ಟೋಕಿಯೋ ಪ್ಯಾರಾಲಿಂಪಿಕ್ಸ್‌ ಆರಂಭಕ್ಕೆ ಕ್ಷಣಗಣನೆ

By Kannadaprabha NewsFirst Published Aug 23, 2021, 8:23 AM IST
Highlights

* ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟ ಆಗಸ್ಟ್‌ 24ರಿಂದ ಆರಂಭ

* ಕೊರೋನಾ ಭೀತಿಯ ನಡುವೆಯೇ ಟೋಕಿಯೋ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಕ್ಷಣಗಣನೆ

* ಈ ಬಾರಿ ಸುಮಾರು 163 ರಾಷ್ಟ್ರಗಳ 4500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ

ಟೋಕಿಯೋ(ಆ.23): 2020ರ ಪ್ಯಾರಾಲಿಂಪಿಕ್ಸ್‌ ಆರಂಭಕ್ಕೆ ಕೇವಲ 24 ತಾಸು ಬಾಕಿ ಇದೆ. ಕೋವಿಡ್‌ನಿಂದಾಗಿ ಒಂದು ವರ್ಷ ಮುಂದೂಡಿಕೆಯಾಗಿದ್ದ ಕ್ರೀಡಾಕೂಟಕ್ಕೆ ಮಂಗಳವಾರ ಚಾಲನೆ ದೊರೆಯಲಿದೆ.

ಕೊರೋನಾ ಸೋಂಕಿನ ಆತಂಕದ ನಡುವೆಯೋ ಯಶಸ್ವಿಯಾಗಿ ಒಲಿಂಪಿಕ್ಸ್‌ ಕ್ರೀಡಾಕೂಟವನ್ನು ಆಯೋಜಿಸಿದ ಜಪಾನ್‌ ಈಗ ಪ್ಯಾರಾಲಿಂಪಿಕ್ಸ್‌ ಆಯೋಜನೆಗೆ ಸಜ್ಜಾಗಿದೆ. ಇದು 16ನೇ ಪ್ಯಾರಾಲಿಂಪಿಕ್ಸ್‌ ಆಗಿದ್ದು, ಟೋಕಿಯೋದಲ್ಲಿ 2ನೇ ಬಾರಿಗೆ ಕ್ರೀಡಾಕೂಟ ನಡೆಯಲಿದೆ. 1964ರಲ್ಲಿ ಮೊದಲ ಬಾರಿಗೆ ಕ್ರೀಡಾಕೂಟವನ್ನು ಜಪಾನ್‌ ಆಯೋಜಿಸಿತ್ತು. ಈ ಬಾರಿ ಸುಮಾರು 163 ರಾಷ್ಟ್ರಗಳ 4500ಕ್ಕೂ ಹೆಚ್ಚು ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

ಒಲಿಂಪಿಕ್‌ ಕ್ರೀಡಾಕೂಟದ ವೇಳೆ ಇದ್ದ ಕೊರೋನಾ ಪ್ರಕರಣಗಳಿಗಿಂತಲೂ ಹೆಚ್ಚು ಪ್ರಕರಣಗಳು ಈಗ ಜಪಾನ್‌ನಲ್ಲಿ ಪತ್ತೆಯಾಗುತ್ತಿವೆ. ಹೀಗಾಗಿ ಆತಂಕ ಹೆಚ್ಚಿದೆ. 4 ದಿನಗಳ ಹಿಂದೆ ಜಪಾನ್‌ನಲ್ಲಿ 25,000 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿರುವುದು ಆಯೋಜಕರಲ್ಲೂ ಆತಂಕ ಮೂಡಿಸಿದೆ. ಆದರೂ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್‌ ಸಂಸ್ಥೆ (ಐಪಿಸಿ) ಶತಾಯಗತಾಯ ಕ್ರೀಡಾಕೂಟವನ್ನು ನಡೆಸಲು ಮುಂದಾಗಿದೆ.

