ಕಳುವಾದ ಮೊಬೈಲ್‌ ಪತ್ತೆಗೆ ಹೊಸ ತಂತ್ರಜ್ಞಾನ: ಹೊಸ ಸಿಮ್‌ ಹಾಕಿದರೂ ತಕ್ಷಣ ಮಾಹಿತಿ ಲಭ್ಯ!

By Kannadaprabha News  |  First Published Mar 10, 2023, 7:48 AM IST

ಮೊಬೈಲ್‌ ಕಳ್ಳರಿಗೆ ಅಂಕುಶ ಹಾಕುವ ಕೇಂದ್ರ ಗೃಹ ಇಲಾಖೆಯ ‘ಸೆಂಟ್ರಲ್‌ ಇಕ್ವಿಪ್ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌’ (ಸಿಇಐಆರ್‌) ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ರಾಜ್ಯ ಪೊಲೀಸರು, ಒಂದು ತಿಂಗಳ ಅವಧಿಯಲ್ಲಿ ಕಳ್ಳತನವಾಗಿದ್ದ ಎರಡು ಸಾವಿರ ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ. 


ಬೆಂಗಳೂರು (ಮಾ.09): ಮೊಬೈಲ್‌ ಕಳ್ಳರಿಗೆ ಅಂಕುಶ ಹಾಕುವ ಕೇಂದ್ರ ಗೃಹ ಇಲಾಖೆಯ ‘ಸೆಂಟ್ರಲ್‌ ಇಕ್ವಿಪ್ಮೆಂಟ್‌ ಐಡೆಂಟಿಟಿ ರಿಜಿಸ್ಟರ್‌’ (ಸಿಇಐಆರ್‌) ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿರುವ ರಾಜ್ಯ ಪೊಲೀಸರು, ಒಂದು ತಿಂಗಳ ಅವಧಿಯಲ್ಲಿ ಕಳ್ಳತನವಾಗಿದ್ದ ಎರಡು ಸಾವಿರ ಮೊಬೈಲ್‌ಗಳನ್ನು ಪತ್ತೆ ಹಚ್ಚಿದ್ದಾರೆ. ಮೊಬೈಲ್‌ ಕಳ್ಳತನವಾದ ಕೂಡಲೇ ಸಿಇಐಆರ್‌ ಪೋರ್ಟಲ್‌ನಲ್ಲಿ ತಮ್ಮ ಮೊಬೈಲ್‌ ಇಎಂಐ ಸಮೇತ ನಾಗರಿಕರು ದೂರು ದಾಖಲಿಸಿದರೆ ತಕ್ಷಣವೇ ಮೊಬೈಲ್‌ ಲಾಕ್‌ ಆಗಲಿದೆ. ಇದರಿಂದ ಕಳವಾದ ಮೊಬೈಲನ್ನು ಮತ್ತೊಬ್ಬರು ಬಳಸಲು ಸಾಧ್ಯವಿಲ್ಲ. 

ಈ ವ್ಯವಸ್ಥೆಯನ್ನು ಮೊದಲ ಹಂತವಾಗಿ ಪ್ರಾಯೋಗಿಕವಾಗಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಜಾರಿಗೊಳಿಸಿದ ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು, ಬಳಿಕ ರಾಜ್ಯಾದ್ಯಂತ ವಿಸ್ತರಿಸಿದರು. ಒಂದು ತಿಂಗಳ ಅವಧಿಯಲ್ಲಿ ರಾಜ್ಯಾದ್ಯಂತ ಸಿಇಐಆರ್‌ ಮೂಲಕ ಕಳ್ಳತನವಾಗಿದ್ದ 2 ಸಾವಿರ ಮೊಬೈಲ್‌ಗಳು ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಲಾಗಿದೆ. ಕೇಂದ್ರ ದೂರ ಸಂಪರ್ಕ ಇಲಾಖೆ ಸಹಭಾಗಿತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ ಎಂದು ಡಿಜಿಪಿ ಪ್ರವೀಣ್‌ ಸೂದ್‌ ತಿಳಿಸಿದ್ದಾರೆ.

