ಕೊನೆ ದಿನವೂ ವಿಕ್ರಂ ಜೊತೆ ಸಂಪರ್ಕ ಸಾಧ್ಯವಾಗಲಿಲ್ಲ!, ಮುಂದೇನು?

By Kannadaprabha NewsFirst Published Sep 21, 2019, 9:06 AM IST
Highlights

ಕೊನೆ ದಿನವೂ ವಿಕ್ರಂ ಜೊತೆ ಸಂಪರ್ಕ ಸಾಧ್ಯವಾಗಲಿಲ್ಲ| ಚಂದ್ರನಲ್ಲಿ ಇಂದು ಮುಂಜಾನೆಯಿಂದ ರಾತ್ರಿ ಆರಂಭ

ನವದೆಹಲಿ[ಸೆ.21]: ಚಂದ್ರಯಾನ-2 ನೌಕೆಯ ‘ವಿಕ್ರಮ್‌’ ಲ್ಯಾಂಡರ್‌ ಜತೆ ಸಂಪರ್ಕ ಸಾಧಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳಿಗೆ ಇದ್ದ ಕಟ್ಟಕಡೆಯ ಅವಕಾಶವೂ ಬಹುತೇಕ ಕೊನೆಗೊಂಡಿದೆ. ಹೀಗಾಗಿ ಚಂದ್ರನ ಮೇಲೆ ಇಳಿಯುವಾಗ ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡ ಲ್ಯಾಂಡರ್‌ ಜೊತೆ ಮರು ಸಂಪರ್ಕ ಸಾಧಿಸುವ ಇಸ್ರೋದ ಯತ್ನ ಕನಸಾಗಿಯೇ ಉಳಿದಿದೆ. ಚಂದ್ರನ ಮೇಲೆ ಶನಿವಾರ ಮುಂಜಾನೆಯಿಂದ ಕತ್ತಲು ಕವಿಯಲು ಆರಂಭವಾಗಲಿದೆ. ಹೀಗಾಗಿ ವಿಕ್ರಮ್‌ ಲ್ಯಾಂಡರ್‌ ಶಾಶ್ವತವಾಗಿ ಸ್ತಬ್ಧವಾಗಲಿದೆ.

ರಾತ್ರಿ ವೇಳೆ ಚಂದ್ರನಲ್ಲಿ ಮೈನಸ್‌ 240 ಡಿಗ್ರಿವರೆಗೂ ಉಷ್ಣಾಂಶವಿರಲಿದೆ. ಇಂತಹ ಪ್ರತಿಕೂಲ ಹವಾಮಾನದಲ್ಲಿ ಲ್ಯಾಂಡರ್‌ ಹಾಗೂ ಅದರ ಒಡಲಲ್ಲಿರುವ ‘ಪ್ರಜ್ಞಾನ್‌’ ರೋವರ್‌ ಬ್ಯಾಟರಿಗಳು ಕಾರ್ಯನಿರ್ವಹಿಸುವುದಿಲ್ಲ. ಚಂದ್ರನ ಮೇಲೆ 14 ದಿನಗಳ ಬಳಿಕ ಹಗಲು ಆರಂಭವಾದ ಬಳಿಕ ಲ್ಯಾಂಡರ್‌ ಬಿದ್ದಿರುವ ಸ್ಥಳವನ್ನು ಪತ್ತೆ ಮಾಡಬಹುದಾಗಿದೆ.

ಸೆ.7ರ ನಸುಕಿನ ವೇಳೆ ಚಂದ್ರನ ಮೇಲ್ಮೈಗೆ ಹತ್ತಿರದಲ್ಲಿರುವಾಗ ಲ್ಯಾಂಡರ್‌ ಸಂಪರ್ಕ ಕಡಿದುಕೊಂಡಿತ್ತು. ಅಂದಿನಿಂದಲೂ ಇಸ್ರೋ ವಿಜ್ಞಾನಿಗಳು ಸಾಧ್ಯವಿರುವ ಎಲ್ಲ ಪ್ರಯತ್ನ ನಡೆಸಿ ಅದರ ಜತೆ ಸಂಪರ್ಕ ಸಾಧಿಸಲು ಯತ್ನಿಸುತ್ತಲೇ ಬಂದಿತ್ತು. ಈ ನಡುವೆ, ನಾಸಾದ ಆರ್ಬಿಟರ್‌ ಕೂಡ ಲ್ಯಾಂಡರ್‌ ಇರುವ ಸ್ಥಳದ ಚಿತ್ರವನ್ನು ಸೆರೆ ಹಿಡಿಯಲು ಯತ್ನ ನಡೆಸಿತ್ತು.

click me!