ಕಾಂಗ್ರೆಸ್ ವಿವಾದದ ಅನಾಲಿಟಿಕಾ ಬಂದ್

First Published May 3, 2018, 9:58 AM IST
Highlights

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ನೆರವಾಗಿದ್ದ ಆರೋಪ ಹೊತ್ತಿದ್ದ ಮತ್ತು ಭಾರತದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳಿಗೆ ರಾಜಕೀಯ ತಂತ್ರಗಾರಿಕೆಗೆ ನೆರವು ನೀಡಿದ್ದ ಬ್ರಿಟನ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಕಂಪನಿಯನ್ನು ಬುಧವಾರದಿಂದಲೇ ಜಾರಿಗೆ ಬರುವಂತೆ ಮುಚ್ಚಲು ನಿರ್ಧರಿಸಲಾಗಿದೆ. 

ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಗೆ ನೆರವಾಗಿದ್ದ ಆರೋಪ ಹೊತ್ತಿದ್ದ ಮತ್ತು ಭಾರತದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳಿಗೆ ರಾಜಕೀಯ ತಂತ್ರಗಾರಿಕೆಗೆ ನೆರವು ನೀಡಿದ್ದ ಬ್ರಿಟನ್ ಮೂಲದ ಕೇಂಬ್ರಿಜ್ ಅನಾಲಿಟಿಕಾ ಕಂಪನಿಯನ್ನು ಬುಧವಾರದಿಂದಲೇ ಜಾರಿಗೆ ಬರುವಂತೆ ಮುಚ್ಚಲು ನಿರ್ಧರಿಸಲಾಗಿದೆ. 
ಕೇಂಬ್ರಿಜ್ ಅನಾಲಿಟಿಕಾ ಮಾತ್ರ ವಲ್ಲದೆ, ಅದರ ಮಾತೃಸಂಸ್ಥೆಯಾದ ಎಸ್‌ಸಿಎಲ್ ಗ್ರೂಪ್ ಅನ್ನು ಕೂಡಾ ಮುಚ್ಚಲಾಗುತ್ತಿದೆ ಎಂದು ಅಮೆರಿಕ ವಾಲ್‌ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿ ಮಾಡಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ವೇಳೆ ಫೇಸ್  ಬುಕ್ ಮಾಹಿತಿ ಕದ್ದು, ಅದನ್ನು ಟ್ರಂಪ್ ಪರವಾಗಿ ತಿರುಚಲು ಬಳಸಿಕೊಂಡಿತ್ತು ಎಂಬ ಗಂಭೀರ ಆರೋಪ ಕೇಂಬ್ರಿಜ್ ಅನಾಲಿಟಿಕಾ ವಿರುದ್ಧ ಕೇಳಿಬಂದಿತ್ತು.

ಬಳಿಕ ಭಾರತೀಯರೂ ಸೇರಿದಂತೆ 8 ಕೋಟಿ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು  ಸಂಶೋಧಕರೊಬ್ಬರಿಂದ ಅಕ್ರಮವಾಗಿ ಪಡೆದುಕೊಂಡಿದ್ದ ಆರೋಪಕ್ಕೆ ತುತ್ತಾಗಿತ್ತು. ಇದು ವಿಶ್ವದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಅಮೆರಿಕ ಮತ್ತು ಬ್ರಿಟನ್ ಸರ್ಕಾರಗಳು, ಸ್ವತಃ ಫೇಸ್ ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್‌ಗೆ ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸಮನ್ಸ್ ನೀಡಿದ್ದವು.
ಅದರ ಬೆನ್ನಲ್ಲೇ ಕೇಂಬ್ರಿಜ್ ಅನಾಲಿಟಿಕಾ ಕಂಪನಿಯ ಸಿಇಒ ಅಲೆಕ್ಸಾಂಡರ್ ನಿಕ್ಸ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರ ಹೊರತಾಗಿಯೂ ಮಾಧ್ಯಮಗಳಲ್ಲಿ ಕಂಪನಿ ವಿರುದ್ಧ ಭಾರೀ ಪ್ರಮಾಣದಲ್ಲಿ ಸುದ್ದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ, ಕಂಪನಿ ಗ್ರಾಹಕರ ಕೊರತೆ ಎದುರಿಸುವಂತಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಅಮೆರಿಕದಲ್ಲಿನ ತನ್ನ ಘಟಕಗಳನ್ನು ಮುಚ್ಚಲು ಅದು ನಿರ್ಧರಿಸಿದೆ.

click me!