ಹೊಸ ನಿಯಮದ ಸಂಕಷ್ಟ: ಭಾರತದಲ್ಲಿ ವಿಕಿಪೀಡಿಯಾ ಯುಗಾಂತ್ಯ?

By Kannadaprabha NewsFirst Published Feb 27, 2020, 12:52 PM IST
Highlights

ಭಾರತದಲ್ಲಿ ವಿಕಿಪೀಡಿಯಾ ಯುಗಾಂತ್ಯ?| ವಿಕಿಪೀಡಿಯಾ ಉಚಿತ ಸೇವೆ ನೀಡಲು ತೊಡಕಾದ ಸರ್ಕಾರದ ಹೊಸ ನಿಯಮ| ಮಾಹಿತಿ ರಕ್ಷಣೆ ಮಸೂದೆ ಜಾರಿಯಾದರೆ ಅಂತರ್ಜಾಲ ಸಂಸ್ಥೆಗಳಿಗೆ ಸಂಕಷ್ಟ

ನವದೆಹಲಿ[ಫೆ.27]: ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಮಾಹಿತಿ ರಕ್ಷಣೆ ಮಸೂದೆ ಮತ್ತು ಅಂತರ್ಜಾಲ ಮಧ್ಯವರ್ತಿ ಹೊಣೆಗಾರಿಕೆ ನಿಯಮ ಭಾರತದಲ್ಲಿ ವಿಕಿಪೀಡಿಯಾದ ಯುಗದ ಅಂತ್ಯಕ್ಕೆ ಕಾರಣವಾಗಲಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಸರ್ಕಾರದ ಉದ್ದೇಶಿತ ಮಸೂದೆ ‘50 ಲಕ್ಷಕ್ಕಿಂತ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಇಂಟರ್‌ನೆಟ್‌ ಸೇವೆ ನೀಡುವ ಕಂಪನಿಗಳು ಭಾರತದಲ್ಲೇ ಕಾಯಂ ಕಚೇರಿ ಮತ್ತು ವಿಳಾಸ ಹೊಂದಿರಬೇಕು. ಜೊತೆಗೆ ಸ್ಥಳೀಯ ಸರ್ವರ್‌ಗಳ ಮೂಲಕವೇ ಕಾರ್ಯನಿರ್ವಹಿಸಬೇಕು ಎಂಬ ನಿಯಮವನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಈ ನಿಯಮ ಗೂಗಲ್‌, ಫೇಸ್‌ಬುಕ್‌, ಟ್ವೀಟರ್‌, ಟಿಕ್‌ಟಾಕ್‌ ಮುಂತಾದ ತಂತ್ರಜ್ಞಾನ ದೈತ್ಯ ಸಂಸ್ಥೆಗಳ ಕಳವಳಕ್ಕೆ ಕಾರಣವಾಗಿದೆ. ಉಚಿತ ಜ್ಞಾನಕೋಶ ಎನಿಸಿರುವ ವಿಕಿಪೀಡಿಯಾ ಕೂಡ ಇದರಿಂದ ಹೊರತಾಗಿಲ್ಲ.

ನೋಬೆಲ್ ಪ್ರಶಸ್ತಿ ಗೆದ್ದ ಸಾಧಕಿಯನ್ನ ಅವಮಾನಿಸಿತಾ ವಿಕಿಪೀಡಿಯಾ?

