ವಾಟ್ಸಾಪ್‌ನಲ್ಲಿ ಹಣ ಕಳಿಸ್ತೀರಾ? ಅದರ ಮಾಹಿತಿಯೂ ಶೇರ್‌ ಆಗುತ್ತೆ!

By Suvarna Web DeskFirst Published Apr 11, 2018, 11:12 AM IST
Highlights

ಶೀಘ್ರದಲ್ಲೇ ಹಣ ವರ್ಗಾವಣೆ ಸೇವೆ ಆರಂಭಿಸಲಿರುವ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್‌, ಈ ಸೇವೆಯನ್ನು ಬಳಸುವ ಜನರ ಖಾಸಗಿ ಮಾಹಿತಿಯನ್ನು ಫೇಸ್‌ಬುಕ್‌ ಸೇರಿದಂತೆ ಹಲವು ಸಂಸ್ಥೆಗಳ ಜೊತೆ ವಿನಿಮಯ ಮಾಡಿಕೊಳ್ಳುವುದಾಗಿ ತಿಳಿಸಿದೆ.

ನವದೆಹಲಿ/ ಬೆಂಗಳೂರು :  ಶೀಘ್ರದಲ್ಲೇ ಹಣ ವರ್ಗಾವಣೆ ಸೇವೆ ಆರಂಭಿಸಲಿರುವ ಜನಪ್ರಿಯ ಸಾಮಾಜಿಕ ಜಾಲತಾಣ ವಾಟ್ಸಾಪ್‌, ಈ ಸೇವೆಯನ್ನು ಬಳಸುವ ಜನರ ಖಾಸಗಿ ಮಾಹಿತಿಯನ್ನು ಫೇಸ್‌ಬುಕ್‌ ಸೇರಿದಂತೆ ಹಲವು ಸಂಸ್ಥೆಗಳ ಜೊತೆ ವಿನಿಮಯ ಮಾಡಿಕೊಳ್ಳುವುದಾಗಿ ತಿಳಿಸಿದೆ. ಅದರೊಂದಿಗೆ, ಜನರ ಖಾಸಗಿ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡ ಹಗರಣದಲ್ಲಿ ಫೇಸ್‌ಬುಕ್‌ ಸಿಲುಕಿರುವಾಗಲೇ ಆ ಕಂಪನಿಯ ಒಡೆತನದಲ್ಲಿರುವ ವಾಟ್ಸಾಪ್‌ ಕೂಡ ಅಂತಹುದೇ ವಿವಾದಕ್ಕೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ.

