* ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಪಟುಗಳ ಪ್ರಧಾನಿ ನರೇಂದ್ರ ಮೋದಿ ಮಾತು
* ಆಗಸ್ಟ್ 24ರಿಂದ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಆರಂಭ
* ಈ ಬಾರಿ ಭಾರತ ಒಟ್ಟು 9 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದು, ದಾಖಲೆಯ 54 ಕ್ರೀಡಾಪಟುಗಳನ್ನು ಕಳುಹಿಸುತ್ತಿದೆ.
ನವದೆಹಲಿ(ಆ.16): ಟೋಕಿಯೋ ಪ್ಯಾರಾಲಿಂಪಿಕ್ಸ್‌ಗೆ ತೆರಳಲಿರುವ ಭಾರತೀಯ ಕ್ರೀಡಾಪಟುಗಳ ಜೊತೆ ಮಂಗಳವಾರ(ಆ.17) ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ವಿಡಿಯೋ ಸಂವಾದ ನಡೆಸಿ, ಅವರಿಗೆ ಬೀಳ್ಕೊಡುಗೆ ನೀಡಲಿದ್ದಾರೆ.
ಆಗಸ್ಟ್ 24ರಿಂದ ಪ್ಯಾರಾಲಿಂಪಿಕ್ಸ್ ಆರಂಭಗೊಳ್ಳಲಿದ್ದು, ಆಗಸ್ಟ್ 27ರಂದು ಆರ್ಚರಿ ಸ್ಪರ್ಧೆಯೊಂದಿಗೆ ಭಾರತ ತನ್ನ ಅಭಿಯಾನ ಆರಂಭಿಸಲಿದೆ. ಈ ಬಾರಿ ಭಾರತ ಒಟ್ಟು 9 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದು, ದಾಖಲೆಯ 54 ಕ್ರೀಡಾಪಟುಗಳನ್ನು ಕಳುಹಿಸುತ್ತಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಆ ಕ್ರೀಡಾಪಟುಗಳನ್ನೂ ಈ ವರ್ಷದ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಇತ್ತೀಚೆಗಷ್ಟೇ ತಿಳಿಸಿದ್ದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ರಂಗು ಹೆಚ್ಚಿಸಿದ ಟೋಕಿಯೋ ಒಲಿಂಪಿಕ್ಸ್ ಸಾಧಕರು..!
9 ವಿವಿಧ ಸ್ಪರ್ಧೆಗಳಲ್ಲಿ ಅಥ್ಲೀಟ್‌ಗಳು ಪ್ಯಾರಾಲಿಂಪಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದಾಖಲೆಯ ಸಂಖ್ಯೆಯಲ್ಲಿ ಈ ಬಾರಿ ಭಾರತೀಯ ಸ್ಪರ್ಧಿಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಪ್ರಧಾನಿಯವರಿಂದ ಬೀಳ್ಕೊಡುಗೆ ಸಮಾರಂಭದ ವೇಳೆ ಕೇಂದ್ರ ಕ್ರೀಡಾಸಚಿವ ಅನುರಾಗ್ ಠಾಕೂರ್ ಕೂಡಾ ಹಾಜರಿರಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿಂದಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಎರಡು ಚಿನ್ನ, ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದ ಸಾಧನೆ ಮಾಡಿದೆ. ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಸೇರಿಸಲಾಗಿದ್ದು, ಭಾರತದ ಏಳು ಮಂದಿ ಬ್ಯಾಡ್ಮಿಂಟನ್ ಪಟುಗಳು ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಭಾರತದಲ್ಲಿ ಡಿಡಿ ಸ್ಪೋರ್ಟ್ಸ್ ಹಾಗೂ ಯೂರೋ ಸ್ಪೋರ್ಟ್ಸ್ ಟೋಕಿಯೋ ಪ್ಯಾರಾಲಿಂಪಿಕ್ಸ್ ನೇರ ಪ್ರಸಾರ ಮಾಡಲಿದೆ.