ಒಂದು ವೇಳೆ ಉದ್ದೇಶಿತ ಮಸೂದೆ ಜಾರಿ ಆದರೆ, ಆನ್‌ಲೈನ್‌ನಲ್ಲಿ ಮುಕ್ತವಾಗಿ ವಿಷಯಗಳನ್ನು ಪ್ರಕಟಿಸುವುದಕ್ಕೆ ಸರ್ಕಾರ ಕಡಿವಾಣ ಹಾಕಬಹುದಾಗಿದೆ. ಆಯ್ದ ವಿಷಯಗಳನ್ನು ಮಾತ್ರ ಪ್ರಕಟಿಸುವಂತೆ ಮತ್ತು ಕೆಲವೊಂದು ಸಂಗತಿಗಳನ್ನು 24 ಗಂಟೆಗಳ ಒಳಗಾಗಿ ಅಳಿಸುವಂತೆ ಸರ್ಕಾರ ಸೂಚಿಸಬಹುದಾಗಿದೆ. ಅಂದರೆ, ವಿಕಿಪೀಡಿಯಾದಲ್ಲಿ ಪ್ರಕಟವಾಗುವ ಯಾವುದೇ ಮಾಹಿತಿಯನ್ನು ಅಳಿಸುವಂತೆ ಸರ್ಕಾರ ಕೇಳಬಹುದಾಗಿದೆ.

ಈ ಹಿನ್ನೆಲೆಯಲ್ಲಿ ಅಂತರ್ಜಾಲ ಮಧ್ಯವರ್ತಿ ಹೊಣೆಗಾರಿಕೆ ನಿಯಮಗಳಿಗೆ ಸಂಬಂಧಿಸಿದಂತೆ ವಿಕಿಪೀಡಿಯಾ, ಮೊಜಿಲ್ಲಾ, ಗಿಟ್‌ಹಬ್‌, ಕ್ಲೌಡ್‌ಫ್ಲೇರ್‌ ಸಂಸ್ಥೆಗಳು ಸರ್ಕಾರಕ್ಕೆ ಬಹಿರಂಗ ಪತ್ರವೊಂದನ್ನು ಬರೆದಿವೆ. ಒಂದು ವೇಳೆ ಈಗಿರುವ ಕರಡು ಮಸೂದೆಯನ್ನೇ ಸರ್ಕಾರ ಜಾರಿಗೊಳಿಸಿದರೆ ಭಾರತದಲ್ಲಿ ವಿಕಿಪೀಡಿಯಾ ಕಾರ್ಯನಿರ್ವಹಿಸುವುದು ಮತ್ತು ಅದಕ್ಕೆ ಅಗತ್ಯವಿರುವ ಸಂಪನ್ಮೂಲ ಕ್ರೋಢೀಕರಿಸುವುದು ಕಷ್ಟವಾಗಬಹುದು ಎಂದು ವಿಕಿಪೀಡಿಯಾದ ಕಾನೂನು ನಿರ್ದೇಶಕ ಸ್ಟೀಫನ್‌ ಲಾಪೊರ್ಟೆ ತಿಳಿಸಿದ್ದಾರೆ. ಸರ್ಕಾರದ ನಿಯಮಗಳು ವಿಕಿಪೀಡಿಯಾದದಂತಹ ಲಾಭದಾಯಕವಲ್ಲದ ಜಾಲತಾಣಗಳಿಗೆ ಭಾರತದಲ್ಲಿ ತನ್ನ ಸೇವೆಯನ್ನು ಮುಂದುವರಿಸಲು ಅವಕಾಶ ನೀಡಲಿದೆ ಎಂಬ ವಿಶ್ವಾಸವಿದೆ. ಭಾರತದಲ್ಲಿ ಬಳಕೆದಾರರಿಗೆ ಉಚಿತ ಸೇವೆ ನೀಡಲು ಸಾಧ್ಯವಾದಷ್ಟುಪ್ರಯತ್ನ ಮಾಡಲಾಗುವುದು ಎಂದು ಲಾಪೋರ್ಟೆ ಹೇಳಿದ್ದಾರೆ.

ಮೂಡ್‌ ನೋಡಿ ಮೋಡ್ ಸೂಚಿಸುತ್ತೆ! ಪ್ಯಾನಸೋನಿಕ್‌ನಿಂದ ಸ್ಮಾರ್ಟ್ ಏಸಿ

click me!