Tap to resize

Latest Videos

ರಾಜ್ಯದಲ್ಲಿ ಮತ್ತೆ ಮೋದಿ ಹವಾ: ಮಾ.12ರಂದು ಜಗತ್ತಿನ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ ಉದ್ಘಾಟನೆ

ಹೇಗೆ ಸಿಇಐಆರ್‌ ಕಾರ್ಯಾಚರಣೆ: ಪ್ರತಿ ದಿನ ಬೆಂಗಳೂರು ನಗರದಲ್ಲೇ 20ರಿಂದ 30 ಮೊಬೈಲ್‌ಗಳು ಕಳ್ಳತನವಾಗುತ್ತಿದ್ದವು. ಹೀಗಾಗಿ ಮೊಬೈಲ್‌ ಕಳ್ಳರಿಗೆ ಕಡಿವಾಣ ಹಾಕಲು ಕೇಂದ್ರ ದೂರಸಂಪರ್ಕ ಇಲಾಖೆ ಹಾಗೂ ಗೃಹ ಇಲಾಖೆಗಳು ಜಂಟಿಯಾಗಿ ಸಿಇಐಆರ್‌ ಪೋರ್ಟಲ್‌ ರೂಪಿಸಿದ್ದವು. ಈ ಸಿಇಐಆರ್‌ ಪೋರ್ಟಲ್‌ನಲ್ಲಿ ಎಲ್ಲ ಮೊಬೈಲ್‌ ಕಂಪನಿಗಳು ಮೊಬೈಲ್‌ ಬ್ಲಾಕಿಂಗ್‌ ಸಂಬಂಧ ಒಪ್ಪಂದ ಮಾಡಿಕೊಂಡಿವೆ. ಕಳ್ಳತನ ಅಥವಾ ಕಳೆದುಕೊಂಡ ಮೊಬೈಲ್‌ಗಳ ಬಗ್ಗೆ ಸಾರ್ವಜನಿಕರು ದೂರು ದಾಖಲಿಸಿದ ತಕ್ಷಣವೇ ಮೊಬೈಲ್‌ ಲಾಕ್‌ ಆಗಲಿದೆ. ಇದರಿಂದ ಕಳವು ಮಾಡಿದರೂ ಮೊಬೈಲ್‌ ಬಳಸಲು ಅಸಾಧ್ಯ. ಒಂದು ವೇಳೆ ಆ ಮೊಬೈಲ್‌ಗೆ ಬೇರೊಂದು ಸಿಮ್‌ ಅಳವಡಿಸಿದ ಕೂಡಲೇ ಮಾಹಿತಿ ಸಿಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇನ್ನು ಸಿಇಐಆರ್‌ ಬಗ್ಗೆ ಪೊಲೀಸರಿಗೆ ಮಾರ್ಗಸೂಚಿ ನೀಡಲಾಗಿದೆ. ಇದಕ್ಕೆ ಸೈಬರ್‌, ಆರ್ಥಿಕ ಮತ್ತು ಮಾದಕ ವಸ್ತು (ಸಿಇಎನ್‌) ಠಾಣೆ ಇನ್‌ಸ್ಪೆಕ್ಟರನ್ನು ನೋಡಲ್‌ ಅಧಿಕಾರಿ ನೇಮಿಸಲಾಗಿದೆ. ಮೊಬೈಲ್‌ ಕಳ್ಳವಾದ ಬಗ್ಗೆ ಪೊಲೀಸ್‌ ಇಲಾಖೆಯ ಇ-ಲಾಸ್ಟ್‌ನಲ್ಲಿ ದೂರು ದಾಖಲಿಸಬೇಕು. ಇ-ಲಾಸ್ಟ್‌ನಲ್ಲಿ ದೂರು ದಾಖಲಾಗುತ್ತಿದ್ದಂತೆ, ನೋಡಲ್‌ ಅಧಿಕಾರಿ ಸಿಇಐಆರ್‌ಗೆ ಮಾಹಿತಿ ರವಾನೆ ಮಾಡಿ ಮೊಬೈಲ್‌ ಆಕ್ಟಿವೇಷನ್‌ ಸಂಪೂರ್ಣ ಬ್ಲಾಕ್‌ ಮಾಡಿಸುತ್ತಾರೆ. ಇಲ್ಲವಾದರೇ ನೇರವಾಗಿ ಮೊಬೈಲ್‌ ವಾರಸುದಾರರೇ ವೆಬ್‌ಸೈಟ್‌ಗೆ ಹೋಗಿ ಬ್ಲಾಕ್‌ ಮಾಡಲು ಅವಕಾಶ ನೀಡಲಾಗಿದೆ.