ಟೋಕಿಯೋಗೆ ಹಾರಿದ ಭಾರತೀಯ ಪ್ಯಾರಾಲಿಂಪಿಕ್ಸ್‌ ತಂಡ

ಕ್ರೀಡಾಕೂಟ ಆರಂಭಕ್ಕೆ ಕೇವಲ 2 ದಿನ ಬಾಕಿ ಇದ್ದಾಗ ಕ್ರೀಡಾಪಟುಗಳಿಗೆ ಕ್ರೀಡಾ ಗ್ರಾಮಕ್ಕೆ ಪ್ರವೇಶ ನೀಡಲಾಗಿದೆ. ಅಲ್ಲದೇ ತಮ್ಮ ಸ್ಪರ್ಧೆ ಮುಗಿದ 48 ಗಂಟೆಗಳಲ್ಲಿ ಜಪಾನ್‌ನಿಂದ ಹೊರಡಬೇಕು ಎಂದು ಷರತ್ತು ವಿಧಿಸಲಾಗಿದೆ.

ಕ್ರೀಡಾಪಟುಗಳಿಗೆ ಪ್ರತಿದಿನ ಕೋವಿಡ್‌ ಪರೀಕ್ಷೆ ನಡೆಸುವಾಗಿ ಆಯೋಜಕರು ತಿಳಿಸಿದ್ದಾರೆ. ಒಲಿಂಪಿಕ್ಸ್‌ ರೀತಿಯಲ್ಲೇ ಪ್ಯಾರಾಲಿಂಪಿಕ್ಸ್‌ಗೂ ಪ್ರೇಕ್ಷಕರನ್ನು ಕ್ರೀಡಾಂಗಣಗಳಿಗೆ ಬಿಡದಿರಲು ಆಯೋಜಕರು ನಿರ್ಧರಿಸಿದ್ದಾರೆ. ಆದರೆ ಟೀವಿ, ಇಂಟರ್‌ನೆಟ್‌ ಮೂಲಕ 400 ಕೋಟಿಗೂ ಹೆಚ್ಚು ಜನರಿಗೆ ತಲುಪುವುದಾಗಿ ಐಪಿಸಿ ಮುಖ್ಯಸ್ಥ ಆ್ಯಂಡ್ರೂ ಪಾರ್ಸನ್ಸ್‌ ಹೇಳಿದ್ದಾರೆ.

ಟೋಕಿಯೋ ಪ್ಯಾರಾಲಿಂಪಿಕ್ಸ್‌ ಅಂಕಿ-ಅಂಶ

163 ದೇಶ: ಟೋಕಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 160 ರಾಷ್ಟ್ರಗಳ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ.

4,500 ಸ್ಪರ್ಧಿಗಳು: ಈ ಬಾರಿ ಕ್ರೀಡಾಕೂಟದಲ್ಲಿ ಸುಮಾರು 4500ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಪರ್ಧಿಸಲಿದ್ದಾರೆ.

22 ಕ್ರೀಡೆಗಳು: ಪ್ಯಾರಾಲಿಂಪಿಕ್ಸ್‌ನಲ್ಲಿ 22 ಕ್ರೀಡೆಗಳ 540 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.

02 ಕ್ರೀಡೆ: ಈ ಬಾರಿ ಹೊಸದಾಗಿ ಬ್ಯಾಡ್ಮಿಂಟನ್‌ ಹಾಗೂ ಟೆಕ್ವಾಂಡೋ ಕ್ರೀಡೆಗಳನ್ನು ಸೇರ್ಪಡೆಗೊಳಿಸಲಾಗಿದೆ.

19 ಕ್ರೀಡಾಂಗಣ: ಸ್ಪರ್ಧೆಗಳನ್ನು ನಡೆಸಲು ಒಟ್ಟು 19 ಕ್ರೀಡಾಂಗಣಗಳನ್ನು ಬಳಕೆ ಮಾಡಲಾಗುತ್ತದೆ.

260 ಸ್ಪರ್ಧಿಗಳು: ಆತಿಥೇಯ ಜಪಾನ್‌ ಅತಿಹೆಚ್ಚು ಅಂದರೆ 260 ಕ್ರೀಡಾಪಟುಗಳನ್ನು ಕಣಕ್ಕಿಳಿಸಲಿದೆ.
 

click me!