ಫಾರ್ವರ್ಡ್ ಮೆಸೇಜ್‌ಗೂ ವಾಟ್ಸಾಪ್ ಕಡಿವಾಣ| ಗ್ರೂಪ್ ಅಡ್ಮಿನ್‌ಗಳಿಗೆ ‘ಫಾರ್ವರ್ಡ್ ಮೆಸೇಜ್’ ಬ್ಲಾಕ್ ಮಾಡುವ ಅಧಿಕಾರ
ಮುಂಬೈ[ಏ.08]: ಬಳಕೆದಾರರನ್ನು ಅವರ ಅನುಮತಿಯಿಲ್ಲದೆ ಗ್ರೂಪ್‌ಗಳಿಗೆ ಸೇರಿಸುವುದನ್ನು ತಡೆಯುವ ವ್ಯವಸ್ಥೆಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದ ವಾಟ್ಸ್‌ಆ್ಯಪ್, ಇದೀಗ ಫಾರ್ವರ್ಡೆಡ್ ಮೆಸೇಜ್‌ಗಳನ್ನು ನಿಯಂತ್ರಿಸಲು ಇನ್ನೊಂದು ಹೊಸ ಫೀಚರ್ ಸಿದ್ಧಪಡಿಸಿದೆ. ಇದು ಇನ್ನೂ ಪ್ರಯೋಗದ ಹಂತದಲ್ಲಿದ್ದು, ಸದ್ಯಕ್ಕೆ ಎಲ್ಲ ಬಳಕೆದಾರರಿಗೆ ಸಿಗುತ್ತಿಲ್ಲ.
ಗ್ರೂಪ್ ಅಡ್ಮಿನ್‌ಗಳು ತಮ್ಮ ಗ್ರೂಪ್‌ನಲ್ಲಿ ಸದಸ್ಯರು ಫಾರ್ವರ್ಡೆಡ್ ಮೆಸೇಜ್‌ಗಳನ್ನು ಪೋಸ್ಟ್ ಮಾಡುವುದನ್ನು ತಡೆಯುವ ವ್ಯವಸ್ಥೆ ಇದರಲ್ಲಿದೆ. ಗ್ರೂಪ್ ಅಡ್ಮಿನ್‌ಗಳಿಗೆ ಮಾತ್ರ ಈ ಅಧಿಕಾರ ಇರಲಿದ್ದು, ಅವರು ‘ಫ್ರೀಕ್ವೆಂಟ್ಲಿ ಫಾರ್ವರ್ಡೆಡ್’ ಆಯ್ಕೆಯನ್ನು ಎನೇಬಲ್ ಮಾಡಿಕೊಂಡರೆ ಆ ಗ್ರೂಪ್‌ನಲ್ಲಿ ಯಾವುದೇ ಸದಸ್ಯರು ನಾಲ್ಕಕ್ಕಿಂತ ಹೆಚ್ಚು ಬಾರಿ ಫಾರ್ವರ್ಡ್ ಆಗಿರುವ ಸಂದೇಶಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುವುದಿಲ್ಲ. ಅಂತಹ ಸಂದೇಶವನ್ನು ಪೋಸ್ಟ್ ಮಾಡಲು ಸದಸ್ಯರು ಯತ್ನಿಸಿದರೆ ‘ಫ್ರೀಕ್ವೆಂಟ್ಲಿ ಫಾರ್ವರ್ಡೆಡ್’ ಎಂಬ ಲೇಬಲ್‌ನೊಂದಿಗೆ ಅಡ್ಮಿನ್‌ಗಳಿಗೆ ಮಾತ್ರ ಸಂದೇಶ ರವಾನೆಯಾಗುತ್ತದೆ. ಗ್ರೂಪ್‌ನ ಇತರ ಸದಸ್ಯರಿಗೆ ಆ ಸಂದೇಶ ಕಾಣಿಸುವುದಿಲ್ಲ.
ಈ ಆಯ್ಕೆಯ ಬೀಟಾ ವರ್ಷನ್ ಮಾತ್ರ ಈಗ ಬಿಡುಗಡೆಯಾಗಿದ್ದು, ಸೀಮಿತ ಸಂಖ್ಯೆಯ ಸದಸ್ಯರಿಗೆ ಮಾತ್ರ ಇದನ್ನು ನೀಡಿ ಪರೀಕ್ಷೆ ನಡೆಸಲಾಗುತ್ತಿದೆ. ‘ಫಾರ್ವರ್ಡಿಂಗ್ ಇಸ್ಫೋ’ ಎಂಬ ಇನ್ನೊಂದು ವ್ಯವಸ್ಥೆಯನ್ನೂ ವಾಟ್ಸ್‌ಆ್ಯಪ್ ರೂಪಿಸುತ್ತಿದ್ದು, ಅದರ ಬಗ್ಗೆ ಹೆಚ್ಚಿನ ವಿವರ ದೊರೆತಿಲ್ಲ.