
ಆಫೀಸ್ ಕೆಲಸಕ್ಕೆ ಔಟ್ಲುಕ್, ಮೀಟಿಂಗ್ಗೆ ಟೀಮ್ಸ್, ಮಾಹಿತಿ ಹುಡುಕುವ ಎಐ ಟೂಲ್ಗಳು ಏಕಾಏಕಿ ಕೈಕೊಟ್ಟರೆ ಪರಿಸ್ಥಿತಿ ಹೇಗಿರಬಹುದು? ಸದ್ಯ ಜಗತ್ತಿನಾದ್ಯಂತ ಲಕ್ಷಾಂತರ ಉದ್ಯೋಗಿಗಳು ಮತ್ತು ಕಂಪನಿಗಳು ಇಂತಹದ್ದೇ ಸಮಸ್ಯೆ ಎದುರಿಸುವಂತಾಗಿದೆ. ಮೈಕ್ರೋಸಾಫ್ಟ್ನ ಪ್ರಮುಖ ಸೇವೆಗಳು ದಿಢೀರ್ ಸ್ಥಗಿತಗೊಂಡಿದೆ. ಇಮೇಲ್ ಕಳುಹಿಸಲು, ಸ್ವೀಕರಿಸಲು ಹಾಗೂ ಆಫೀಸ್ ಕೆಲಸಗಳನ್ನು ನಿರ್ವಹಿಸಲು ಬಳಕೆದಾರರು ಪರದಾಡುವಂತಾಗಿದೆ. ಔಟ್ಲುಕ್ನಿಂದ ಟೀಮ್ಸ್ವರೆಗೆ ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದೆ.
ಮೈಕ್ರೋಸಾಫ್ಟ್ 365ರಲ್ಲಿ ಉಂಟಾದ ಭಾರೀ ತಾಂತ್ರಿಕ ಸಮಸ್ಯೆಯಿಂದ ಲಕ್ಷಾಂತರ ಬಳಕೆದಾರರಿಗೆ ತಮ್ಮ ಔಟ್ಲುಕ್ ಇನ್ಬಾಕ್ಸ್ ತೆರೆಯಲು ಸಾಧ್ಯವಾಗ್ತಿಲ್ಲ. ಇಮೇಲ್ ಕಳುಹಿಸುವುದು ಮತ್ತು ಸ್ವೀಕರಿಸುವುದರಲ್ಲಿಯೂ ಸಾಕಷ್ಟು ವಿಳಂಬ ಉಂಟಾಗಿದೆ. ಇದರ ಜೊತೆಗೆ ಮೈಕ್ರೋಸಾಫ್ಟ್ ಟೀಮ್ಸ್ ಮತ್ತು ಕಂಪನಿಯ AI ಅಸಿಸ್ಟೆಂಟ್ ಕೋಪೈಲಟ್ನ ಹಲವು ಫೀಚರ್ಗಳೂ ಸಂಪೂರ್ಣವಾಗಿ ಸ್ಥಗಿತಗೊಂಡಿವೆ.
ಡೌನ್ಡೆಟೆಕ್ಟರ್ನಲ್ಲಿ ಔಟ್ಲುಕ್ಗೆ ಸಂಬಂಧಿಸಿದಂತೆ ಸುಮಾರು 1,38,000 ಸಮಸ್ಯೆಗಳ ದೂರುಗಳು ದಾಖಲಾಗಿವೆ. ಕೆಲವು ಬಳಕೆದಾರರಿಗೆ ಐದು ಗಂಟೆಗಳಿಗೂ ಹೆಚ್ಚು ಕಾಲ ಈ ಸಮಸ್ಯೆ ಎದುರಾಗಿದೆ. ಈ ಅವಧಿಯಲ್ಲಿ ChatGPT ಮತ್ತು Claude ನಂತಹ ಜನಪ್ರಿಯ AI ಟೂಲ್ಗಳಿಗೂ ಮೈಕ್ರೋಸಾಫ್ಟ್ 365 ಜೊತೆ ಕನೆಕ್ಟ್ ಆಗಲು ಸಾಕಷ್ಟು ತೊಂದರೆಯಾಗಿದೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಮೈಕ್ರೋಸಾಫ್ಟ್, ಸೇವೆಗಳನ್ನು ಮರುಸ್ಥಾಪಿಸುವ ಪ್ರಯತ್ನಗಳು ಮುಂದುವರಿದಿವೆ ಎಂದು ತಿಳಿಸಿದೆ. ಆರಂಭಿಕ ಹಂತದಲ್ಲಿ ಪರಿಸ್ಥಿತಿ ಸ್ಥಿರವಾಗುತ್ತಿರುವುದು ಮತ್ತು ಸೇವೆಗಳ ಸಾಮರ್ಥ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಈ ತಾಂತ್ರಿಕ ಸಮಸ್ಯೆಯ ಸಂದರ್ಭದಲ್ಲಿ ತಡವಾಗಿ ತಲುಪುವ ಇಮೇಲ್ಗಳು ಸುರಕ್ಷಿತವಾಗಿರುವಂತೆ ಇಮೇಲ್ ಟೈಮ್ಔಟ್ ಅವಧಿಯನ್ನು 48 ಗಂಟೆಗಳಿಗೆ ಹೆಚ್ಚಿಸಲಾಗಿದೆ ಎಂದು ಕಂಪನಿ ಹೇಳಿದೆ.
