ರಫೇಲ್ ಯುದ್ಧ ವಿಮಾನಗಳಿಗೆ ಬೆಂಗಳೂರಿನಿಂದ ಬಿಡಿಭಾಗ, ದೇವನಹಳ್ಳಿಯಲ್ಲಿ ಹೈಕ್ಯಾಲ್‌ನ ಬೃಹತ್ ಘಟಕ ಆರಂಭ

Published : Oct 06, 2026, 02:28 PM IST
Hical Technologies

ಸಾರಾಂಶ

ಜಾಗತಿಕ ವಾಯುಯಾನ ಮತ್ತು ರಕ್ಷಣಾ ವಲಯಕ್ಕೆ ಬಿಡಿಭಾಗಗಳನ್ನು ತಯಾರಿಸುವ 'ಹೈಕ್ಯಾಲ್‌ ಟೆಕ್ನಾಲಜೀಸ್' ದೇವನಹಳ್ಳಿಯಲ್ಲಿ ತನ್ನ ನೂತನ ಉತ್ಪಾದನಾ ಘಟಕವನ್ನು ಆರಂಭಿಸಿದೆ. ವಾಣಿಜ್ಯ ವಿಮಾನಗಳು ಹಾಗೂ ರಫೇಲ್ ಯುದ್ಧ ವಿಮಾನಗಳಿಗೆ ಬೇಕಾಗುವ ಸಂಕೀರ್ಣ ಸಿಸ್ಟಮ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಜೊತೆಗೆ ಹೊಸೂರಿನಲ್ಲಿಯೂ ಮತ್ತೊಂದು ಬೃಹತ್ ಘಟಕ ನಿರ್ಮಾಣವಾಗುತ್ತಿದ್ದು, ಇದು 'ಆತ್ಮನಿರ್ಭರ್ ಭಾರತ್'ಗೆ ಬಲ ತುಂಬಲಿದೆ.

ಬೆಂಗಳೂರು: ಜಾಗತಿಕ ವಾಯುಯಾನ ಮತ್ತು ರಕ್ಷಣಾ ವಲಯಕ್ಕೆ ಅಗತ್ಯವಾದ ಅತ್ಯಾಧುನಿಕ ಹಾಗೂ ನಿಖರವಾದ ಬಿಡಿಭಾಗಗಳನ್ನು ತಯಾರಿಸುವ ಬೆಂಗಳೂರು ಮೂಲದ ಪ್ರತಿಷ್ಠಿತ 'ಹೈಕ್ಯಾಲ್‌ ಟೆಕ್ನಾಲಜೀಸ್' ದೇವನಹಳ್ಳಿಯಲ್ಲಿ ತನ್ನ ನೂತನ ಉತ್ಪಾದನಾ ಘಟಕವನ್ನು ಆರಂಭಿಸಿದೆ. ಈ ವಿಸ್ತರಣೆಯ ಮೂಲಕ ಜಾಗತಿಕ ಏರೋಸ್ಪೇಸ್ ಮತ್ತು ರಕ್ಷಣಾ ಮಾರುಕಟ್ಟೆಯಲ್ಲಿ ಕಂಪನಿಯು ತನ್ನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.

ಹೊಸ ಘಟಕದ ವಿಶೇಷತೆಗಳೇನು?

ದೇವನಹಳ್ಳಿಯಲ್ಲಿ ತಲೆಎತ್ತಿರುವ ಈ ನೂತನ ಘಟಕವು ಬರೋಬ್ಬರಿ 60,000 ಚದರಡಿ ವಿಸ್ತೀರ್ಣವನ್ನು ಹೊಂದಿದ್ದು, ಬೃಹತ್‌ ಘಟಕವಾಗಿದೆ. ವಾಣಿಜ್ಯ ಬಳಕೆಯ ವಿಮಾನಗಳು ಹಾಗೂ ಭಾರತೀಯ ವಾಯುಪಡೆಯ ಪ್ರಬಲ ರಫೇಲ್ ಯುದ್ಧ ವಿಮಾನಗಳಿಗೆ ಬೇಕಾಗುವ ಸಂಕೀರ್ಣ ಎಲೆಕ್ಟ್ರೋಮ್ಯಾಗ್ನೆಟಿಕ್ಸ್, ಎಲೆಕ್ಟ್ರೋಮೆಕ್ಯಾನಿಕಲ್, ಹೈಡ್ರಾಲಿಕ್ ಮತ್ತು ಕಂಟ್ರೋಲ್ ಸಿಸ್ಟಮ್‌ಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ವಿಶೇಷವೆಂದರೆ ಗ್ರಾಹಕರಿಗೆ ಹೈಕ್ಯಾಲ್‌ನ ಘಟಕಗಳ ಕಾರ್ಯವೈಖರಿ ಮತ್ತು ತಂತ್ರಜ್ಞಾನವನ್ನು ಪರಿಚಯಿಸಲು ವಿಶೇಷವಾದ 'ಅನುಭವ ಕೇಂದ್ರ'ವನ್ನು ಕೂಡ ಇಲ್ಲಿ ನಿರ್ಮಿಸಲಾಗಿದೆ.

