
ನವದೆಹಲಿ (ಜುಲೈ 13): ಲಂಡನ್ ಮೂಲದ ಸ್ಟಾರ್ಟ್ಅಪ್ ನಥಿಂಗ್ ತನ್ನ ಫೋನ್-1 ಅನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿಯೇ ಡಿಯರ್ ನಥಿಂಗ್ ಎನ್ನುವ ಹ್ಯಾಶ್‌ಟ್ಯಾಗ್ ಭಾರತದಲ್ಲಿ ತ್ವರಿತವಾಗಿ ಟ್ರೆಂಡಿಂಗ್ ಆರಂಭವಾಗಿತ್ತು. ಡಿಯರ್ ನಥಿಂಗ್ ಎನ್ನುವ ಹೆಸರಿನಲ್ಲಿ ಆಕ್ರೋಶ ಹೊರಹಾಕಿದ ಹೆಚ್ಚಿನವರು ದಕ್ಷಿಣ ಭಾರತದವರು. ಅಷ್ಟಕ್ಕೂ ದಕ್ಷಿಣ ಭಾರತದವರು, ಸ್ಮಾರ್ಟ್‌ಫೋನ್ ಮಾರಾಟ, ಲಾಂಚ್ ಇವೆಂಟ್ ಅಥವಾ ಫೋನ್‌ನಲ್ಲಿರುವ ಇತರ ವ್ಯವಸ್ಥೆಗಳ ಕುರಿತಾಗಿ ಆಕ್ರೋಶ ಹೊರಹಾಕಿರಲಿಲ್ಲ. ದಕ್ಷಿಣ ಭಾರತದ ಬಹುತೇಕ ಟೆಕ್ಕಿಗಳು ಈ ಹ್ಯಾಶ್‌ಟ್ಯಾಗ್‌ನಲ್ಲಿ ಟ್ವೀಟ್ ಮಾಡಿದ್ದರಿಂದ ಭಾರತದಲ್ಲಿ ಸೋಮವಾರ ಟ್ರೆಂಡಿಂಗ್‌ನಲ್ಲಿದ್ದ ವಿಚಾರ ಎನಿಸಿಕೊಂಡಿತ್ತು. ಒನ್‌ಪ್ಲಸ್ ಕಂಪನಿಯ ಮಾಜಿ ಸಂಸ್ಥಾಪಕ ಕಾರ್ಲ್ ಪೀ ಅವರ ಹೊಸ ಕಂಪನಿಯ ಬಗ್ಗೆ ದಕ್ಷಿಣ ಭಾರತದವರು ಸಿಟ್ಟಾಗಲು ಕಾರಣವೇನು? ಫೋನ್-1 ಬಿಡುಗಡೆಯ ದಿನದಂದು ಡಿಯರ್ ನಥಿಂಗ್ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್ ಆಗಲು ಪ್ರಚೋದಿಸಿದ ವಿಷಯ ಯಾವುದು? ಟ್ವಿಟರ್‌ನಲ್ಲಿ ಅಭಿಮಾನಿಗಳು ಕಂಪನಿಯೊಂದಿಗೆ ಕೋಪಗೊಳ್ಳಲು ಕಾರಣವೇನು? ಘಟನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಸಂಪೂರ್‌ಣ ಮಾಹಿತಿ ಇಲ್ಲಿದೆ. ಇಷ್ಟಕ್ಕೆಲ್ಲ ಕಾರಣವಾಗಿದ್ದ ಪ್ರಸಾದ್ ಟೆಕ್ ಇನ್ ತೆಲುಗು ಎನ್ನುವ ಯೂ ಟ್ಯೂಬ್ ಪೇಜ್ ಎಂದರೆ ನಿಮಗೆ ಅಚ್ಚರಿಯಾಗದೇ ಇರದು.
