ಕೊರೋನಾ ವೈರಸ್ ಈ ವರ್ಷ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಬಲಿಪಡೆದಿದೆ. ಇದೀಗ ಒಲಿಂಪಿಕ್ಸ್ ಆಯೋಜನ ಸಮಿತಿ ಸದಸ್ಯನಿಗೂ ಕೊರೋನಾ ಸೋಂಕು ತಗುಲಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಟೋಕಿಯೋ(ಏ.23): ಟೋಕಿಯೋ ಒಲಿಂಪಿಕ್ಸ್ ಆಯೋಜನ ಸಮಿತಿ ಸದಸ್ಯನಿಗೆ ಕೊರೋನಾ ಸೋಂಕು ತಗುಲಿರುವುದು ದೃಢ ಪಟ್ಟಿದ್ದು, ಆತಂಕ ಸೃಷ್ಟಿಸಿದೆ.
ತನ್ನ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ಈ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ವ್ಯಕ್ತಿಯ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲು ಆಯೋಜಕರು ನಿರಾಕರಿಸಿದ್ದಾರೆ. ಒಲಿಂಪಿಕ್ಸ್ ಆಯೋಜನಾ ಸಮಿತಿಯಲ್ಲಿ ಸುಮಾರು 3,500 ಸಿಬ್ಬಂದಿ ಇದ್ದು, ಈ ಪೈಕಿ ಶೇ.90 ಮಂದಿ ಕಳೆದ ಕೆಲ ವಾರಗಳಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.
ಸೋಂಕು ದೃಢಪಟ್ಟಿರುವ ವ್ಯಕ್ತಿ ಇದ್ದ ಸುತ್ತ ಮುತ್ತಲಿನ ಜನರಿಗೆ ಮನೆಬಿಟ್ಟು ಹೊರಬರದಂತೆ ಸೂಚಿಸಲಾಗಿದೆ. ಈ ವರ್ಷ ನಡೆಯಬೇಕಿದ್ದ ಒಲಿಂಪಿಕ್ ಕ್ರೀಡಾಕೂಟವನ್ನು 2021ಕ್ಕೆ ಮುಂದೂಡಲಾಗಿದ್ದು, ಕೊರೋನಾ ಸೋಂಕು ಹೆಚ್ಚುತ್ತಿರುವ ಕಾರಣ, ಮುಂದಿನ ವರ್ಷ ನಡೆಸಲು ಸಾಧ್ಯವೇ ಎನ್ನುವ ಅನುಮಾನ ಮೂಡಿದೆ.
ಒಲಿಂಪಿಕ್ಸ್‌ಗೆ ವೆಚ್ಚದ ಬಗ್ಗೆ ಜಪಾನ್, ಐಒಸಿ ಕಿತ್ತಾಟ
ಕೊರೋನಾ ವೈರಸ್ ಭೀತಿಯಿಂದಾಗಿ ಕಳೆದ ತಿಂಗಳಷ್ಟೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಒಂದು ವರ್ಷ ಮುಂದೂಡಲಾಯಿತು. ಪರಿಷ್ಕೃತ ವೇಳಾಪಟ್ಟಿಯಂತೆ ಟೋಕಿಯೋ ಒಲಿಂಪಿಕ್ಸ್ 2021ರ ಜುಲೈ 23ರಿಂದ ಆಗಸ್ಟ್ 08ರವರೆಗೆ ನಡೆಯಲಿದೆ.
ಇನ್ನು ಇದರ ಬೆನ್ನಲ್ಲೇ ಟೋಕಿಯೋ ಒಲಿಂಪಿಕ್ಸ್ ಒಂದು ವರ್ಷ ಮುಂದೂಡಿರುವುದರಿಂದ ಟೂರ್ನಿ ಆಯೋಜನೆಗೆ ಹೆಚ್ಚುವರಿಯಾಗಿ ತಗುಲುವ 2 ರಿಂದ 6 ಬಿಲಿಯನ್ ಡಾಲರ್ ವೆಚ್ಚವನ್ನು ಭರಿಸುವವರು ಯಾರು ಎನ್ನುವ ವಿಚಾರವಾಗಿ ಟೋಕಿಯೋ ಒಲಿಂಪಿಕ್ಸ್ ಆಯೋಜಕರು ಹಾಗೂ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ಕಿತ್ತಾಟ ಆರಂಭವಾಗಿದೆ ಎಂದು ವರದಿಯಾಗಿತ್ತು.