ಶುಕ್ರವಾರ ಬೆಳಗ್ಗೆ ಭಾರತದಲ್ಲಿನ ಕೆಲವು ಸರ್ವರ್ಗಳ ಸಾಮರ್ಥ್ಯವನ್ನು ಮೈಕ್ರೋಸಾಫ್ಟ್ ಮರುಸ್ಥಾಪಿಸಿತ್ತು. ಆದರೂ ಬೆಳಗ್ಗೆ 9.30ರ ವರದಿಯ ಪ್ರಕಾರ, ಸೇವೆಗಳು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿರಲಿಲ್ಲ. ಕೆಲವು ಸರ್ವರ್ಗಳನ್ನು ಮರುಪ್ರಾರಂಭಿಸಿದ ಬಳಿಕ ಅವು ಮತ್ತೆ ಕಾರ್ಯನಿರ್ವಹಿಸಲು ಆರಂಭಿಸಿದ್ದವು. ಆದರೆ ಬಳಕೆದಾರರಿಂದ ಹೆಚ್ಚಿನ ಸಂಖ್ಯೆಯಲ್ಲಿ ರಿಕ್ವೆಸ್ಟ್ಗಳು ಬಂದಾಗ ಸರ್ವರ್ಗಳು ಮತ್ತೆ ಕ್ರ್ಯಾಶ್ ಆಗಿವೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.
ಸದ್ಯ ಕಂಪನಿಯು ಸೀಮಿತ ಸಂಖ್ಯೆಯ ಸರ್ವರ್ಗಳಲ್ಲಿ ಹೊಸ ಪ್ಯಾಚ್ಗಳನ್ನು ಪರೀಕ್ಷಿಸುತ್ತಿದೆ. ಇದರ ಜೊತೆಗೆ ಇತ್ತೀಚೆಗೆ ನೆಟ್ವರ್ಕ್ ಸೆಟ್ಟಿಂಗ್ಗಳಲ್ಲಿ ಮಾಡಲಾಗಿದ್ದ ಕೆಲವು ಬದಲಾವಣೆಗಳನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನೂ ನಡೆಸುತ್ತಿದೆ. ಈ ಸುಧಾರಣಾ ಕ್ರಮಗಳ ಬಳಿಕ ಕೆಲವು ಗ್ರಾಹಕರಿಗೆ ಸೇವೆಗಳನ್ನು ಬಳಸಲು ಸಾಧ್ಯವಾಗಿದೆ. ಆದರೆ ಇನ್ನೂ ಹಲವರು ತಮ್ಮ ಇಮೇಲ್ಗಳನ್ನು ತೆರೆಯಲು ಮತ್ತು ಬಳಸಲು ಸಮಸ್ಯೆ ಎದುರಿಸುತ್ತಿದ್ದಾರೆ.
ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11.30ರ ವೇಳೆಗೆ ಔಟ್ಲುಕ್ ಸಮಸ್ಯೆಗಳಿಗೆ ಸಂಬಂಧಿಸಿದ ದೂರುಗಳ ಸಂಖ್ಯೆ 1,38,058ಕ್ಕೆ ತಲುಪಿತ್ತು. ಆರಂಭದಲ್ಲಿ ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕದ ಕೆಲವು ದೇಶಗಳಲ್ಲಿ ಮಾತ್ರ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮೈಕ್ರೋಸಾಫ್ಟ್ ಗುರುತಿಸಿತ್ತು. ಆದರೆ ನಂತರ ಈ ತಾಂತ್ರಿಕ ಸಮಸ್ಯೆ ಜಗತ್ತಿನ ಅನೇಕ ಭಾಗಗಳಲ್ಲಿ ಕಂಡು ಬಂದಿದೆ. ಈ ಸಮಸ್ಯೆ ಕೇವಲ ಇಮೇಲ್ ಬಳಕೆಗೆ ಮಾತ್ರ ಸೀಮಿತವಾಗಿರಲಿಲ್ಲ. ಆಸ್ಟ್ರೇಲಿಯಾದಲ್ಲಿ ಸಾರ್ವಜನಿಕರು ಮತ್ತು ಉದ್ಯಮಗಳಿಗೆ ಅಗತ್ಯ ಸೇವೆಗಳನ್ನು ಒದಗಿಸುವ ಸರ್ಕಾರಿ ಸಂಸ್ಥೆ ಸರ್ವಿಸ್ ಎನ್ಎಸ್ಡಬ್ಲ್ಯು (Service NSW) ಕೂಡ ಇದರಿಂದ ತೊಂದರೆ ಅನುಭವಿಸಿದೆ.
