ಸೌದಿ ಅರೇಬಿಯಾದ ಕಾನೂನಿನ ಅನ್ವಯ ರೆಡ್ ಹಾರ್ಟ್ ಎಮೋಜಿಯನ್ನು ಕಳುಹಿಸುವವರು ತಪ್ಪಿತಸ್ಥರೆಂದು ಕಂಡುಬಂದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆಯೊಂದಿಗೆ SAR 100,000 (ಸುಮಾರು 20 ಲಕ್ಷ ರೂ.) ದಂಡವನ್ನು ವಿಧಿಸಬಹುದು.
Tech Desk: ಪ್ರಪಂಚದಾದ್ಯಂತ ಬಿಲಿಯನ್‌ಗಟ್ಟಲೆ ಜನ ಸಾಮಾಜಿಕ ಜಾಲತಾಣವನ್ನು (Social Media) ಬಳಸುತ್ತಾರೆ. ಸಾಮಾಜಿಕ ಜಾಲತಾಣಗಳು ಬಳಕೆದಾರರಿಗೆ ಸಾವಿರಾರು ವಿಧದ ಚಟುವಟಿಕೆಗಳಿಗಾಗಿ ಅವಕಾಶ ನೀಡುತ್ತವೆ. ಫೋಟೋ ಶೇರಿಂಗ್ (Photo Sharing) ನಿಂದ ಮೇಸೆಜಿಂಗ್‌ವರೆಗೆ (Messaging) ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಟ ಆಡಬಹುದು. ಇದೆಲ್ಲದರ ಮಧ್ಯೆ ಅಂತರ್ಜಾಲ ಬಳಸುವ ಪ್ರತಿಯೊಬ್ಬರು ಇಮೋಜಿಗಳನ್ನು (Emoji) ಬಳಸಿಯೇ ಬಳಸಿರುತ್ತಾರೆ.
ವೇಗವಾಗಿ ಓಡುತ್ತಿರುವ ಈ ದುನಿಯಾದಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಮಾತುಗಳ ಬದಲಾಗಿ ಬಹುತೇಕರು ಇಮೋಜಿಗಳನ್ನೇ ಬಳಸುತ್ತಾರೆ. ಸೋಷಿಯಲ್ ಮೀಡಿಯಾ ತುಂಬಾ ಇಮೋಜಿಗಳದ್ದೇ ದರ್ಬಾರ್. ಇಂಥಹ ಪರಿಸ್ಥಿತಿಯಲ್ಲಿ ಫೇಸ್‌ಬುಕ್, ವಾಟ್ಸಾಪ್, ಸ್ನ್ಯಾಪ್ ಚಾಟ್, ಇನ್‌ಸ್ಟಾಗ್ರಾಮ್‌ನಂತಹ ಹಲವಾರು ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳು ಪ್ರತಿ ಬಾರಿ ಹಲವಾರು ವಿಧದ ಹೊಸ ಎಮೋಜಿಗಳನ್ನು ಬಿಡುಗಡೆ ಮಾಡುತ್ತವೆ.
ಈ ಮಧ್ಯೇ ಸೌದಿ ಅರೇಬಿಯಾದ ಸೈಬರ್ ಕ್ರೈಂ ತಜ್ಞರು ವಾಟ್ಸಾಪ್‌ನಲ್ಲಿ 'ಕೆಂಪು ಹೃದಯ' (Red Heart) ಇಮೋಜಿಗಳನ್ನು ಕಳುಹಿಸುವುದರ ವಿರುದ್ಧ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಸೌದಿ ಅರೇಬಿಯಾದ ಕಾನೂನಿನ ಅನ್ವಯ ರೆಡ್ ಹಾರ್ಟ್ ಎಮೋಜಿಯನ್ನು ಕಳುಹಿಸುವವರು ತಪ್ಪಿತಸ್ಥರೆಂದು ಕಂಡುಬಂದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆಯೊಂದಿಗೆ SAR 100,000 (ಸುಮಾರು 20 ಲಕ್ಷ ರೂ.) ದಂಡವನ್ನು ವಿಧಿಸಬಹುದು ಎಂದು ವರದಿಯಾಗಿದೆ.
ಇದನ್ನೂ ಓದಿ: Most Used Emoji: 2021 ರಲ್ಲಿ ನೆಟ್ಟಿಗರು ಅತಿ ಹೆಚ್ಚು ಬಳಸಿದ ಇಮೋಜಿ ಯಾವುದು ಗೊತ್ತಾ?
ಕಿರುಕುಳಕ್ಕೆ ಸಮಾನ: ಈ 'ಕೆಂಪು ಹೃದಯ'ಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸುವುದು ದೇಶದಲ್ಲಿ 'ಕಿರುಕುಳ ಅಪರಾಧ'ಕ್ಕೆ (harassment crime) ಸಮಾನವಾಗಿದೆ ಎಂದು ಸೌದಿ ಅರೇಬಿಯಾದ ಆಂಟಿ ಫ್ರಾಡ್ ಅಸೋಸಿಯೇಷನ್‌ನ ಸದಸ್ಯ ಅಲ್ ಮೊಟಾಜ್ ಕುಟ್ಬಿ ಸ್ಥಳೀಯ ಪತ್ರಿಕೆಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.
