ಚುನಾವಣೆಯ ಸಮಗ್ರ ಮಾಹಿತಿ ಒಂದೇ ಕಡೆ ಬೇಕೆ? ಈ ಆ್ಯಪ್‌ ಬಳಸಿ

By Web DeskFirst Published Mar 20, 2019, 3:38 PM IST
Highlights

ಚುನಾವಣಾ ಆಯೋಗದಿಂದ ‘ಚುನಾವಣ’ ಆ್ಯಪ್‌ ಬಿಡುಗಡೆ | ಅಭ್ಯರ್ಥಿ, ಮತಕೇಂದ್ರ ಮುಂತಾದ ಸಂಪೂರ್ಣ ಮಾಹಿತಿ ಲಭ್ಯ

ಬೆಂಗಳೂರು : ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿಗಳ, ಮತಕೇಂದ್ರಗಳ ವಿವರ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಎಲ್ಲಾ ರೀತಿಯ ಮಾಹಿತಿಗಳನ್ನೊಳಗೊಂಡ ‘ಚುನಾವಣ’ ಮೊಬೈಲ್‌ ಆ್ಯಪ್‌ ಅನ್ನು ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಬಿಡುಗಡೆಗೊಳಿಸಿದ್ದಾರೆ.

ಮಂಗಳವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚುನಾವಣ ಮೊಬೈಲ್‌ ಆ್ಯಪ್‌ ಅನ್ನು ಬಿಡುಗಡೆಗೊಳಿಸಿದರು.

ಆ್ಯಪ್‌ನಲ್ಲಿ ಏನೇನಿದೆ?

  • ರಾಜ್ಯದ 58,186 ಮತಗಟ್ಟೆಗಳು ಹೈ ರೆಸಲೂಶನ್‌ ಉಪಗ್ರಹ ಮಾಹಿತಿ
  • ಸಾರ್ವಜನಿಕರಿಗೆ ಮತಗಟ್ಟೆ, ಕ್ಷೇತ್ರಗಳ, ಅಭ್ಯರ್ಥಿಗಳ ವಿವರ
  • ಅಂಗವಿಕಲ ಮತದಾರರಿಗೆ ಸವಲತ್ತು ಒದಗಿಸಲು ನೋಂದಣಿಗೆ ಅವಕಾಶ
  • ಪ್ರತಿ ಎರಡು ಗಂಟೆಗೊಮ್ಮೆ ಕ್ಷೇತ್ರವಾರು ಮತದಾನದ ವಿವರ ಲಭ್ಯ

ರಾಜ್ಯ ವಿಧಾನಸಭಾ ಚುನವಾಣೆ ವೇಳೆ ಅಭಿವೃದ್ಧಿ ಪಡಿಸಿದ ಈ ಮೊಬೈಲ್‌ ಆ್ಯಪ್‌ನಲ್ಲಿ ಮತ್ತಷ್ಟುತಂತ್ರಾಂಶಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ರಾಜ್ಯದ 58,186 ಮತಗಟ್ಟೆಗಳು ಹೈ ರೆಸಲೂಶನ್‌ ಉಪಗ್ರಹ ಮಾಹಿತಿಗಳನ್ನು ಹೊಂದಿದೆ. ಪ್ರತಿ ಮತಗಟ್ಟೆಯ ಗಡಿಯನ್ನು ಮತ್ತು ಆಡಳಿತಾತ್ಮಕ ಗಡಿಯ ರೇಖೆಗಳನ್ನು ಚುನಾವಣಾಧಿಕಾರಿಗಳು ಗುರುತಿಸಲು ಸಹಕಾರಿಯಾಗಿದೆ.