ಅಷ್ಟಕ್ಕೂ ಡಿಯರ್ ನಥಿಂಗ್ ಟ್ರೆಂಡ್ ಆಗಲು ಕಾರಣವೇನು: ಜನಪ್ರಿಯ YouTube ಚಾನೆಲ್ 'Prasadtechintelugu' ಫೋನ್ (1) ಬಿಡುಗಡೆ ಕಾರ್ಯಕ್ರಮದ ಸಂಜೆ ಹೊಸ ವೀಡಿಯೊವನ್ನು ಬಿಡುಗಡೆ ಮಾಡಿದ ನಂತರ #DearNothing ಟ್ರೆಂಡ್ ಆಗಲು ಪ್ರಾರಂಭಿಸಿತು. ಆದರೆ, ಈ ವಿಡಿಯೋ ತಮಾಷೆಗಾಗಿ ಮಾಡಿದ್ದಾಗಿತ್ತು. ಈ ವಿಡಿಯೋ ಮಾಡಿದ ವ್ಯಕ್ತಿ ಪ್ರಸಾದ್, ಫೇಕ್ ಆಗಿರುವ ನಥಿಂಗ್ ಫೋನ್-1 ಬಾಕ್ಸ್ ಅನ್ನು ಓಪನ್ ಮಾಡಲು ಆರಂಭಿಸುತ್ತಾನೆ. ಆದರೆ, ಅದು ಖಾಲಿ ಬಾಕ್ಸ್ ಆಗಿರುತ್ತದೆ. ಈ ಖಾಲಿ ಬಾಕ್ಸ್‌ನ ಒಳಗಡೆ ಒಂದು ಲೆಟರ್ ಇರುತ್ತದೆ.
ವಿಶೇಷವೆಂದರೆ, ಈ ಪತ್ರ ಕೂಡ ಫೇಕ್ ಆಗಿತ್ತು. ಪತ್ರದಲ್ಲಿ, " ಹಾಯ್ ಪ್ರಸಾದ್, ಇದು ದಕ್ಷಿಣ ಭಾರತದ (South India) ಪ್ರಜೆಗಳಿಗಾಗಿ ಮಾಡಿರುವ ಫೋನ್ ಅಲ್ಲ. ಥ್ಯಾಂಕ್ ಯು' ಎಂದು ಬರೆಯಲಾಗಿತ್ತು. ಈ ಪತ್ರವನ್ನು ಬರೆಯಲು, ನಥಿಂಗ್ ಕಂಪನಿಯು ಪ್ರಪಂಚದಾದ್ಯಂತ ತನ್ನ ಪ್ರಚಾರಕ್ಕಾಗಿ ಬಳಸಿದಂಥ ಚುಕ್ಕೆಗಳ ಫಾಂಟ್ ಅನ್ನು ಹೋಲುವಂತೆ ಪ್ರಯತ್ನಿಸುವ ಫಾಂಟ್ ಅನ್ನೇ ಪ್ರಯೋಗಿಸಿದ್ದರು. ದಕ್ಷಿಣ ಭಾರತದ ಕಂಟೆಂಟ್ ಕ್ರಿಯೇಟರ್‌ಗಳಿಗೆ ನಥಿಂಗ್ ಫೋನ್-1 (Nothing Phone 1) ಕುರಿತಾಗಿ ವಿಮರ್ಶೆ ಮಾಡಲು ಹೆಚ್ಚಿನ ಫೋನ್‌ಗಳನ್ನು (Mobile Phone) ನೀಡಿಲ್ಲ. ಅದಕ್ಕೆ ಪ್ರತಿಭಟನೆ ಮಾಡುವ ಸಲುವಾಗಿ ಇಂಥದ್ದೊಂದು ಕಂಟೆಂಟ್ ಅನ್ನು ಮಾಡಿದ್ದರು. ಮೊಬೈಲ್ ಫೋನ್‌ಗಳನ್ನು ವಿಮರ್ಶೆ ಅಥವಾ ಟೆಕ್ ರಿವ್ಯೂ ಮಾಡಲು ಕಳಿಸುವುದು ಸಂಪೂರ್ಣವಾಗಿ ಕಂಪನಿಯ ಹಕ್ಕು ಆಗಿರುತ್ತದೆ.
ತಪ್ಪಾಗಿ ಅರ್ಥ ಮಾಡಿಕೊಂಡ ನೆಟಿಜನ್ಸ್: ಆದರೆ, ಪ್ರಸಾದ್ ಆನ್ ಸ್ಕ್ರೀನ್‌ನಲ್ಲಿ ತೋರಿಸಿದ ಪತ್ರದ ಸ್ಕ್ರೀನ್ ಶಾಟ್ ಕ್ಷಣಾರ್ಧದಲ್ಲಿ ಇತರ ಟ್ವಿಟರ್ ಪೇಜ್‌ಗಳಲ್ಲಿ ಕಾಣಿಸಲು ಆರಂಭಿಸಿದ್ದಲ್ಲದೆ, ಇಡೀ ವಿಚಾರವೇ ಬೇರೆ ಕಡೆಗೆ ತಿರುಗಿತು. ಬಹುತೇಕ ಟೆಕ್ ಉತ್ಸಾಹಿಗಳು ಇದು ನಥಿಂಗ್ ಫೋನ್-1 ಕಂಪನಿಯ ಅಧಿಕೃತ ಸಂವಹನ ಎಂದು ತಿಳಿದು ಕಂಪನಿಯ ಮೇಲೆ ಆಕ್ರೋಸ ಹೊರಹಾಕಲು ಆರಂಭಿಸಿದರು.
