
ಟೋಕಿಯೋ(ಆ.30): ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತೀಯ ಪ್ಯಾರಾಥ್ಲೀಟ್‌ಗಳ ಪದಕ ಬೇಟೆ ಭರ್ಜರಿಯಾಗಿಯೇ ಮುಂದುವರೆದಿದೆ. ಇದೀಗ F64 ವಿಭಾಗದಲ್ಲಿ ವಿಶ್ವದ ನಂ.1 ಶ್ರೇಯಾಂಕಿತ ಜಾವೆಲಿನ್ ಥ್ರೋ ಪಟು ಸುಮಿತ್ ಆಂಟಿಲ್ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ ಒಂದೇ ದಿನ ಭಾರತ ಎರಡನೇ ಚಿನ್ನದ ಪದಕ ಜಯಿಸಿದೆ.
ಫೈನಲ್ ಸ್ಪರ್ಧೆಯಲ್ಲಿ ಮೊದಲ ಪ್ರಯತ್ನದಲ್ಲೇ 66.95 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ವಿಶ್ವದಾಖಲೆ ನಿರ್ಮಿಸಿದ ಆಂಟಿಲ್, ಬಳಿಕ ಎರಡನೇ ಪ್ರಯತ್ನದಲ್ಲಿ 68.08 ಮೀಟರ್ ತಮ್ಮದೇ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡರು. ಇನ್ನು 5ನೇ ಪ್ರಯತ್ನದಲ್ಲಿ 68.55 ಮೀಟರ್ ದೂರ ಎಸೆದು ಮೂರನೇ ಬಾರಿಗೆ ವಿಶ್ವದಾಖಲೆ ನಿರ್ಮಿಸಿ ಚಿನ್ನದ ಪದಕ ಖಚಿತ ಪಡಿಕೊಂಡರು.
ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ
ಕೆಲವು ದಿನಗಳ ಹಿಂದಷ್ಟೇ ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ನೀರಜ್ ಚೋಪ್ರಾ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದರು. ಇದೀಗ ಸುಮಿತ್ ಟೋಕಿಯೋ ಪ್ಯಾರಾಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.
ಒಂದೇ ದಿನ 5 ಪದಕ ಜಯಿಸಿದ ಭಾರತ: ಹೌದು, ಶೂಟಿಂಗ್‌ನಲ್ಲಿ ಅವನಿ ಲೆಖಾರಾ ಚಿನ್ನದ ಪದಕ ಗೆಲ್ಲುವ ಮೂಲಕ ಸೋಮವಾರ ಉತ್ತಮ ಆರಂಭ ಒದಗಿಸಿಕೊಟ್ಟರು. ಬಳಿಕ ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಕಥುನಿಯಾ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಇದರ ಬೆನ್ನಲ್ಲೇ F-46 ಜಾವೆಲಿನ್ ಥ್ರೋ ಫೈನಲ್‌ನಲ್ಲಿ ದೇವೇಂದ್ರ ಝಝಾರಿಯಾ ಬೆಳ್ಳಿ ಪದಕ ಜಯಿಸಿದರೆ, ಇದೇ ವಿಭಾಗದಲ್ಲಿ ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಇದೀಗ ಸುಮಿತ್ ಆಂಟಿಲ್ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಜಯಿಸಿದ ಸಾಧನೆ ಮಾಡಿದ್ದಾರೆ.