ಮೊಬೈಲ್‌ ಸಿಕ್ಕರೆ ಅನ್‌ಲಾಕ್‌: ಕಳ್ಳವಾದ ಮೊಬೈಲ್‌ ಪತ್ತೆಯಾದ ಕೂಡಲೇ ಸಿಇಐಆರ್‌ನಲ್ಲಿ ಮಾಹಿತಿ ಅಪ್‌ಡೇಟ್‌ ಆಗಲಿದೆ. ಆಗ ಸಂಬಂಧಪಟ್ಟ ಪೊಲೀಸ್‌ ಠಾಣೆಗೆ ಮಾಹಿತಿ ರವಾನೆ ಮಾಡಿ ವಾರಸುದಾರರಿಗೆ ಅಧಿಕಾರಿಗಳು ಮರಳಿಸುತ್ತಾರೆ. ಹಾಗೆಯೇ ಲಾಕ್‌ ಆಗಿರುವ ಮೊಬೈಲನ್ನು ಮತ್ತೆ ಬಳಕೆಗೆ ಲಾಕ್‌ ಓಪನ್‌ ಮಾಡುವಂತೆ ವೆಬ್‌ಸೈಟ್‌ನಲ್ಲಿ ಪೊಲೀಸರಿಗೆ ವಾರಸುದಾರರು ಮನವಿ ಸಲ್ಲಿಸಿದರೆ ಅನ್‌ಲಾಕ್‌ ಆಗಲಿದೆ.

ಸುಮಲತಾ ಟು 'ಕಮಲ'ತಾ: ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೇರ್ಪಡೆಯ ಕುರಿತು ಘೋಷಣೆ?

ಮೊಬೈಲ್‌ ಕಳವಾದರೆ ವೆಬ್‌ನಲ್ಲಿ ದೂರು ನೀಡಿ: ಮೊಬೈಲ್‌ ಕಳವು ಅಥವಾ ಕಳವಾದರೆ ಕೂಡಲೇ www.ceir.gov.in ವೆಬ್‌ಸೈಟ್‌ನಲ್ಲಿ ಸಾರ್ವಜನಿಕರು ದೂರು ದಾಖಲಿಸಿ ಮೊಬೈಲ್‌ ಬ್ಲಾಕ್‌ ಮಾಡಿಸಬಹುದು. ಕಳವಾದ ಮೊಬೈಲ್‌ನಲ್ಲಿದ್ದ ಸಿಮ್‌ ಕಾರ್ಡ್‌ ಹೊಸದಾಗಿ ಪಡೆಯಬೇಕು. ಕಳವಾದ ಮೊಬೈಲ್‌ ಮಾಡೆಲ್‌, ಐಎಂಇಐ ನಂಬರ್‌, ಸಿಮ್‌ ನಂಬರ್‌ ನೋಂದಣಿ ಮಾಡಬೇಕು. ಅಲ್ಲದೆ, ಮೊಬೈಲ್‌ಗೆ ಬರುವ ಒಟಿಪಿ ನಮೂದು ಮಾಡಿದರೇ ಕೂಡಲೇ ಮೊಬೈಲ್‌ ಬ್ಲಾಕ್‌ ಆಗಲಿದೆ.

click me!