* ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಮತ್ತಷ್ಟು ಪದಕ ಗೆಲ್ಲುವ ನಿರೀಕ್ಷೆ
* ಈಗಾಗಲೇ ಪ್ಯಾರಾಲಿಂಪಿಕ್ಸ್‌ನಲ್ಲಿ 10 ಪದಕ ಗೆದ್ದಿರುವ ಭಾರತ
* ಹಲವು ಪ್ಯಾರಾಥ್ಲೀಟ್‌ಗಳು ಸೆಮಿಫೈನಲ್ ಪ್ರವೇಶ
ಟೋಕಿಯೋ(ಸೆ.03): ಪ್ಯಾರಾಲಿಂಪಿಕ್ಸ್‌ನಲ್ಲಿ ಸತತ 2ನೇ ದಿನವೂ ಭಾರತಕ್ಕೆ ಪದಕ ದೊರೆಯಲಿಲ್ಲವಾದರೂ, ಪದಕ ನಿರೀಕ್ಷೆಗಳು ಗರಿಗೆದರಿವೆ. ಗುರುವಾರ ಭಾರತದ ಶಟ್ಲರ್‌ಗಳು, ಕನ್ಹು (ಕಿರುದೋಣಿ) ಸ್ಟ್ರಿಂಟ್ ವಿಭಾಗದಲ್ಲಿ ಪ್ರಾಚಿ ಯಾದವ್ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಪುರುಷರ ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್ ಭಗತ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಸುಹಾಸ್ ಯತಿರಾಜ್, ತರುಣ್ ಧಿಲ್ಲೋನ್, ಕೃಷ್ಣ ನಾಗರ್ ಮೊದಲ ಪಂದ್ಯಗಳಲ್ಲಿ ಗೆದ್ದಿದ್ದಾರೆ. ಹಾಲಿ ವಿಶ್ವ ಚಾಂಪಿಯನ್, ವಿಶ್ವ ನಂ.1 ಭಗತ್ ಎಸ್‌ಎಲ್3 ವಿಭಾಗದಲ್ಲಿ ಉಕ್ರೇನ್‌ನ ಚಿರ್ಕೋವ್‌ರನ್ನು 2-0 ಗೇಮ್‌ಗಳಿಂದ ಸೋಲಿಸಿದರು. ಭಗತ್ ಮೊದಲ ಪಂದ್ಯದಲ್ಲಿ ಭಾರತದವರೇ ಆದ ಮನೋಜ್ ಸರ್ಕಾರ್ ವಿರುದ್ಧ ಗೆದ್ದಿದ್ದರು. ಎಸ್‌ಎಲ್4 ವಿಭಾಗದಲ್ಲಿ ಸುಹಾಸ್ ಜರ್ಮನಿಯ ಜಾನ್ ನಿಕ್ಲಾಸ್‌ರನ್ನು, ತರುಣ್ ಥಾಯ್ಲೆಂಡ್‌ನ ಸಿರಿಪೋಂಗ್‌ರನ್ನು ಸೋಲಿಸಿದರು. ಎಸ್‌ಎಚ್6 ವಿಭಾಗದಲ್ಲಿ ನಾಗರ್ ಮಲೇಷ್ಯಾದ ತರೆಸೋಹ್ ದಿದಿನ್ ವಿರುದ್ದ ಗೆಲುವು ಸಾಧಿಸಿದರು.
undefined
ಮೊದಲ ಪಂದ್ಯದಲ್ಲಿ ಸೋತಿದ್ದ ಪಾಲಕ್ ಕೊಹ್ಲಿ ಮಹಿಳಾ ವಿಭಾಗದ ‘ಎ’ಗುಂಪಿನ 2ನೇ ಪಂದ್ಯದಲ್ಲಿ ಟರ್ಕಿಯ ಝೆಹ್ರಾರನ್ನು ಮಣಿಸಿದರು. ಡಿ ಗುಂಪಿನ ಸ್ಪರ್ಧೆಯಲ್ಲಿ ಪಾರುಲ್ ಪರ್ಮರ್ ಎರಡೂ ಪಂದ್ಯಗಳನ್ನು ಕ್ರಮವಾಗಿ ಚೀನಾ, ಜರ್ಮನಿಯ ಎದುರಾಳಿಗಳ ವಿರುದ್ಧ ಸೋಲುಂಡರು. ಮಹಿಳಾ ಡಬಲ್ಸ್‌ನಲ್ಲಿ ಕೊಹ್ಲಿ-ಪಾರುಲ್ ಜೋಡಿ ಚೀನಾದ ಎದುರಾಳಿಗಳ ವಿರುದ್ಧ ಸೋಲನುಭವಿಸಿದರು.