ಇದನ್ನೂ ಓದಿ: ನಥಿಂಗ್ ಫೋನ್ (1) ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆ: ಸುಳಿವು ನೀಡಿದ ಸಂಸ್ಥಾಪಕ ಕಾರ್ಲ್ ಪೀ?
ನಥಿಂಗ್ ಫೋನ್‌ಗೆ ಟೀಕೆ: #DearNthing ಎಂಬ ಹ್ಯಾಶ್‌ಟ್ಯಾಗ್ ಟ್ವಿಟ್ಟರ್‌ನಲ್ಲಿ ತ್ವರಿತವಾಗಿ ಟ್ರೆಂಡಿಂಗ್ ಪ್ರಾರಂಭಿಸಿತು, ನೂರಾರು ಭಾರತೀಯ ಬಳಕೆದಾರರು ಟ್ವೀಟ್‌ಗಳ ಮೂಲಕ ನಥಿಂಗ್ ಕಂಪನಿಯನ್ನು ಟೀಕಿಸಿದರು. ಆದರೆ, ಮೂಲದಲ್ಲಿ ಕಂಪನಿ ಇಂಥದ್ದೊಂದು ಪತ್ರವನ್ನು ಕಳಿಸಿಯೇ ಇರಲಿಲ್ಲ. ನಥಿಂಗ್ ಕಂಪನಿಯು ಹಿಂದಿ ಭಾಷಿಕರಿಗೆ ಹೆಚ್ಚಿನ ಗಮನ ನೀಡುತ್ತಿದೆ, ಭಾರತದ ಪ್ರಾದೇಶಿಕ ಭಾಷೆಗಳಿಗೆ ಗಮನ ನೀಡುತ್ತಿಲ್ಲ ಎಂದು ಹೆಚ್ಚಿನವರು ಭಾವಿಸಿ ಟ್ವೀಟ್ ಮಾಡಿದರು.
ಇದನ್ನೂ ಓದಿ: 2022ರ ಕೊನೆಯಲ್ಲಿ ನಥಿಂಗ್ ಫೋನ್ (1) ಭಾರತದಲ್ಲಿ ಲಾಂಚ್: ಆ್ಯಪಲ್ ಐಫೋನ್‌ಗೆ ಪ್ರಬಲ ಪ್ರತಿಸ್ಪರ್ಧಿ?
ದಕ್ಷಿಣ ಭಾರತದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೆಟ್ಟ ವಿಚಾರವಾಗಿ ನಥಿಂಗ್ ಕಂಪನಿ ಟ್ರೆಂಡ್ ಆದರೂ, ಈ ಕುರಿತಾಗಿ ಕಂಪನಿ ಯಾವುದೇ ಹೇಳಿಕೆ ನೀಡಿಲ್ಲ. ಭಾರತದ ವಿವಿಧ ಮಾಧ್ಯಮಗಳು ಕಂಪನಿಯ ಹೇಳಿಕೆಗಾಗಿ ಕಂಪನಿಯ ಅಧಿಕಾರಿಗಳನ್ನು ಸಂಪರ್ಕಿಸಿವೆ. ಹೆಚ್ಚಿನ ಸಂಖ್ಯೆಯ ಬಳಕೆದಾರರಿಗೆ ಈ ಪತ್ರವು ನಕಲಿ ಮತ್ತು ಭಾರತದ ಯಾವುದೇ ಸಮುದಾಯವನ್ನು ಗುರಿಯಾಗಿಟ್ಟುಕೊಂಡು ಯಾವುದೇ ಅವಹೇಳನಕಾರಿ ಟೀಕೆಗಳನ್ನು ಮಾಡಿಲ್ಲ ಎನ್ನುವುದು ಇನ್ನೂ ತಿಳಿದಿಲ್ಲ.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.