‘ವಿಕ್ರಮ್’ ಸಂಪರ್ಕಿಸಲು ಇಸ್ರೋಗೆ ಉಳಿದಿರುವುದು ಇನ್ನು ನಾಲ್ಕೇ ದಿನ| 10 ದಿನ ಕಳೆದರೂ ಸಂಪರ್ಕಕ್ಕೆ ಸಿಗಲಿಲ್ಲ ಲ್ಯಾಂಡರ್| 4 ದಿನದಲ್ಲಿ ಪವಾಡ ಆಗದಿದ್ದರೆ ವಿಕ್ರಮ್ ಸೈಲೆಂಟ್
ನವದೆಹಲಿ[ಸೆ.17]: ಚಂದ್ರನ ಅಂಗಳದಲ್ಲಿ ಇನ್ನೇನು ಇಳಿಯುವ ಹಂತದಲ್ಲಿದ್ದಾಗ ಚಂದ್ರಯಾನ-2 ನೌಕೆಯ ‘ವಿಕ್ರಮ್’ ಲ್ಯಾಂಡರ್ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಸಂಪರ್ಕ ಕಡಿದುಕೊಂಡು ಸೋಮವಾರಕ್ಕೆ 10 ದಿನಗಳು ಉರುಳಿವೆ. ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದರೂ, ಲ್ಯಾಂಡರ್ ಸಂಪರ್ಕಕ್ಕೇ ಸಿಗುತ್ತಿಲ್ಲ. ಈ ನೌಕೆಯ ಜೀವಿತಾವಧಿ 14 ದಿನಗಳು ಮಾತ್ರವೇ ಇರುವುದರಿಂದ, ಇನ್ನು 4 ದಿನಗಳಲ್ಲಿ ಪವಾಡ ನಡೆದರಷ್ಟೇ ಸಂಪರ್ಕ ಸಾಧ್ಯವಾಗಲಿದೆ. ಇಲ್ಲದೇ ಹೋದಲ್ಲಿ ‘ವಿಕ್ರಮ್’ ಇನ್ನು ಕನಸು ಮಾತ್ರ.
ಚಂದ್ರನ ಒಂದು ದಿನ ಭೂಮಿಯ 14 ದಿನಕ್ಕೆ ಸಮ. ಸೆ.6ರ ತಡರಾತ್ರಿ ನೌಕೆ ಇಳಿಸುವ ಪ್ರಯತ್ನ ನಡೆಸಿದಾಗ ಚಂದ್ರನಲ್ಲಿ ಹಗಲು ಆರಂಭವಾಗುತ್ತಿತ್ತು. ಸೆ.20-21ರ ವೇಳೆಗೆ ಚಂದ್ರನಲ್ಲಿ ಕತ್ತಲು ಕವಿಯಲಿದೆ. ಮತ್ತೆ ಸೂರ್ಯನ ಬೆಳಕು ಬೀಳಲು 14 ದಿನಗಳಾಗುತ್ತವೆ. ಅಲ್ಲಿವರೆಗೂ ವಿದ್ಯುತ್ ಸಂಪರ್ಕವಿಲ್ಲದೇ, ವಿಕ್ರಮ್ ಲ್ಯಾಂಡರ್ ಸ್ತಬ್ಧವಾಗಿಬಿಡುತ್ತದೆ. ಹೀಗಾಗಿ ಇಸ್ರೋಗೆ ಕೇವಲ 4 ದಿನಗಳ ಸಮಯಾವಕಾಶವಿದೆ. ಅಷ್ಟರೊಳಗೆ ನೌಕೆಯನ್ನು ಸಂಪರ್ಕಿಸುವ ಒತ್ತಡಕ್ಕೆ ವಿಜ್ಞಾನಿಗಳು ಸಿಲುಕಿದ್ದಾರೆ.
undefined
ಇಂದು ಲ್ಯಾಂಡರ್ ಚಿತ್ರ ಸೆರೆ ಹಿಡಿಯಲು ನಾಸಾ ಯತ್ನ
ನವದೆಹಲಿ: ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ಅವಿರತ ಪ್ರಯತ್ನ ನಡೆಸುತ್ತಿರುವ ಇಸ್ರೋ ವಿಜ್ಞಾನಿಗಳು ಇದೇ ವೇಳೆ ನಾಸಾದ ನೆರವನ್ನೂ ಪಡೆದುಕೊಂಡಿದ್ದಾರೆ. ಚಂದ್ರಯಾನ-2 ಆರ್ಬಿಟರ್‌ನಂತೆಯೇ ನಾಸಾದ ಉಪಕರಣ ಕೂಡ ಚಂದ್ರನನ್ನು ಸುತ್ತುತ್ತಿದೆ. ಅದು, ವಿಕ್ರಮ್ ಬಿದ್ದಿರುವ ಸ್ಥಳದ ಮೇಲೆ ಮಂಗಳವಾರ ಹಾದುಹೋಗಲಿದೆ. ಅದನ್ನು ಬಳಸಿಕೊಂಡು ಲ್ಯಾಂಡರ್‌ನ ಚಿತ್ರ ತೆಗೆಯಲು ನಾಸಾ ಪ್ರಯತ್ನಿಸುತ್ತಿದೆ. ತಾನು ತೆಗೆದ ಚಿತ್ರವನ್ನು ನಾಸಾ ಬೆಂಗಳೂರಿನ ಬ್ಯಾಲಾಳುವಿನಲ್ಲಿರುವ ಇಸ್ರೋದ ಕಚೇರಿಗೆ ಕಳುಹಿಸಲಿದೆ.
ಮತ್ತೊಂದೆಡೆ, ನಾಸಾ ತನ್ನ ಡೀಪ್ ಸ್ಪೇಸ್ ನೆಟ್‌ವರ್ಕ್ ಬಳಸಿಕೊಂಡು ವಿಕ್ರಮ್‌ಗೆ ಸಿಗ್ನಲ್‌ಗಳನ್ನು ಕಳುಹಿಸುತ್ತಿದೆ. ಆದರೆ ಅತ್ತ ಕಡೆಯಿಂದ ಪ್ರತಿಕ್ರಿಯೆ ಬರುತ್ತಿಲ್ಲ ಎಂದು ವರದಿಗಳು ತಿಳಿಸಿವೆ.