
ದುಬೈ: 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆಯು ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಪೊಮಾನಾ ನಗರದಲ್ಲಿ ನಡೆಯಲಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಹೇಳಿದೆ.
ಬರೋಬ್ಬರಿ 128 ವರ್ಷಗಳ ಬಳಿಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರಳುತ್ತಿದ್ದು, ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ತಲಾ 6 ತಂಡಗಳನ್ನು ಆಡಿಸಲಾಗುತ್ತದೆ. ಪೊಮಾನ ನಗರ ಲಾಸ್ ಏಂಜಲೀಸ್‌ನಿಂದ 48 ಕಿ.ಮೀ ದೂರದಲ್ಲಿದೆ. ಸದ್ಯ ಅಲ್ಲಿ ಕ್ರಿಕೆಟ್ ಕ್ರೀಡಾಂಗಣವಿಲ್ಲ. ಸಾರ್ವಜನಿಕ ಸಮ್ಮೇಳನ, ವ್ಯಾಪಾರ ವಹಿವಾಟು, ಶೈಕ್ಷಣಿಕ ಅಥವಾ ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ಥಳವಿದೆ. ಅದೇ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸಿ ಕ್ರಿಕೆಟ್ ನಡೆಸಲಾಗುತ್ತದೆ.
ಈ ನಿರ್ಧಾರವನ್ನು ಐಸಿಸಿ ಅಧ್ಯಕ್ಷ ಜಯ್ ಶಾ ಸ್ವಾಗತಿಸಿದ್ದಾರೆ. ‘ಕ್ರಿಕೆಟ್‌ಅನ್ನು ಒಲಿಂಪಿಕ್ಸ್‌ಗೆ ಸೇರಿಸಿಕೊಳ್ಳುವ ಮೂಲಕ ಕ್ರೀಡೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸಲಿದ್ದೇವೆ. ಕ್ರಿಕೆಟ್‌ಗೆ ಮತ್ತಷ್ಟು ಪ್ರೇಕ್ಷಕರನ್ನು ಸೃಷ್ಟಿಸುತ್ತೇವೆ’ ಎಂದಿದ್ದಾರೆ.
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಜೊತೆಗೆ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸರ್‌ಗಳು) ಮತ್ತು ಸ್ಕ್ವ್ಯಾಷ್ ಸೇರ್ಪಡೆಯಾಗಿದೆ.
1900ನಲ್ಲಿ ನಡೆದ ಒಲಿಂಪಿಕ್ಸ್:
1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಒಮ್ಮೆ ಮಾತ್ರ ಕ್ರಿಕೆಟ್ ಕ್ರೀಡಾಕೂಟ ಆಯೋಜನೆಗೊಂಡಿತ್ತು. ಆ ಒಲಿಂಪಿಕ್ಸ್‌ನಲ್ಲಿ ಗ್ರೇಟ್ ಬ್ರಿಟನ್ ಹಾಗೂ ಫ್ರಾನ್ಸ್ ತಂಡಗಳು ಪಾಲ್ಗೊಂಡಿದ್ದವು. ಕೇವಲ ಎರಡು ತಂಡಗಳು ಪಾಲ್ಗೊಂಡಿದ್ದ ಈ ಒಲಿಂಪಿಕ್ಸ್ ನಲ್ಲಿ ಗ್ರೇಟ್ ಬ್ರಿಟನ್ ಚಿನ್ನದ ಪದಕ ಜಯಿಸಿದರೆ, ಫ್ರಾನ್ಸ್ ಬೆಳ್ಳಿ ಪದಕ ಜಯಿಸಿತ್ತು.
2030 ಕಾಮನ್ವೆಲ್ತ್ ಗೇಮ್ಸ್ ಆತಿಥ್ಯ ರೇಸ್‌ನಲ್ಲಿ ಭಾರತ ಜತೆ ಕೆನಡಾ, ನೈಜೀರಿಯಾ
ಲಂಡನ್: 2030ರ ಕಾಮನ್‌ವೆಲ್ತ್ ಗೇಮ್ಸ್ ಆತಿಥ್ಯಕ್ಕೆ ಬಿಡ್ ಸಲ್ಲಿಸಿರುವ ಭಾರತ, ಅದಕ್ಕಾಗಿ ಕೆನಡಾ ಹಾಗೂ ನೈಜೀರಿಯಾ ಜೊತೆ ಪೈಪೋಟಿಗಿಳಿದಿದೆ. ಇತ್ತೀಚೆಗಷ್ಟೇ ಕ್ರೀಡಾ ಸಚಿವಾಲಯವು 2030ರ ಗೇಮ್ಸ್‌ಗೆ ಬಿಡ್ ಸಲ್ಲಿಸಿದ್ದಾಗಿ ತಿಳಿಸಿತ್ತು. ಬುಧವಾರ ಆತಿಥ್ಯ ರೇಸ್‌ನಲ್ಲಿರುವ ದೇಶಗಳ ಬಗ್ಗೆ ಕಾಮನ್‌ವೆಲ್ತ್ ಸ್ಪೋರ್ಟ್ ಮಾಹಿತಿ ನೀಡಿದ್ದು, ಕೆನಡಾ, ನೈಜೀರಿಯಾ ಹಾಗೂ ಇತರ 2 ದೇಶಗಳು ಗೇಮ್ಸ್ ಆಯೋಜನೆಗೆ ಮುಂದೆ ಬಂದಿವೆ ಎಂದು ತಿಳಿಸಿದೆ. ಭಾರತ ಈ ಹಿಂದೆ ಗೇಮ್ಸ್‌ಗೆ ಆತಿಥ್ಯ ವಹಿಸಿದ್ದು 2010ರಲ್ಲಿ. ಆದರೆ ಗೇಮ್ಸ್‌ನ ವ್ಯಾಪಕ ಭ್ರಷ್ಟಾಚಾರ ಕಾರಣಕ್ಕೆ ಸುದ್ದಿಯಾಗಿತ್ತು.