ಜಾಗತಿಕ ಬೇಡಿಕೆಗೆ ತಕ್ಕ ಪೂರೈಕೆ

ಹೊಸ ಘಟಕದ ಬಗ್ಗೆ ಮತ್ತಷ್ಟು ವಿವರಗಳನ್ನು ಹಂಚಿಕೊಂಡ ಹೈಕ್ಯಾಲ್‌ ಟೆಕ್ನಾಲಜೀಸ್‌ನ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಯಶಸ್ ಜೈವೀರ್, "ದೇವನಹಳ್ಳಿಯ ಈ ನೂತನ ಘಟಕವು ಜಾಗತಿಕ ಮಟ್ಟದ ಸಂಕೀರ್ಣ ಏರೋಸ್ಪೇಸ್ ಮತ್ತು ರಕ್ಷಣಾ ಯೋಜನೆಗಳಿಗೆ ಅಗತ್ಯ ಬಲ ತುಂಬಲಿದೆ. ನಿಖರತೆ, ವಿಶ್ವಾಸಾರ್ಹತೆ ಮತ್ತು ಶಿಸ್ತಿನೊಂದಿಗೆ ಜಾಗತಿಕ ಗ್ರಾಹಕರ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಇದು ನಮಗೆ ದೊಡ್ಡ ಮಟ್ಟದಲ್ಲಿ ನೆರವಾಗಲಿದೆ," ಎಂದು ಭರವಸೆ ವ್ಯಕ್ತಪಡಿಸಿದರು.

ಹೊಸೂರಿನಲ್ಲಿಯೂ ತಲೆಎತ್ತುತ್ತಿದೆ ಮತ್ತೊಂದು ಬೃಹತ್ ಘಟಕ

ದೇವನಹಳ್ಳಿ ಘಟಕ ಮಾತ್ರವಲ್ಲದೆ, ತಮಿಳುನಾಡಿನ ಹೊಸೂರಿನಲ್ಲಿಯೂ ಹೈಕ್ಯಾಲ್‌ ಟೆಕ್ನಾಲಜೀಸ್ ಬರೋಬ್ಬರಿ 1,60,000 ಚದರಡಿ ವಿಸ್ತೀರ್ಣದ ಬೃಹತ್ ಏರೋಸ್ಪೇಸ್ ಉತ್ಪಾದನಾ ಘಟಕವನ್ನು ನಿರ್ಮಿಸುತ್ತಿದೆ. ಕಳೆದ ಜುಲೈನಲ್ಲಿ ಇದಕ್ಕೆ ಭೂಮಿಪೂಜೆ ನೆರವೇರಿದ್ದು, ಕಾಮಗಾರಿ ಭರದಿಂದ ಸಾಗಿದೆ.

ಹೊಸೂರು ಘಟಕವು ನಿಖರವಾದ ಯಂತ್ರೋಪಕರಣಗಳು ಮತ್ತು ಫ್ಯಾಬ್ರಿಕೇಷನ್‌ಗಾಗಿ ಮೀಸಲಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ 'ಎನ್‌ಎಡಿಸಿಎಪಿʼ ಮಾನ್ಯತೆ ಪಡೆಯುವ ಹಾದಿಯಲ್ಲಿದೆ. ದೇವನಹಳ್ಳಿ ಮತ್ತು ಹೊಸೂರಿನ ಈ ಎರಡೂ ಘಟಕಗಳು ಒಟ್ಟಾಗಿ ಸೇರಿ ಹೈಕ್ಯಾಲ್‌ನ ಉತ್ಪಾದನಾ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಲಿವೆ.

'ಆತ್ಮನಿರ್ಭರ್ ಭಾರತ್'ಗೆ ಬಲ

ಹೈ ಪ್ರೆಸಿಶನ್ ಎಲೆಕ್ಟ್ರೋಮೆಕ್ಯಾನಿಕಲ್ ಸಿಸ್ಟಮ್ಸ್ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಹೈಕ್ಯಾಲ್‌ ಟೆಕ್ನಾಲಜೀಸ್ ವಿಶ್ವದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿಗಳಿಗೆ ನಂಬಿಗಸ್ತ ಪೂರೈಕೆದಾರನಾಗಿದೆ. ಭಾರತದ ರಕ್ಷಣಾ ವಲಯದ ಉತ್ಪಾದನಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಸಂಸ್ಥೆ, ತನ್ನ ಈ ಹೊಸ ವಿಸ್ತರಣೆಯ ಮೂಲಕ ಕೇಂದ್ರ ಸರ್ಕಾರದ ಆತ್ಮನಿರ್ಭರ್ ಭಾರತ್ (ಸ್ವಾವಲಂಬಿ ಭಾರತ) ದೃಷ್ಟಿಕೋನಕ್ಕೆ ಆನೆಬಲ ತಂದುಕೊಟ್ಟಿದೆ.

PREV

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Articles on
click me!

Recommended Stories

ಅಗ್ಗದ ಬೆಲೆಯಲ್ಲಿ ಸ್ಮಾರ್ಟ್​ಫೋನ್ಸ್​​: ಭಾರತದ ಮೊಬೈಲ್ ಕ್ರಾಂತಿ- ಆಮದಿನಿಂದ ರಫ್ತಿನವರೆಗಿನ ಅಚ್ಚರಿ ಪಯಣ
ಸಾಲಮಾಡಿ ಐಫೋನ್ ತಗೋತೀರಾ? ಇರಿ ಸ್ವಲ್ಪ.. ವಿರಾಜಪೇಟೆ ಅಳಿಯ ವಿಜಯ್ ಮಾತು ಒಮ್ಮೆ ಕೇಳಿ, ಆಮೇಲೆ ನಿಮ್ಮಿಷ್ಟ!