ಜನವರಿ 1 ರಿಂದ ಸಿಮ್ ಬೈಂಡಿಂಗ್ ನಿಯಮ ಜಾರಿ: ನೋಂದಾಯಿತ ಸಿಮ್ ಇಲ್ಲದಿದ್ದರೆ ವಾಟ್ಸಾಪ್, ಟೆಲಿಗ್ರಾಂ ಬಂದ್

Published : Oct 22, 2026, 10:33 PM IST
Sim Card

ಸಾರಾಂಶ

ಸೈಬರ್ ವಂಚನೆ ತಡೆಯಲು ಕೇಂದ್ರ ಸರ್ಕಾರವು ವಾಟ್ಸಾಪ್ ಮತ್ತು ಟೆಲಿಗ್ರಾಂ ಬಳಕೆದಾರರಿಗೆ 'ಸಿಮ್ ಬೈಂಡಿಂಗ್' ನಿಯಮ ಜಾರಿಗೆ ತರುತ್ತಿದೆ. ಇದರ ಅನ್ವಯ, ತಡೆರಹಿತ ಸೇವೆ ಪಡೆಯಲು ನೋಂದಾಯಿತ ಕೆವೈಸಿ ಸಿಮ್ ಕಾರ್ಡ್ ಅನ್ನು ಅದೇ ಮೊಬೈಲ್‌ನಲ್ಲಿ ಇರಿಸಿಕೊಳ್ಳುವುದು ಕಡ್ಡಾಯವಾಗಲಿದೆ.

ನವದೆಹಲಿ (ಅ.22): ಆನ್‌ಲೈನ್ ಸೈಬರ್ ವಂಚನೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರವು 'ಸಿಮ್ ಬೈಂಡಿಂಗ್' (SIM Binding) ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಸರ್ಕಾರದ ಈ ನೂತನ ಮಾರ್ಗದರ್ಶಿ ಸೂತ್ರಗಳ ಪ್ರಕಾರ, ವಾಟ್ಸಾಪ್ (WhatsApp) ಹಾಗೂ ಟೆಲಿಗ್ರಾಂ (Telegram) ಬಳಕೆದಾರರು ತಡೆರಹಿತ ಸೇವೆ ಪಡೆಯಲು ತಮ್ಮ ಖಾತೆಗೆ ನೋಂದಾಯಿತವಾಗಿರುವ ಕೆವೈಸಿ (KYC) ಸಿಮ್ ಕಾರ್ಡ್‌ಗಳನ್ನು ಕಡ್ಡಾಯವಾಗಿ ಅದೇ ಮೊಬೈಲ್ ಫೋನ್‌ಗಳಲ್ಲಿ ಇರಿಸಿಕೊಳ್ಳಬೇಕಾಗಬಹುದು.

ಕೇಂದ್ರ ದೂರಸಂಪರ್ಕ ಇಲಾಖೆಯು (DoT) ಆ್ಯಪ್ ಆಧಾರಿತ ಮೆಸೇಜಿಂಗ್ ಸೇವೆಗಳನ್ನು ಒದಗಿಸುವ ಸಂಸ್ಥೆಗಳಿಗೆ ಖಾತೆಗಳನ್ನು ನೇರವಾಗಿ ಕೆವೈಸಿ-ಪರಿಶೀಲಿಸಿದ ಸಿಮ್ ಕಾರ್ಡ್‌ಗಳೊಂದಿಗೆ ಲಿಂಕ್ ಮಾಡುವಂತೆ ಸೂಚನೆ ನೀಡಿದ್ದು, ಈ ನಿಯಮಗಳನ್ನು ಅನುಷ್ಠಾನಗೊಳಿಸಲು 2026 ರ ಡಿಸೆಂಬರ್ 31 ಅನ್ನು ಅಂತಿಮ ಗಡುವನ್ನಾಗಿ ನಿಗದಿಪಡಿಸಲಾಗಿದೆ.

ಮೊಬೈಲ್ ಸಂಖ್ಯೆ ಮತ್ತು ಆ ಸಂಖ್ಯೆಯಲ್ಲೇ ಚಾಲನೆಯಾಗುವ ಮೆಸೇಜಿಂಗ್ ಖಾತೆಯ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದು ಹಾಗೂ ನಕಲಿ ಖಾತೆಗಳ ಮೂಲಕ ನಡೆಯುವ ಆನ್‌ಲೈನ್ ವಂಚನೆಗಳನ್ನು ತಡೆಯುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ. ಈ ನಿಯಮದಿಂದಾಗಿ, ಫೋನ್‌ನಲ್ಲಿ ನೋಂದಾಯಿತ ಸಿಮ್ ಕಾರ್ಡ್ ಇಲ್ಲದೆ ಕೇವಲ ವೈ-ಫೈ (Wi-Fi) ಸಂಪರ್ಕದ ಮೂಲಕ ವಾಟ್ಸಾಪ್ ಅಥವಾ ಟೆಲಿಗ್ರಾಂ ಬಳಸುವ ಬಳಕೆದಾರರು ಸೇವಾ ಅಡಚಣೆಗಳನ್ನು ಎದುರಿಸಬೇಕಾಗಬಹುದು.