ಯೂನಿಫೈಡ್‌ ಪೇಮೆಂಟ್‌ ಇಂಟರ್‌ಫೇಸ್‌ (ಯುಪಿಐ) ವ್ಯವಸ್ಥೆಯಡಿ ವಾಟ್ಸಾಪ್‌ ಕಂಪನಿ ಫೆಬ್ರವರಿಯಿಂದ ಪ್ರಾಯೋಗಿಕವಾಗಿ ಹಣ ವರ್ಗಾವಣೆ ಸೇವೆ ಆರಂಭಿಸಿದೆ. ಆಯ್ದ ಕೆಲ ಗ್ರಾಹಕರಿಗೆ ಈಗಾಗಲೇ ಈ ಸೇವೆ ಲಭ್ಯವಿದೆ. ಶೀಘ್ರದಲ್ಲೇ ಈ ಸೇವೆಯನ್ನು ಪೂರ್ಣಪ್ರಮಾಣದಲ್ಲಿ ನೀಡಲು ವಾಟ್ಸಾಪ್‌ ತಯಾರಿ ಮಾಡಿಕೊಂಡಿದೆ. ಅದರ ಬೆನ್ನಲ್ಲೇ ಈ ಸೇವೆ ಬಳಸುವ ಗ್ರಾಹಕರ ಮೊಬೈಲ್‌ ನಂಬರ್‌, ನೋಂದಣಿ ಮಾಹಿತಿ, ಮೊಬೈಲ್‌ ಹ್ಯಾಂಡ್‌ಸೆಟ್‌ನ ಮಾಹಿತಿ, ವರ್ಚುವಲ್‌ ಪೇಮೆಂಟ್‌ ಅಡ್ರೆಸ್‌ಗಳು, ಹಣ ಕಳುಹಿಸುವವರ ಯುಪಿಐ ಪಿನ್‌, ಕಳುಹಿಸಿದ ಹಣದ ಮೊತ್ತ ಇತ್ಯಾದಿ ಮಾಹಿತಿಯನ್ನು ಮೂರನೇ ಕಂಪನಿಗಳ ಜೊತೆ ಹಂಚಿಕೊಳ್ಳಲಾಗುತ್ತದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ವಿಶೇಷವೆಂದರೆ, ವಾಟ್ಸಾಪ್‌ನ ‘ಖಾಸಗಿ ನೀತಿ’ಯಲ್ಲೇ ಬಳಕೆದಾರರಿಗೆ ಈ ಮಾಹಿತಿ ನೀಡಲಾಗಿದೆ. ‘ಹಣ ವರ್ಗಾವಣೆ ಸೇವೆಯನ್ನು ಸರಿಯಾದ ರೀತಿಯಲ್ಲಿ ಒದಗಿಸಲು ನಾವು ಮೂರನೇ ವ್ಯಕ್ತಿಗಳ ಜೊತೆ ಮಾಹಿತಿ ಹಂಚಿಕೊಳ್ಳುತ್ತೇವೆ. ಹಣ ಕಳುಹಿಸಲು ಪೇಮೆಂಟ್‌ ಸವೀರ್‍ಸ್‌ ಪ್ರೊವೈಡರ್‌ಗಳಿಗೆ, ಹಿಂದಿನ ವ್ಯವಹಾರದ ದಾಖಲೆಗಳನ್ನು ನಿರ್ವಹಿಸಲು, ಗ್ರಾಹಕರ ಕುಂದುಕೊರತೆಗಳನ್ನು ಬಗೆಹರಿಸಲು, ನಮ್ಮ ಸೇವೆಯನ್ನು ಸುರಕ್ಷಿತವಾಗಿ ಹಾಗೂ ಸುಭದ್ರವಾಗಿ ಇರಿಸಿಕೊಳ್ಳಲು ಫೇಸ್‌ಬುಕ್‌ ಹಾಗೂ ಇತರ ಕಂಪನಿಗಳಿಗೆ ನಾವು ಬಳಕೆದಾರರ ಮಾಹಿತಿ ನೀಡಬೇಕಾಗುತ್ತದೆ’ ಎಂದು ವಾಟ್ಸಾಪ್‌ನ ಖಾಸಗಿ ನೀತಿಯ ಒಂದು ಕಲಂನಲ್ಲಿ ಹೇಳಲಾಗಿದೆ.

ಸದ್ಯ ಮೊಬೈಲ್‌ ಫೋನ್‌ನಲ್ಲಿ ಹಣ ವರ್ಗಾವಣೆ ಸೇವೆ ನೀಡುತ್ತಿರುವ ಪೇಟಿಎಂ ಹಾಗೂ ಫ್ಲಿಪ್‌ಕಾರ್ಟ್‌ನ ಫೋನ್‌ಪೆ ಕೂಡ ತಾವು ಗ್ರಾಹಕರ ದತ್ತಾಂಶಗಳನ್ನು ಮೂರನೇ ವ್ಯಕ್ತಿಗಳ ಜೊತೆ ಹಂಚಿಕೊಳ್ಳಬಹುದು ಎಂದು ತಮ್ಮ ಖಾಸಗಿ ನೀತಿಯಲ್ಲಿ ಹೇಳಿಕೊಂಡಿವೆ.

click me!