ಟೋಕಿಯೋ ಪ್ಯಾರಾಲಿಂಪಿಕ್ಸ್: ಭಾರತದ ಪದಕ ಬೇಟೆಗೆ ಬ್ರೇಕ್..!
ಪ್ರಾಚಿಗೆ ಜಯ: ಕನ್ಹು (ಕಿರುದೋಣಿ) ಸ್ಟ್ರಿಂಟ್‌ನ ಮಹಿಳೆಯರ ಸಿಂಗಲ್ಸ್ 200 ಮೀ. ನಲ್ಲಿ ಪ್ರಾಚಿ ಯಾದವ್ ಸೆಮಿಫೈನಲ್ ಪ್ರವೇಶಿಸಿದ್ದಾರೆ. 1 ನಿಮಿಷ 11.09 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಪ್ರಾಚಿ ವಿಎಲ್2 ವಿಭಾಗದ ಒಂದನೇ ಹೀಟ್ಸ್ ನಲ್ಲಿ ದ್ವಿತೀಯ ಸ್ಥಾನಿಯಾಗಿ ಸೆಮೀಸ್‌ಗೆ ಅರ್ಹತೆ ಪಡೆದರು. ಸೆಮಿಫೈನಲ್ ಶುಕ್ರವಾರ ನಡೆಯಲಿದೆ. ಸೆಮೀಸ್‌ನಲ್ಲಿ 9 ಸ್ಪರ್ಧಿಗಳಿದ್ದು, 6 ಮಂದಿ ಫೈನಲ್‌ಗೇರಲಿದ್ದಾರೆ.
ರಾಹುಲ್‌ಗೆ 5ನೇ ಸ್ಥಾನ: 25 ಮೀ. ಪಿಸ್ತೂಲ್ ಮಿಶ್ರ ವಿಭಾಗದ ಎಸ್‌ಎಚ್1 ಸ್ಪರ್ಧೆಯಲ್ಲಿ ಶೂಟರ್ ರಾಹುಲ್ ಜಕ್ಕರ್ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅರ್ಹತಾ ಸುತ್ತಿನಲ್ಲಿ 576 ಅಂಕಗಳೊಂದಿಗೆ 2ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸಿದ್ದ ಜಕ್ಕರ್ ಫೈನಲ್‌ನಲ್ಲಿ ನಿರಾಸೆ ಮೂಡಿಸಿದರು. ಭಾರತದ ಇನ್ನೊಬ್ಬ ಸ್ಪರ್ಧಿ ಆಕಾಶ್ ಅರ್ಹತಾ ಸುತ್ತಿನಲ್ಲಿ 20ನೇ ಸ್ಥಾನ ಪಡೆದು ಸ್ಪರ್ಧೆಯಿಂದ ಹೊರಬಿದ್ದರು.
ಅರವಿಂದ್‌ಗೆ 7ನೇ ಸ್ಥಾನ: ಪುರುಷರ ಶಾಟ್‌ಪುಟ್‌ನ ಎಫ್35 ಸ್ಪರ್ಧೆಯ ಫೈನಲ್‌ನಲ್ಲಿ ಅರವಿಂದ್ ಪದಕ ಗೆಲ್ಲಲು ವಿಫಲರಾದರು. ಅರವಿಂದ್ 13.48 ಮೀ. ದೂರಕ್ಕೆ ಶಾಟ್‌ಪುಟ್ ಎಸೆದು 7ನೇ ಸ್ಥಾನ ಪಡೆದರು. 16.13 ಮೀ. ದೂರ ಎಸೆದ ಉಜ್ಬೇಕಿಸ್ತಾನದ ಖುಸ್ನಿದ್ದಿನ್ ಚಿನ್ನ ಗೆದ್ದುಕೊಂಡರು.
ಅರುಣಾಗೆ ಗಾಯ: ಮಹಿಳೆಯರ ಟೆಕ್ವಾಂಡೋ ಕೆ44-49 ಕೆ.ಜಿ ವಿಭಾಗದಲ್ಲಿ ಅರುಣಾ ತನ್ವರ್ ಕ್ವಾರ್ಟರ್ ಫೈನಲ್‌ನಲ್ಲಿ ಸೋಲುಂಡರು. ಆದರೆ ರಿಪಿಶ್ಯಾಜ್ ಸುತ್ತಿಗೆ ಅರ್ಹತೆ ಸಿಕ್ಕಿತು. ರಿಪಿಶ್ಯಾಜ್ ಸುತ್ತಿನಲ್ಲಿ ಜಯಿಸಿದ್ದರೆ ಕಂಚಿನ ಪದಕ ದೊರೆಯುತ್ತಿತ್ತು. ಆದರೆ ಅರುಣಾ, ಗಾಯದ ಸಮಸ್ಯೆಯಿಂದಾಗಿ ಸ್ಪರ್ಧಿಸಲಿಲ್ಲ.