ಸಾರ್ವಜನಿಕರಿಗೆ ಮತಗಟ್ಟೆ, ಕ್ಷೇತ್ರಗಳ, ಅಭ್ಯರ್ಥಿಗಳ ವಿವರ, ಅಂಗವಿಕಲ ಮತದಾರರಿಗೆ ಕುರ್ಚಿಯ ಸವಲತ್ತು ಒದಗಿಸಲು ನೋಂದಣಿ ಸೇರಿದಂತೆ ಹಲವು ಪ್ರಯೋಜನವು ಚುನಾವಣಾ ಮೊಬೈಲ್‌ ಆ್ಯಪ್‌ನಲ್ಲಿದೆ. ಆ್ಯಪ್‌ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌, ಚುನಾವಣ ಮೊಬೈಲ್‌ ಆ್ಯಪ್‌ ಅನ್ನು ಎರಡು ಲಕ್ಷಕ್ಕೂ ಅಧಿಕ ನಾಗರಿಕರು ಬಳಕೆ ಮಾಡಿದ್ದಾರೆ. ಮತದಾರರು ತಮಗೆ ಸಂಬಂಧಪಟ್ಟಮತಗಟ್ಟೆ, ಕ್ಷೇತ್ರದ ವಿವರ, ತಮ್ಮ ಕ್ಷೇತ್ರಗಳ ಅಭ್ಯರ್ಥಿಗಳ ವಿವರ ಸೇರಿದಂತೆ ಹಲವು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ಮತದಾರರು ತಮ್ಮ ಎಪಿಕ್‌ ಸಂಖ್ಯೆಯನ್ನು ಮತ್ತು ಹೆಸರನ್ನು ಹಾಕಬೇಕು ಎಂದು ತಿಳಿಸಿದರು.

ಹಿರಿಯ ನಾಗರಿಕರು ಮತ್ತು ದಿವ್ಯಾಂಗ ಮತದಾರರಿಗೆ ಸಾರಿಗೆ ವ್ಯವಸ್ಥೆ ಮತ್ತು ಗಾಲಿ ಕುರ್ಚಿಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ದಿವ್ಯಾಂಗರು ಮೊಬೈಲ್‌ಗಳ ಮೂಲಕ ಅಧಿಕೃತವಾಗಿ ಮುಂಗಡ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ನಗರ ಪ್ರದೇಶದ ಮತಟ್ಟೆಗಳಲ್ಲಿನ ಸರದಿ ಸಾಲುಗಳ ಬಗ್ಗೆ ಮಾಹಿತಿ ಲಭ್ಯವಾಗಲಿದೆ. ಪ್ರತಿ ಎರಡು ಗಂಟೆಗೊಮ್ಮೆ ಕ್ಷೇತ್ರವಾರು ಮತದಾನ ವಿವರವನ್ನು ಆಪ್‌ಲೋಡ್‌ ಮಾಡಲಾಗುತ್ತದೆ. ಪ್ರತಿ ಸುತ್ತಿನ ಮತ ಎಣಿಕೆಯನ್ನು ನೇರವಾಗಿ ಪ್ರಕಟಿಸಲಾಗುತ್ತದೆ ಎಂದು ವಿವರಿಸಿದರು.

ಇದನ್ನೂ ಓದಿ: ಹಣ-ಹೆಂಡ ಕಂಡ್ರೆ ಹಿಂಗ್ ಮಾಡಿ ಭೇಷ್ ಎನಿಸಿಕೊಳ್ಳಿ!

ಅಭ್ಯರ್ಥಿಗಳು ಮಾತ್ರವಲ್ಲದೇ, ಚುನಾವಣೆಗೆ ನಿಯೋಜನೆಗೊಂಡಿರುವ ಎಲ್ಲಾ ಅಧಿಕಾರಿಗಳ ವಿವರವು ಸಹ ಲಭ್ಯವಾಗಲಿದೆ. ತುರ್ತು ಸಂದರ್ಭದಲ್ಲಿ ಅಗತ್ಯ ಇರುವ ಆಸ್ಪತ್ರೆ, ಪೊಲೀಸ್‌ ಠಾಣೆಗಳ ಸೇರಿದಂತೆ ಸಮೀಪದ ತುರ್ತು ಸೇವೆಗಳ ಸ್ಥಳಗಳ ಮಾಹಿತಿ ಲಭ್ಯ ಇದೆ. ಇದರ ನೆರವಿನಿಂದ ಸಂವಹನ ಯೋಜನೆ, ತುರ್ತು ಸೇವೆಗಳನ್ನು ಪಡೆದುಕೊಳ್ಳಬಹುದು. ರಾಷ್ಟ್ರದಲ್ಲಿಯೇ ಜಿಐಎಸ್‌ ವೇದಿಕೆಯಲ್ಲಿ ನಿರ್ಮಿಸಲಾದ ಮೊದಲ ಚುನಾವಣ ಆ್ಯಪ್‌ ಇದಾಗಿದೆ ಎಂದರು.

click me!