ಯಾವೆಲ್ಲಾ ಫೋನ್‌ಗಳ ಮೇಲೆ ಪರಿಣಾಮ ಬೀರಲಿದೆ?

ನೋಂದಾಯಿತ ಸಿಮ್ ಕಾರ್ಡ್ ಅನ್ನು ಫೋನ್‌ನಲ್ಲಿ ಹಾಕದೆ ವಾಟ್ಸಾಪ್ ಅಥವಾ ಟೆಲಿಗ್ರಾಂ ಬಳಸುತ್ತಿರುವ ಆಂಡ್ರಾಯ್ಡ್ ಹಾಗೂ ಐಫೋನ್ (iOS) ಬಳಕೆದಾರರ ಮೇಲೆ ಈ 'ಸಿಮ್ ಬೈಂಡಿಂಗ್' ನೇರ ಪರಿಣಾಮ ಬೀರಲಿದೆ.

ವರದಿಗಳ ಪ್ರಕಾರ, ಆಪಲ್ (Apple) ಸಂಸ್ಥೆಯು ತನ್ನ ಐಫೋನ್‌ಗಳಲ್ಲಿ ಸಿಮ್ ಬೈಂಡಿಂಗ್‌ ಬೆಂಬಲಿಸಲು iOS ವ್ಯವಸ್ಥೆಯಲ್ಲಿ ಈಗಾಗಲೇ ಬದಲಾವಣೆಗಳನ್ನು ಮಾಡಿದ್ದು, ಫೋನ್‌ನಲ್ಲಿ ಸಿಮ್ ಕಾರ್ಡ್ ಇಲ್ಲದಿರುವುದನ್ನು ಪತ್ತೆಹಚ್ಚಲು ಸೆಪ್ಟೆಂಬರ್‌ನಲ್ಲೇ ಸಾಫ್ಟ್‌ವೇರ್ ಅಪ್‌ಡೇಟ್ ಬಿಡುಗಡೆ ಮಾಡಿದೆ. ಆದರೆ, ಪ್ರತಿಯೊಂದು ಮೆಸೇಜಿಂಗ್ ವೇದಿಕೆಗಳು (Platforms) ಈ ನಿಯಮವನ್ನು ಹೇಗೆ ಜಾರಿಗೆ ತರುತ್ತವೆ ಎಂಬುದರ ಮೇಲೆ ನಿರ್ದಿಷ್ಟ ನಿಯಂತ್ರಣಗಳು ಮತ್ತು ಪರಿಣಾಮ ಬೀರುವ ಸಾಧನಗಳ ಪಟ್ಟಿ ಆಧಾರಿತವಾಗಿರುತ್ತದೆ.

ಒಂದಕ್ಕಿಂತ ಹೆಚ್ಚು ಸಾಧನಗಳಲ್ಲಿ (Multiple Devices) ತಮ್ಮ ಖಾತೆಯನ್ನು ಬಳಸುವವರು, ವಿದೇಶ ಪ್ರವಾಸ ಮಾಡುವವರು ಹಾಗೂ ಹೆಚ್ಚಾಗಿ ವೈ-ಫೈ ಮೇಲೆಯೇ ಮೊಬೈಲ್ ಬಳಸುವವರು ಈ ಹೊಸ ನಿಯಮಗಳು ತಮ್ಮ ಖಾತೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕಾಗಿದೆ.

ಸರ್ಕಾರದ 'ಸಿಮ್ ಬೈಂಡಿಂಗ್' ನಿಯಮಗಳಲ್ಲಿ ಆದ ಬದಲಾವಣೆಗಳೇನು?

ದೂರಸಂಪರ್ಕ ಇಲಾಖೆಯು (DoT) 2025 ರ ನವೆಂಬರ್ 28 ರಂದು ಈ ಕುರಿತು ಮೊದಲ ನಿರ್ದೇಶನ ನೀಡ ಹೊರಡಿಸಿತ್ತು. ಆರಂಭದಲ್ಲಿ, ಪ್ರತಿ 6 ಗಂಟೆಗಳಿಗೊಮ್ಮೆ ಬಳಕೆದಾರರ ವೆಬ್ ಸೆಷನ್‌ಗಳನ್ನು (ಉದಾಹರಣೆಗೆ WhatsApp Web) ಸ್ವಯಂಚಾಲಿತವಾಗಿ 'ಲಾಗ್‌ಔಟ್' (Log out) ಮಾಡುವ ಕಡ್ಡಾಯ ನಿಯಮವನ್ನು ರೂಪಿಸಲಾಗಿತ್ತು. ಆದರೆ, ತದನಂತರ ಸಾರ್ವಜನಿಕ ಮತ್ತು ತಾಂತ್ರಿಕ ಅಭಿಪ್ರಾಯಗಳನ್ನು ಪರಿಗಣಿಸಿ ಈ 6 ಗಂಟೆಯ ಕಡ್ಡಾಯ ಲಾಗ್‌ಔಟ್ ನಿಯಮವನ್ನು ಸರ್ಕಾರ ಹಿಂಪಡೆದಿದೆ.