ಮೈಕ್ರೋಸಾಫ್ಟ್ 365 ಯಾವ ವಿಭಾಗದಲ್ಲಿ ಸಮಸ್ಯೆ ?
ಮೈಕ್ರೋಸಾಫ್ಟ್ 365 ಎನ್ನುವುದು ಔಟ್ಲುಕ್, ಟೀಮ್ಸ್ ಮತ್ತು ಶೇರ್ಪಾಯಿಂಟ್ನಂತಹ ಹಲವು ಆಫೀಸ್ ಅಪ್ಲಿಕೇಶನ್ಗಳು ಹಾಗೂ ಆನ್ಲೈನ್ ಸೇವೆಗಳನ್ನು ಒಳಗೊಂಡಿರುವ ಪ್ರೀಮಿಯಂ ಸಬ್ಸ್ಕ್ರಿಪ್ಷನ್ ಪ್ಯಾಕೇಜ್ ಆಗಿದೆ. ಈ ಬಾರಿ ಮುಖ್ಯವಾಗಿ Exchange Online ಸೇವೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಇದು ಮೈಕ್ರೋಸಾಫ್ಟ್ನ ಕ್ಲೌಡ್ ಸೇವೆಯಾಗಿದ್ದು, ಇಮೇಲ್ಗಳನ್ನು ಸಂಗ್ರಹಿಸುವುದು, ಕಳುಹಿಸುವುದು ಮತ್ತು ಕ್ಯಾಲೆಂಡರ್ ನಿರ್ವಹಿಸುವ ಕೆಲಸ ಮಾಡುತ್ತದೆ. ಔಟ್ಲುಕ್ ಈ ಸೇವೆಯನ್ನು ಬಳಸಲು ನೆರವಾಗುವ ಅಪ್ಲಿಕೇಶನ್ ಅಷ್ಟೇ. ಹೀಗಾಗಿ ಅದರ ಹಿಂದಿರುವ Exchange Online ಸೇವೆಯೇ ಸ್ಥಗಿತಗೊಂಡರೆ ಔಟ್ಲುಕ್ ಆ್ಯಪ್ ತೆರೆದರೂ ಇನ್ಬಾಕ್ಸ್ ಲೋಡ್ ಆಗುವುದಿಲ್ಲ. ಇಮೇಲ್ ಕಳುಹಿಸಲು ಅಥವಾ ಸ್ವೀಕರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.
ದೊಡ್ಡ ಮಟ್ಟದ ತಾಂತ್ರಿಕ ಸಮಸ್ಯೆಯ ನಡುವೆಯೂ ಮೈಕ್ರೋಸಾಫ್ಟ್ ಟೀಮ್ಸ್ನ ಪ್ರಮುಖ ಚಾಟ್ ಮತ್ತು ಆನ್ಲೈನ್ ಮೀಟಿಂಗ್ ಫೀಚರ್ಗಳು ಬಹುತೇಕ ಕಾರ್ಯನಿರ್ವಹಿಸುತ್ತಿದ್ದವು ಎಂದು ಕಂಪನಿ ತಿಳಿಸಿದೆ. ಆದರೆ ಹೊಸ ಮೀಟಿಂಗ್ಗಳನ್ನು ಶೆಡ್ಯೂಲ್ ಮಾಡಲು ಅಥವಾ ಕ್ಯಾಲೆಂಡರ್ ತೆರೆಯಲು ಪ್ರಯತ್ನಿಸಿದಾಗ ಬಳಕೆದಾರರಿಗೆ ಸಮಸ್ಯೆ ಎದುರಾಗಿದೆ.
ಸ್ಮಾರ್ಟ್ಫೋನ್ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್ಡೇಟ್. ಡಿಜಿಟಲ್ ಟ್ರೆಂಡ್ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್ಅಪ್ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.