ಸಂಜು ಸ್ಯಾಮ್ಸನ್‌ಗೆ ಮತ್ತೆ ಗಾಯದ ಭೀತಿ!
ನವದೆಹಲಿ: ಕೈ ಬೆರಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇತ್ತೀಚೆಗಷ್ಟೇ ಐಪಿಎಲ್‌ಗೆ ಮರಳಿದ್ದ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮತ್ತೆ ಗಾಯದ ಭೀತಿಗೆ ಒಳಗಾಗಿದ್ದಾರೆ.
ಬುಧವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯದಲ್ಲಿ ಸ್ಯಾಮ್ಸನ್‌ರ ಹೊಟ್ಟೆ ಭಾಗಕ್ಕೆ ಚೆಂಡು ಬಡಿದು, ತೀವ್ರ ನೋವಿನಿಂದ ಚೀರಾಡಿದರು. ವಿಪ್ರಜ್ ನಿಗಮ್ ಎಸೆದ ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ ಚೆಂಡು ಸ್ಯಾಮ್ಸನ್‌ರ ಹೊಟ್ಟೆ ಭಾಗಕ್ಕೆ ಬಡಿಯಿತು. ಕೂಡಲೇ ವೈದ್ಯಕೀಯ ಸಿಬ್ಬಂದಿ ಮೈದಾನಕ್ಕೆ ಆಗಮಿಸಿ ಸ್ಯಾಮ್ಸನ್‌ರನ್ನು ಉಪಚರಿಸಿದರು. ಆದರೆ ನೋವು ಹೆಚ್ಚಿದ್ದ ಕಾರಣ ಅವರಿಗೆ ಬ್ಯಾಟಿಂಗ್ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಅವರು ‘ರಿಟೈರ್ಡ್ ಹರ್ಟ್’ ಆಗಿ ಮೈದಾನ ತೊರೆದರು.
ಐಪಿಎಲ್‌ಗೂ ಮುನ್ನ ಗಾಯದಿಂದ ಬಳಲುತ್ತಿದ್ದ ಸ್ಯಾಮ್ಸನ್, ಟೂರ್ನಿಯ ಆರಂಭಿಕ 3 ಪಂದ್ಯಗಳಲ್ಲಿ ಇಂಪ್ಯಾಕ್ಟ್ ಆಟಗಾರನಾಗಿ ಕಣಕ್ಕಿಳಿದು ಕೇವಲ ಬ್ಯಾಟ್ ಮಾಡಿದ್ದರು. ಅವರು ವಿಕೆಟ್ ಕೀಪರ್ ಕೂಡಾ ಆಗಿರಲಿಲ್ಲ. ಆ 3 ಪಂದ್ಯಗಳಲ್ಲಿ ರಿಯಾನ್ ಪರಾಗ್ ರಾಜಸ್ಥಾನ ತಂಡವನ್ನು ಮುನ್ನಡೆಸಿದ್ದರು. 4ನೇ ಪಂದ್ಯದಿಂದ ಸ್ಯಾಮ್ಸನ್, ಪೂರ್ಣ ಪ್ರಮಾಣದಲ್ಲಿ ಆಡಿದ್ದರು. ಆದರೆ ಸಂಜು ಮತ್ತೆ ಗಾಯಗೊಂಡಿದ್ದು ತಂಡಕ್ಕೆ ಹಿನ್ನಡೆಯುಂಟಾಗಿದೆ. ಅವರ ಗಾಯದ ಪ್ರಮಾಣ ಎಷ್ಟಿದೆ, ಮುಂದಿನ ಪಂದ್ಯಗಳಿಗೆ ಲಭ್ಯವಿದ್ದಾರೊ ಎಂಬುದರ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.