಗಾಗಿ ಈ ದುರಂತ ನಡೆದಿದೆ. ಈ ಘಟನೆಗೆ ಆರ್‌ಟಿಒ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ. ಹಾಗಾಗಿ ಈ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕೆಎಸ್‌ಆರ್‌ಟಿಸಿ ಚಾಲಕರನ್ನು ಬುಕ್ ಮಾಡಿಕೊಂಡು ಖಾಸಗಿ ಬಸ್‌ನವರು ಈ ರೀತಿ ಓವರ್ ಲೋಡ್ ತುಂಬಿಕೊಂಡು ಸಾರ್ವಜನಿಕರ ಪ್ರಾಣದ ಜತೆ ಚೆಲ್ಲಾಟ ವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಅತೀ ವೇಗವೇ ದುರಂತಕ್ಕೆ ಕಾರಣ: ಅಧಿಕಾರಿಗಳು
ಈ ದುರಂತದಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಐವರು ಜೀವ ಕಳೆದುಕೊಂಡಿದ್ದಾರೆ. ಉಳಿದ 30ಕ್ಕೂ ಅಧಿಕ ಮಂದಿ ಪ್ರಯಾಣಿಕರು ಕೈ ಮುರಿತ, ಕಾಲು ಮುರಿತ, ಬೆನ್ನಿನ ಮೂಳೆ ಮುರಿತ ಸೇರಿದಂತೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ದುರಂತ ನಡೆಯಬಾರದಿತ್ತು ಎಂದು ವಿಷಾದಿಸಿದರು.
ವಿಧಾನ ಪರಿಷತ್ ಸದಸ್ಯ ಆರ್. ರಾಜೇಂದ್ರ ಮಾತನಾಡಿ, ಪಾವಗಡದಲ್ಲಿ ಈ ಬಸ್ ಅಪಘಾತದ ದುರಂತ ನಡೆಯಬಾರದಿತ್ತು. ದುರಾದೃಷ್ಟವಶಾತ್ ನಡೆದು ಹೋಗಿದೆ. ಅಪಘಾತದಲ್ಲಿ ಸಾವನ್ನಪ್ಪಿರುವ ಕುಟುಂಬದವರಿಗೆ ದುಃಖ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಹೇಳಿದರು.
ಬಸ್ ಚಾಲಕರುಗಳು ಬಹಳ ಎಚ್ಚರಿಕೆಯಿಂದ ಬಸ್ ಚಲಾಯಿಸಬೇಕು. ಹತ್ತಾರು ಮಂದಿ ಪ್ರಯಾಣಿಕರ ಜೀವ ಚಾಲಕನ ಕೈಯಲ್ಲಿ ಇರುತ್ತದೆ. ಇದನ್ನು ಅರ್ಥ ಮಾಡಿಕೊಂಡು ಬಹಳ ಜಾಗರೂಕತೆಯಿಂದ ಬಸ್ ಚಲಾಯಿಸಬೇಕು ಎಂದ ಅವರು, ಪಾವಗಡಕ್ಕೂ ತೆರಳಿ ಮೃತ ಕುಟುಂಬದವರಿಗೆ ಸಾಂತ್ವನ ಹೇಳಿ, ಪಾವಗಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸುವ ಕೆಲಸವನ್ನು ಮಾಡಲಾಗುವುದು. ಜತೆಗೆ ಮೃತರ ಕುಟುಂಬಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಬಗ್ಗೆಯೂ ಸಂಬಂಧಪಟ್ಟವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ಕರೆ ತರುತ್ತಿದ್ದಂತೆ ಆಸ್ಪತ್ರೆಯತ್ತ ದೌಡಾಯಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸುವಲ್ಲಿ ಶ್ರಮ ವಹಿಸಿದ ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಮಾತನಾಡಿ, ಬಸ್ ಅಪಘಾತ ತುಂಬಾ ಆಘಾತವನ್ನುಂಟು ಮಾಡಿದೆ. ಇದೇ ಸ್ಥಳದಲ್ಲಿ ಎರಡು-ಮೂರು ಬಾರಿ ಅಪಘಾತಗಳು ಸಂಭವಿಸಿ ಸಾವು-ನೋವು ಸಂಭವಿಸಿತ್ತು. ಮತ್ತೆ ಈಗ ಅಪಘಾತ ಪುನರಾವರ್ತಿತವಾಗುತ್ತಿರುವುದು ಆತಂಕಕಾರಿಯಾಗಿದೆ ಎಂದರು.