ಇದರ ಬದಲಾಗಿ 'ಅಪಾಯ ಆಧಾರಿತ ಲಾಗ್‌ಔಟ್' (Risk-based logouts) ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಶಂಕಿತ ವಂಚನೆ ಅಥವಾ ಅಕ್ರಮ ಚಟುವಟಿಕೆ ಕಂಡುಬಂದ ತಕ್ಷಣವೇ ಖಾತೆಯ ಸೇವೆಯನ್ನು ತಡೆಹಿಡಿಯಲಾಗುತ್ತದೆ. ಆದ್ದರಿಂದ, ವಾಟ್ಸಾಪ್ ವೆಬ್ ಬಳಕೆದಾರರು ಪ್ರತಿ 6 ಗಂಟೆಗೆ ಆಟೋಮ್ಯಾಟಿಕ್ ಲಾಗ್‌ಔಟ್ ಆಗುವ ಆತಂಕ ಪಡಬೇಕಿಲ್ಲ. ಆದರೆ, ಸಿಮ್ ಬೈಂಡಿಂಗ್ ನಿಯಮ ಮಾತ್ರ ಪ್ರತ್ಯೇಕವಾಗಿ ಜಾರಿಯಲ್ಲಿರಲಿದೆ.

ಎಲ್ಲಾ ಮೆಸೇಜಿಂಗ್ ಆ್ಯಪ್‌ಗಳಿಗೂ ಇದು ಅನ್ವಯವೇ?

ವರದಿಗಳ ಪ್ರಕಾರ, ವಾಟ್ಸಾಪ್ ಮತ್ತು ಟೆಲಿಗ್ರಾಂ ಸಂಸ್ಥೆಗಳು ಸರ್ಕಾರದ ಈ ಸಿಮ್ ಬೈಂಡಿಂಗ್ ವ್ಯಾಪ್ತಿಗೆ ಬರಲಿವೆ. ಆದರೆ, 'ಸ್ನ್ಯಾಪ್‌ಚಾಟ್' (Snapchat) ಆ್ಯಪ್‌ಗೆ ಈ ನಿಯಮದಿಂದ ವಿನಾಯಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಪ್ರಸಿದ್ಧ ಮೆಸೇಜಿಂಗ್ ಆ್ಯಪ್ 'ಸಿಗ್ನಲ್' (Signal) ಸರ್ಕಾರದ ನೋಟಿಸ್‌ಗೆ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮಾಧ್ಯಮಗಳಲ್ಲಿ ಜನವರಿ 1 ಅನ್ನು ಈ ವ್ಯವಸ್ಥೆಯ ಕಾರ್ಯಾಚರಣೆಯ ಆರಂಭಿಕ ದಿನಾಂಕವೆಂದು ಉಲ್ಲೇಖಿಸಲಾಗಿದ್ದರೂ, ಸರ್ಕಾರ ನೀಡಿರುವ ಅಧಿಕೃತ ಅನುಸರಣೆ ಗಡುವು 2026 ರ ಡಿಸೆಂಬರ್ 31 ಆಗಿದೆ. ಹಾಗಾಗಿ, ಜನವರಿ 1 ರಿಂದಲೇ ನಿರ್ದಿಷ್ಟ ಫೋನ್ ಮಾದರಿಗಳಲ್ಲಿ ವಾಟ್ಸಾಪ್ ಸಂಪೂರ್ಣವಾಗಿ ನಿಂತುಹೋಗುತ್ತದೆ ಎಂದು ಭಾವಿಸಬೇಕಿಲ್ಲ. ಮುಖ್ಯ ವಿಷಯವೆಂದರೆ, ನೀವು ಬಳಸುವ ಮೊಬೈಲ್ ಸಾಧನದಲ್ಲಿ ಆಯಾ ಖಾತೆಯ ನೋಂದಾಯಿತ ಸಿಮ್ ಕಾರ್ಡ್ ಲಭ್ಯವಿದೆಯೇ ಮತ್ತು ಆ್ಯಪ್‌ಗೆ ಅದನ್ನು ಸತ್ಯಾಪಿಸಲು (Verify) ಸಾಧ್ಯವಾಗುತ್ತಿದೆಯೇ ಎಂಬುದು ಮಾತ್ರ ನಿರ್ಣಾಯಕವಾಗಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಇಟಲಿಯ ಬೂದಿಯೊಳಗಿಂದ ಎದ್ದುಬಂದ 2000 ವರ್ಷಗಳ ರೋಮನ್ ವೈಭವ, 1980ರಿಂದ ಸಾರ್ವಜನಿಕರಿಗೆ ನೋ ಎಂಟ್ರಿ ಇದ್ದ ನಿಗೂಢ ಅರಮನೆ
iPhone ಖರೀದಿಗೆ ಹೊಸ ನಿಯಮ, ಗ್ರಾಹಕರಿಗೆ ಶಾಕಿಂಗ್‌ ನ್ಯೂಸ್‌ ಕೊಟ್ಟ ಆಪಲ್‌ ಕಂಪನಿ