"ಆನ್‌ಲೈನ್ ಚಾಟ್‌ಗಳ ಸಮಯದಲ್ಲಿ ಕೆಲವು ಚಿತ್ರಗಳು ಮತ್ತು ಎಕ್ಸ್‌ಪ್ರೆಶನ್ಗಳನ್ನು ಸ್ವೀಕರಿಸಿದ ವ್ಯಕ್ತಿ ಮೊಕದ್ದಮೆ ಹೂಡಿದರೆ ಕಿರುಕುಳದ ಅಪರಾಧವಾಗಿ ಬದಲಾಗಬಹುದು" ಎಂದು ಅಲ್ ಮೊಟಾಜ್ ಕುಟ್ಬಿ ಹೇಳಿದ್ದಾರೆ. ಯಾವುದೇ ವ್ಯಕ್ತಿಯೊಂದಿಗೆ ಅವರ ಒಪ್ಪಿಗೆಯಿಲ್ಲದೆ ಸಂವಾದದಲ್ಲಿ ತೊಡಗಬೇಡಿ ಅಥವಾ ಅಹಿತಕರ ಸಂಭಾಷಣೆಯಲ್ಲಿ ತೊಡಗಬೇಡಿ ಎಂದು ಕುಟ್ಬಿ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಕೆಂಪು ಹೃದಯದ ಎಮೋಜಿಗಳನ್ನು ಬಳಸುವಾಗ ಜಾಗರೂಕರಾಗಿರಿ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಇದನ್ನೂ ಓದಿ: Vulnerability Reward Program: ಭಾರತೀಯ ಸೈಬರ್ ಸೆಕ್ಯುರಿಟಿ ಸಂಶೋಧಕ ಅಮನ್ ಪಾಂಡೆಗೆ ಅಗ್ರಸ್ಥಾನ!
₹20 ಲಕ್ಷ ದಂಡ : "ಕಿರುಕುಳ ವಿರೋಧಿ ವ್ಯವಸ್ಥೆಯ ಪ್ರಕಾರ, ಕಿರುಕುಳವನ್ನು ಆಧುನಿಕ ತಂತ್ರಜ್ಞಾನ ಸೇರಿದಂತೆ ಯಾವುದೇ ವಿಧಾನದಿಂದ ಅವನ/ಅವಳ ದೇಹ ಅಥವಾ ಗೌರವಕ್ಕೆ ಧಕ್ಕೆ ತರುವ ಅಥವಾ ಅವನ/ಆಕೆಯ ನಮ್ರತೆಯನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಯೊಂದಿಗೆ ಲೈಂಗಿಕ ಅರ್ಥದೊಂದಿಗೆ ವರ್ತಿಸುವುದು ಅಥವಾ ಸನ್ನೆ ಮಾಡುವುದು ಎಂದು ವ್ಯಾಖ್ಯಾನಿಸಲಾಗಿದೆ. ಇದು ಕೆಂಪು ಹೃದಯಗಳು (Red hearts) ಮತ್ತು ಕೆಂಪು ಗುಲಾಬಿಗಳಂತಹ (Red roses) ಸಮಾಜದ ಪದ್ಧತಿಯ ಪ್ರಕಾರ ಲೈಂಗಿಕ ಅರ್ಥಗಳೊಂದಿಗೆ ಸಂಬಂಧಿಸಿದ (ಎಮೋಜಿಗಳು) ಒಳಗೊಂಡಿರುತ್ತದೆ." ಎಂದು ಕುಟ್ಬಿ ಉಲ್ಲೇಖಿಸಿ ಗಲ್ಫ್ ನ್ಯೂಸ್ ವರದಿ ಮಾಡಿದೆ.
ಸಂಭಾಷಣೆಯಲ್ಲಿ ಯಾವುದೇ ರೀತಿಯ ನಿಂದನೆಗಳು ನಡೆದರೆ ಮತ್ತು ಘಟನೆಯನ್ನು ಅಧಿಕಾರಿಗಳಿಗೆ ವರದಿ ಮಾಡಿದರೆ ಮೇಸೇಜ್ ಕಳುಹಿಸುವವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ. ಆರೋಪ ಸಾಬೀತಾದರೆ, ಶಂಕಿತನ ವಿರುದ್ಧ SR100,000 ದಂಡ ಮತ್ತು/ಅಥವಾ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ. ಪುನರಾವರ್ತಿತ ಉಲ್ಲಂಘನೆಯ ಸಂದರ್ಭದಲ್ಲಿ, ದಂಡವು 5 ವರ್ಷಗಳ ಜೈಲು ಜೊತೆಗೆ SR300,000 ವರೆಗೆ ತಲುಪಬಹುದು ಎಂದು ಗಲ್ಫ್ ನ್ಯೂಸ್ ವರದಿ ಮಾಡಿದೆ.